ಬ್ರಾಹ್ಮಣರಲ್ಲಿ ವಿವಾಹ ಹೆಚ್ಚಿದ ವಿಚ್ಛೇದನ - ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆತಂಕ

| Published : Jan 19 2025, 11:18 AM IST

divorce
ಬ್ರಾಹ್ಮಣರಲ್ಲಿ ವಿವಾಹ ಹೆಚ್ಚಿದ ವಿಚ್ಛೇದನ - ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಾಹ್ಮಣ ಸಮುದಾಯದಲ್ಲಿ ವಿವಾಹ ವಿಚ್ಛೇದನ ಸಮಸ್ಯೆ ಹೆಚ್ಚಾಗಿದೆ. ವಿಪ್ರ ಸಮುದಾಯ ಹಿಂದೆಂದಿಗಿಂತಲೂ ಹೆಚ್ಚಿನ ಸಮಸ್ಯೆಯಲ್ಲಿ ಸಿಲುಕಿದೆ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

 ಬೆಂಗಳೂರು : ಬ್ರಾಹ್ಮಣ ಸಮುದಾಯದಲ್ಲಿ ವಿವಾಹ ವಿಚ್ಛೇದನ ಸಮಸ್ಯೆ ಹೆಚ್ಚಾಗಿದೆ. ವಿಪ್ರ ಸಮುದಾಯ ಹಿಂದೆಂದಿಗಿಂತಲೂ ಹೆಚ್ಚಿನ ಸಮಸ್ಯೆಯಲ್ಲಿ ಸಿಲುಕಿದೆ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಭಾರತೀತೀರ್ಥ ಸಭಾಂಗಣದಲ್ಲಿ ಶನಿವಾರ ನಡೆದ ‘ಬ್ರಾಹ್ಮಣ ಮಹಾ ಸಮ್ಮೇಳನ ಸುವರ್ಣ ಸಂಭ್ರಮ’ ಸಮಾರಂಭದಲ್ಲಿ ಮಾತನಾಡಿದ ಅವರು, ಬ್ರಾಹ್ಮಣರಲ್ಲಿ ವೈವಾಹಿಕ ಸಂಬಂಧಿತ ತೊಂದರೆಗಳು ವಿಪರೀತವಾಗಿವೆ. ವಿವಾಹ ನಿಶ್ಚಯ, ದಾಂಪತ್ಯ ಜೀವನ, ವಿಚ್ಛೇದನಗಳು ಹೆಚ್ಚಾಗಿವೆ. ಇದು ಸಂಸ್ಕಾರವಂತ, ಬುದ್ಧಿವಂತ ಸಮುದಾಯದ ಲಕ್ಷಣವೇ?. ಹೀಗಾಗಿ ವಿವಾಹ ಸಮಸ್ಯೆಗಳನ್ನು ಸರಿಪಡಿಸುವ ಅಗತ್ಯವಿದೆ ಎಂದರು.

ಇವುಗಳ ಪರಿಹಾರ ದೃಷ್ಟಿಯಿಂದ ಹೆಣ್ಣುಮಕ್ಕಳಿಗೆ ದಶಹೋಮ, ಕನ್ಯಾಸಂಸ್ಕಾರ, ಮಾರ್ಗದರ್ಶಕ ಶಿಬಿರ ನೀಡಿ ಅವರು ಬದುಕಿನಲ್ಲಿ ಧರ್ಮವನ್ನು ಅನುಸರಿಸಿಕೊಂಡು ಹೋಗಬೇಕು. ದಂಪತಿ ಶಿಬಿರದ ಮೂಲಕ ವಿಚ್ಛೇದನ ತಡೆಯುವ ಕೆಲಸ ವ್ಯಾಪಕವಾಗಬೇಕು. ಈ ನಿಟ್ಟಿನಲ್ಲಿ ಬ್ರಾಹ್ಮಣ ಮಹಾಸಭಾ ಕೆಲಸ ಮಾಡಿ ಬ್ರಾಹ್ಮಣ ಸಮುದಾಯವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಬ್ರಾಹ್ಮಣರು ಹಿಂದೂಗಳ ಒಗ್ಗೂಡಿಸಿ: ಪ್ರಹ್ಲಾದ್‌ ಜೋಶಿ

ಬ್ರಾಹ್ಮಣ ಸಮುದಾಯವರು ಸಮುದಾಯದ ಸಂಘಟನೆ ಜೊತೆಗೆ ಒಟ್ಟಾರೆ ಹಿಂದೂ ಸಮಾಜವನ್ನು ಒಂದಾಗಿಸಿ ದೇಶವನ್ನು ಒಂದಾಗಿಸಲು ಶ್ರಮಿಸಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಶನಿವಾರ ಬ್ರಾಹ್ಮಣ ಮಹಾ ಸಮ್ಮೇಳನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈ ಹಿಂದೆ ಮೊಗಲರು, ಬ್ರಿಟಿಷರು ಸೇರಿ ಅನೇಕ ವಿದೇಶಿ ದಾಳಿಕೋರರು ದೇಶದ ನಮ್ಮ ಸನಾತನ ಹಿಂದೂ ಧರ್ಮ ಮತ್ತು ಇಲ್ಲಿನ ಸಂಸ್ಕೃತಿ ನಾಶ ಮಾಡಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಆದರೆ, ಇಂದು ನಮ್ಮ ದೇಶದಲ್ಲೇ ಹುಟ್ಟಿ ಬೆಳೆದಿರುವ ವ್ಯಕ್ತಿಗಳು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ, ಬ್ರಾಹ್ಮಣರು ಸನಾತನ ಹಿಂದೂ ಸಮಾಜವನ್ನು ಉಳಿಸಲು, ಒಂದಾಗಿಸಲು ಶ್ರಮಿಸಬೇಕು ಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು, ರಾಮಮಂದಿರ ನಿರ್ಮಾಣ, ಕಾಶ್ಮೀರದ ಶಾರದಾ ಪೀಠಕ್ಕೆ ಭಾರತೀಯರಿಗೆ ಪ್ರವೇಶ ಸೇರಿ ಅನೇಕ ವಿಚಾರಗಳು ಅನುಷ್ಠಾನಗೊಂಡಿದ್ದು, ಹಿಂದೂ ಸಮಾಜದ ಒಗ್ಗಟ್ಟಿನ ಕಾರಣದಿಂದ. ಬ್ರಾಹ್ಮಣರು ಗುಣಕ್ಕೆ ಪ್ರಾಧಾನ್ಯತೆ ನೀಡುತ್ತಾರೆ. ಉತ್ತಮ ಗುಣಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣ ಎಂದರೆ ಭಗವಂತನನ್ನು ಅನ್ವೇಷಣೆ ಮಾಡುವವರು ಎಂದು ಸಚಿವ ಜೋಶಿ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಬ್ರಾಹ್ಮಣ ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಆದ ಪ್ರಭಾವ ಹೊಂದಿದೆ. ಭಾರತದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಈ ಸಮಾಜ ಬಹುಮುಖ್ಯ ಪಾತ್ರವಹಿಸಿದೆ. ಆಚಾರ್ಯತ್ರಯರಿಂದ ಹಿಡಿದು ಭಾರತರತ್ನ ಸಿ.ಎನ್.ಆರ್. ರಾವ್‌ವರೆಗೆ ಅನೇಕ ಗಣ್ಯರು ಈ ದೇಶದ ಅಭಿವೃದ್ಧಿ, ಪ್ರಗತಿಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕೇಂದ್ರದ ಕಾರ್ಮಿಕ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಸಮಾಜ ಒಡೆದು ಹೋಗುತ್ತದೆ. ಅದರ ಲಾಭವನ್ನು ಬೇರೆ ಧರ್ಮದವರು ಪಡೆಯುತ್ತಾರೆ. ಬಾಂಗ್ಲಾದೇಶದ ಪರಿಸ್ಥಿತಿಯನ್ನು ನಾವು ಗಮನಿಸಿ ಒಗ್ಗಟ್ಟಾಗಿರುವ ಅಗತ್ಯವಿದೆ. ದೇಶ, ಧರ್ಮ, ಸಂಸ್ಕೃತಿ, ಪರಂಪರೆ ಉಳಿಸಲು ಪ್ರಯತ್ನಿಸಬೇಕು ಎಂದರು.

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣ ಸಮಾಜ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದೆ. ಇದುವೇ ಬ್ರಾಹ್ಮಣ್ಯದ ಸಂಕೇತ. ವೇದ, ಉಪನಿಷತ್ತು, ಭಾಗವತದ ಪ್ರಾರ್ಥನೆ ಜೊತೆಗೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಸಮಾಜದ ಎಲ್ಲರ ಹಿತಕ್ಕಾಗಿ ಕಷ್ಟಪಡುವುದೇ ತಪಸ್ಸು. ಸ್ವಾರ್ಥಕ್ಕಾಗಿ ಪ್ರಯತ್ನ ಮಾಡುವುದು ತಾಪತ್ರಯ. ಹೀಗಾಗಿ, ಸಮಾಜದ ಎಲ್ಲರ ಒಳಿತಿಗಾಗಿ ತಪಸ್ಸು ಮಾಡಬೇಕು ಎಂದು ಕರೆ ನೀಡಿದರು.

ಶಾಸಕರಾದ ಶ್ರೀವತ್ಸ, ರವಿಸುಬ್ರಹ್ಮಣ್ಯ, ರಾಮಮೂರ್ತಿ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಮಕ್ಕಳಿಗೆ ಸಂಸ್ಕಾರ ನೀಡಿ: ಶೃಂಗೇರಿಶ್ರೀ

ಬ್ರಾಹ್ಮಣರಲ್ಲಿ ಹೆಚ್ಚಿನ ಸಂತಾನ ಆಗಬೇಕು ಎಂಬುದರ ಜೊತೆಗೆ ಇರುವ ಮಕ್ಕಳಿಗೆ ಅಗತ್ಯ ಸಂಸ್ಕಾರ ನೀಡುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿ ಎಂದು ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕರೆಕೊಟ್ಟರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಭಾರತೀತೀರ್ಥ ಸಭಾಂಗಣದಲ್ಲಿ ಶನಿವಾರ ನಡೆದ ‘ಬ್ರಾಹ್ಮಣ ಮಹಾ ಸಮ್ಮೇಳನ ಸುವರ್ಣ ಸಂಭ್ರಮ’ ಸಮಾರಂಭ ಉದ್ಘಾಟಿಸಿ ಅನುಗ್ರಹ ಭಾಷಣ ಮಾಡಿದರು.

ವಂಶವೃದ್ಧಿ ಆಗಬೇಕು ಎಂಬುದು ನಿಜ. ಆದರೆ, ಹಲವು ಮಕ್ಕಳಿದ್ದು ಅವರಲ್ಲಿ ಸಂಸ್ಕಾರವಿಲ್ಲವೆಂದರೆ ಪ್ರಯೋಜನವಿಲ್ಲ. ಇರುವಂಥ ಮಕ್ಕಳಿಗೆ ಸಂಸ್ಕಾರ ಕೊಡುವ ಪ್ರಯತ್ನ ಎಲ್ಲರೂ ಮಾಡಬೇಕು. ಈ ಮೂಲಕ ಧರ್ಮ ಕಾಪಾಡಿಕೊಳ್ಳುವ ಕೆಲಸ ಆಗಬೇಕು. ಧರ್ಮ ರಕ್ಷಣೆ ಪ್ರಯತ್ನ ಪ್ರತಿಯೊಂದು ಮನೆಯಲ್ಲೂ ಆಗಬೇಕು ಎಂದು ಸಲಹೆ ನೀಡಿದರು.

ಬ್ರಾಹ್ಮಣ್ಯದ ರಕ್ಷಣೆಗೆ ಕಟಿಬದ್ಧರಾಗಬೇಕು. ಅದಕ್ಕಾಗಿ ಸಂಧ್ಯಾವಂದನೆ, ದೇವತಾ ಅರ್ಚನೆ ಮಾಡಬೇಕು. ಜನಿವಾರ ಕಡ್ಡಾಯವಾಗಿ ಧರಿಸಿರಬೇಕು. ಧರ್ಮ ರಕ್ಷಣೆಗೆ ಸಮಯೋಚಿತ ಮಾರ್ಗ ಅನುಸರಿಸಬೇಕು. ದೇಶ ಹಾಗೂ ಧರ್ಮವನ್ನು ಪ್ರಧಾನವಾಗಿಟ್ಟುಕೊಂಡು ಜೀವನ ನಡೆಸಿ. ಯಾವುದೇ ರೀತಿಯ ಸಂಕಷ್ಟಗಳು ಬಂದರೂ ಅವನ್ನು ಎದುರಿಸಲು ಸಿದ್ಧರಾಗಿರಬೇಕು ಎಂದರು.

ವಿವಾಹ ಎಂಒಯು ಅಲ್ಲ: ವಿವಾಹ ಎಂದರೆ ಶಾಸ್ತ್ರೀಯವಾದ ಸಂಸ್ಕಾರ. ಎರಡು, ಮೂರು ವರ್ಷ ಜೊತೆಗಿದ್ದು, ನಂತರ ಬೇರೆಯಾಗುವುದಕ್ಕೆ ವಿವಾಹ ಎರಡು ಕಂಪನಿಗಳ ನಡುವಣ ಎಂಒಯು ಅಲ್ಲ. ಹಿಂದಿನವರು ಅಗತ್ಯ ವಿಚಾರ ಅರಿತು ಜೊತೆಗಿರುತ್ತಿದ್ದರು. ಈಗ ಕ್ಷುಲ್ಲಕ ಕಾರಣಕ್ಕೂ ವಿವಾಹ ಮುರಿದುಬೀಳುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದರು.

ಪ್ರಾಸ್ತಾವಿಕ ಮಾತನಾಡಿದ ಮಹಾಸಭಾ ಅಧ್ಯಕ್ಷ ಅಶೋಕ್‌ ಹಾರನಳ್ಳಿ, ಸನಾತನ ಧರ್ಮದ ಒಳಗಿನ ಭಿನ್ನಾಭಿಪ್ರಾಯ ತೊಡೆದು ಹಾಕುವ ಮೂಲಕ ಧರ್ಮಕ್ಕೆ ಶಕ್ತಿ ನೀಡಬೇಕು. ಹಾಗಾದಲ್ಲಿ ಇತರೆ ಮತಗಳ ಪ್ರಭಾವ ನಮ್ಮ ಮೇಲೆ ಹೆಚ್ಚಾಗಲು ಸಾಧ್ಯವಿಲ್ಲ. ಈ ಸಮಾವೇಶ ಜಾತಿಗಳನ್ನು ಮೀರಿ ಸನಾತನ ಧರ್ಮಕ್ಕೆ ಶಕ್ತಿ ನೀಡಬೇಕಿದೆ ಎಂದರು.

ಬ್ರಾಹ್ಮಣರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಬ್ರಾಹ್ಮಣರೆಲ್ಲ ಒಂದು ಎಂದು ಹೇಳಿಕೊಳ್ಳಬೇಕಾದ ಸನ್ನಿವೇಶ ಬಂದಿದೆ. ಜಾತಿ ಗಣತಿಯಲ್ಲಿ 14 ಲಕ್ಷ ಬ್ರಾಹ್ಮಣರು ಎಂದು ದಾಖಲಾಗಿದ್ದು ನೋಡಿದ್ದು, ಎಲ್ಲರೂ ಬ್ರಾಹ್ಮಣರೆಂದು ದಾಖಲಿಸಿಕೊಳ್ಳಬೇಕು. ಉಪ ಪಂಗಡವೆಂದು ಗುರುತಿಸಿಕೊಂಡರೆ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದು ಮರೆಯಬಾರದು ಎಂದು ಹೇಳಿದರು.

ಶೃಂಗೇರಿ ಶಿವಗಂಗಾ ಮಠಾಧೀಶ ಪುರುಷೋತ್ತಮ ಭಾರತೀ ಸ್ವಾಮೀಜಿ, ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ಆವನಿ ಶೃಂಗೇರಿ ಮಠದ ಅದ್ವೈತಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಳಗ್ಗೆ ಗಾಯತ್ರಿ ಮಹಾಯಾಗ, ಸುವರ್ಣ ಭವನ ಶಿಲಾನ್ಯಾಸವನ್ನು ನೆರವೇರಿತು.