ಭಕ್ತರ ಭಂಡಾರದ ಕುಟೀರ ಲೋಕಾರ್ಪಣೆ ಜು.6ಕ್ಕೆ: ರೇವಣ್ಣ

| N/A | Published : Jul 04 2025, 07:29 AM IST

HM Revanna

ಸಾರಾಂಶ

ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾಮಠದಲ್ಲಿ ನಿರ್ಮಿಸಲಾಗಿರುವ ‘ಭಕ್ತರ ಭಂಡಾರದ ಕುಟೀರ’ ಜುಲೈ 6ರಂದು ಲೋಕಾರ್ಪಣೆಗೊಳ್ಳಲಿದೆ.

ಬೆಂಗಳೂರು :  ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ ಅವರ 19ನೇ ವರ್ಷದ ಪುಣ್ಯಾರಾಧನೆ ಸ್ಮರಣಾರ್ಥ ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾಮಠದಲ್ಲಿ ನಿರ್ಮಿಸಲಾಗಿರುವ ‘ಭಕ್ತರ ಭಂಡಾರದ ಕುಟೀರ’ ಜುಲೈ 6ರಂದು ಲೋಕಾರ್ಪಣೆಗೊಳ್ಳಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಶ್ರೀಮಠದ ಟ್ರಸ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ.ರೇವಣ್ಣ ಅವರು, ಭಕ್ತರಿಂದ ದೇಣಿಗೆಯಾಗಿ ಪಡೆದು ಸುಮಾರು ₹6 ಕೋಟಿ ವೆಚ್ಚದಲ್ಲಿ ಭಕ್ತರ ಭಂಡಾರದ ಕುಟೀರ ನಿರ್ಮಿಸಲಾಗಿದೆ. ಈ ಮೂರು ಅಂತಸ್ತಿನ ಶಾಖಾ ಮಠವು ಸುಸಜ್ಜಿತವಾಗಿದ್ದು, ಶ್ರೀ ಮಠದಲ್ಲಿ ಪ್ರತಿ ಶನಿವಾರ ಸತ್ಸಂಗ, 4ನೇ ಶನಿವಾರ ಕುರುಬ ಸಮಾಜದ ಕಾರ್ಯಾಗಾರಗಳು ನಡೆಯಲಿವೆ ಎಂದರು.

ಜುಲೈ 5ರಂದು ಸಂಜೆ 6ಕ್ಕೆ ಶ್ರೀ ಗುರು ಪ್ರವೇಶ ಮತ್ತು ಧಾರ್ಮಿಕ ಸಭೆ ನಡೆಯಲಿದೆ. ಬೆಂಗಳೂರಿನ ಕೈಲಾಸಾಶ್ರಮ ಮಹಾಸಂಸ್ಥಾನ ಮಠದ ಜಯೇಂದ್ರಪುರಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ, ಕುಂಚಿಟಿಗರ ಮಹಾಸಂಸ್ಥಾನ ಗುರುಪೀಠದ ಡಾ.ಶಾಂತವೀರ ಸ್ವಾಮೀಜಿ, ಶಿವಮೊಗ್ಗದ ಕುರುಬರ ಜಡೆದೇವರ ಮಠದ ಅಮೋಘಸಿದ್ದೇಶ್ವರಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದರು.

ಜು.6ರ ಸಮಾರಂಭದಲ್ಲಿ ಹೊಸದುರ್ಗದ ಶ್ರೀ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಸಚಿವರಾದ ಭೈರತಿ ಸುರೇಶ್‌, ಸತೀಶ್‌ ಜಾರಕಿಹೊಳಿ, ಎಸ್‌.ಎಸ್‌.ಮಲ್ಲಿಕಾರ್ಜುನ, ಸಂತೋಷ್‌ ಲಾಡ್‌, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ ಎಚ್‌.ವಿಶ್ವನಾಥ್‌, ಎಂಟಿಬಿ ನಾಗರಾಜ್‌, ಬಂಡೆಪ್ಪ ಕಾಶಂಪೂರ್‌ ಸೇರಿದಂತೆ ಮತ್ತಿತರರ ಗಣ್ಯರು ಪಾಲ್ಗೊಳ್ಳುವರು ಎಂದು ಹೇಳಿದರು.

ವಿಧಾನ ಪರಿಷತ್ತು ನಿಕಟಪೂರ್ವ ಸಭಾಪತಿ ರಘುನಾಥರಾವ್‌ ಮಲ್ಕಾಪೂರೆ, ಕಾಗಿನೆಲೆ ಕನಕ ಗುರುಪೀಠದ ಕಾರ್ಯದರ್ಶಿ ಮಂಜಪ್ಪ ಉಪಸ್ಥಿತರಿದ್ದರು.

ಸಿಎಂ ಉದ್ಘಾಟನೆ

ಜುಲೈ 6ರಂದು ಬೆಳಗ್ಗೆ 11ಕ್ಕೆ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಖಾಮಠವನ್ನು ಲೋಕಾರ್ಪಣೆ ಮಾಡುವರು. ಮೇಘಾಲಯ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್‌ ಕಾರ್ಯಕ್ರಮದ ಜ್ಯೋತಿ ಬೆಳಗಿಸುವರು ಎಂದು ರೇವಣ್ಣ ತಿಳಿಸಿದರು.

Read more Articles on