ಸಾರಾಂಶ
ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಯೋಗ ತರಬೇತಿ ನೀಡುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು
ಬೆಂಗಳೂರು : ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಯೋಗ ತರಬೇತಿ ನೀಡುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಪ್ರಾಥಮಿಕ ಮತ್ತು ಫ್ರೌಢಶಾಲೆಗಳಲ್ಲಿ ಯೋಗ ಶಿಕ್ಷಣ ಕಡ್ಡಾಯ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಉತ್ತಮ ಸಲಹೆ ನೀಡಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದಲೂ ಇದು ಒಳ್ಳೆಯ ಕಾರ್ಯಕ್ರಮ. ಶಾಲೆಗಳಲ್ಲಿ ಈಗಾಗಲೇ ಇರುವ ದೈಹಿಕ ಶಿಕ್ಷಕರಿಗೆ ಯೋಗದ ಬಗ್ಗೆ ತರಬೇತಿ ನೀಡಬೇಕು. ಬಳಿಕ ಈ ಶಿಕ್ಷಕರು ಮಕ್ಕಳಿಗೆ ಕಲಿಸಬೇಕಿದೆ. ಈ ಬಗ್ಗೆ ಶಿಕ್ಷಣ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ಯೋಗದಿಂದ ಬಹಳಷ್ಟು ಉಪಯೋಗವಿದೆ. ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಯೋಗ ಕಲಿಸಿಕೊಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗುವುದು. ರಾಜ್ಯದಲ್ಲಿ ದೈಹಿಕ ಶಿಕ್ಷಕರು ಸೇರಿ 29 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದು ಭರ್ತಿ ಮಾಡುವ ಸಂಬಂಧ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿ ‘ಯೋಗ ಮಂದಿರ’ ಸ್ಥಾಪನೆ: ಸಚಿವ
ರಾಜ್ಯದಲ್ಲಿ ಹೆಚ್ಚಿನ ಜನರಿಗೆ ಯೋಗ ಪರಿಚಯಿಸಲು ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ‘ಯೋಗ ಮಂದಿರ’ ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ವಿಧಾನಸೌಧ ಆವರಣದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು, ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಹಸಿರು ಯೋಗ ಕಾರ್ಯಕ್ರಮದಡಿ 1 ಲಕ್ಷ ಸಸಿಗಳನ್ನು ನೆಡಲಾಗುವುದು. ಯೋಗ ಪರಿಚಯಿಸಲು ಆಸ್ಪತ್ರೆಗಳಲ್ಲಿ ಯೋಗ ಮಂದಿರ ಸ್ಥಾಪಿಸಲಾಗುವುದು. ಮೈಸೂರು ಜಿಲ್ಲೆಯನ್ನು ಯೋಗ ಜಿಲ್ಲೆಯಾಗಿ ನಿರ್ಮಿಸುವತ್ತ ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಮನೆಯಲ್ಲಿ ಒಬ್ಬರಾದರೂ ಯೋಗಭ್ಯಾಸ ನಡೆಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಗುರಿ ಹೊಂದಲಾಗಿದೆ. ದೇಶದಲ್ಲಿಯೇ ಇದು ಹೊಸ ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು.
;Resize=(690,390))
)
)

;Resize=(128,128))
;Resize=(128,128))