ಧರ್ಮಸ್ಥಳ ಸತ್ಯಾಂಶ, ಷಡ್ಯಂತ್ರ ಬಗ್ಗೆ ನಾಡಿದ್ದು ಸದನಕ್ಕೆ ಪರಂ ಉತ್ತರ : ಡಿಕೆ

| N/A | Published : Aug 16 2025, 05:48 AM IST

Dk Shivakumar
ಧರ್ಮಸ್ಥಳ ಸತ್ಯಾಂಶ, ಷಡ್ಯಂತ್ರ ಬಗ್ಗೆ ನಾಡಿದ್ದು ಸದನಕ್ಕೆ ಪರಂ ಉತ್ತರ : ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಡೆದಿರುವ ಷಡ್ಯಂತ್ರ ಸೇರಿ ಉಳಿದೆಲ್ಲ ವಿಚಾರಗಳನ್ನು ಗೃಹ ಸಚಿವರೇ ಸೋಮವಾರ ಸದನದಲ್ಲಿ ವಿವರಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು : ಧರ್ಮಸ್ಥಳ ಗ್ರಾಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಪ್ರಕರಣದಲ್ಲಿ ನಡೆದಿರುವ ಷಡ್ಯಂತ್ರ ಸೇರಿ ಉಳಿದೆಲ್ಲ ವಿಚಾರಗಳನ್ನು ಗೃಹ ಸಚಿವರೇ ಸೋಮವಾರ ಸದನದಲ್ಲಿ ವಿವರಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಪರ ಅಥವಾ ವಿರುದ್ಧದ ವಿಚಾರವಲ್ಲ. ಎಲ್ಲ ಪ್ರಕ್ರಿಯೆಗಳು ನ್ಯಾಯಬದ್ಧವಾಗಿ ನಡೆಯಬೇಕು ಎಂಬುದು ಸರ್ಕಾರದ ಅಭಿಪ್ರಾಯ. ಧರ್ಮಸ್ಥಳವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಭಕ್ತಿ, ಶ್ರದ್ಧಾ ಪ್ರಕ್ರಿಯೆಗಳ ಮೇಲೆ ನನಗೆ ನಂಬಿಕೆ, ಆತ್ಮವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಅಲ್ಲಿ ನಡೆದಿರುವ ಷಡ್ಯಂತ್ರ ಹೊರಬರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಪ್ರಕರಣದಲ್ಲಿ ನಡೆದಿರುವ ಷಡ್ಯಂತ್ರ ಸೇರಿ ಉಳಿದ ಎಲ್ಲ ವಿಚಾರಗಳನ್ನು ಗೃಹ ಸಚಿವರೇ ಸೋಮವಾರ ಸದನದಲ್ಲಿ ವಿವರಿಸಲಿದ್ದಾರೆ. ಆ ಮೂಲಕ ಸತ್ಯಾಂಶವನ್ನು ರಾಜ್ಯದ ಮುಂದೆ ತಿಳಿಸಲಿದ್ದಾರೆ. ಮುಖ್ಯಮಂತ್ರಿ ಅವರಿಗೂ ಈ ವಿಚಾರದಲ್ಲಿ ಬದ್ಧತೆಯಿದೆ. ಯಾರೂ ಸುಳ್ಳು, ಷಡ್ಯಂತ್ರ ಮೂಲಕ ಅಪಮಾನ, ಅಪಪ್ರಚಾರ ನಡೆಸುವಂತಿಲ್ಲ ಎಂದು ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ. 

ಸುಳ್ಳು ಆರೋಪ ಮಾಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ನಾವು ನಡೆಯುತ್ತಿದ್ದು, ಕಾನೂನು ಎಲ್ಲರಿಗೂ ಒಂದೇ. ನಾವು ಅದನ್ನು ಕಾಪಾಡಬೇಕು. ಇಲ್ಲಿ ನಾವು ಯಾರನ್ನೂ ರಕ್ಷಿಸುವುದಿಲ್ಲ. ಅನಗತ್ಯವಾಗಿ ಯಾರ ತೇಜೋವಧೆಯೂ ಮಾಡುವಂತಿಲ್ಲ ಎಂದರು.

Read more Articles on