ಸಾರಾಂಶ
ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ)ಹುದ್ದೆಯೂ ಹಾಲಿ ಹಂಗಾಮಿ ಮಹಾದಂಡ ನಾಯಕ ಡಾ.ಎಂ.ಸಲೀಂ ಅವರಿಗೆ ಕಾಯಂ ಅಥವಾ ಇಲ್ಲವೇ ಎಂಬ ಕುತೂಹಲಕ್ಕೆ ಶನಿವಾರ ಅಂತಿಮ ತೆರೆ ಬೀಳುವ ಸಾಧ್ಯತೆಗಳಿವೆ.
ಬೆಂಗಳೂರು : ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ)ಹುದ್ದೆಯೂ ಹಾಲಿ ಹಂಗಾಮಿ ಮಹಾದಂಡ ನಾಯಕ ಡಾ.ಎಂ.ಸಲೀಂ ಅವರಿಗೆ ಕಾಯಂ ಅಥವಾ ಇಲ್ಲವೇ ಎಂಬ ಕುತೂಹಲಕ್ಕೆ ಶನಿವಾರ ಅಂತಿಮ ತೆರೆ ಬೀಳುವ ಸಾಧ್ಯತೆಗಳಿವೆ.
ರಾಜ್ಯ ಸರ್ಕಾರಕ್ಕೆ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಡಿಜಿ-ಐಜಿಪಿ ಹುದ್ದೆಗೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಅಂತಿಮಗೊಳಿಸಿ ಪಟ್ಟಿ ಮರಳಿಸಿದೆ. ಈ ಪಟ್ಟಿಯಲ್ಲಿರುವ ಮೂವರ ಪೈಕಿ ಒಬ್ಬರ ಆಯ್ಕೆಗೆ ರಾಜ್ಯ ಸರ್ಕಾರದ ಮುಂದಿದ್ದು, ಹಂಗಾಮಿ ಡಿಜಿ-ಐಜಿಪಿ ಸಲೀಂ ಅವರೇ ಕಾಯಂಗೊಳ್ಳಬಹುದು ಎಂದು ತಿಳಿದು ಬಂದಿದೆ.
ಕಳೆದ ಮೇ 21ರಂದು ಅಂದಿನ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರ ನಿವೃತ್ತಿಯಿಂದ ತೆರವಾದ ಹುದ್ದೆಗೆ ಸಿಐಡಿ ಡಿಜಿಪಿ ಸಲೀಂ ಅವರನ್ನು ಪ್ರಭಾರಿಯಾಗಿ ರಾಜ್ಯ ಸರ್ಕಾರ ನೇಮಿಸಿತ್ತು. ಅಲ್ಲದೆ ಪೊಲೀಸ್ ಮಹಾ ದಂಡನಾಯಕ ಹುದ್ದೆಗೆ ಸಲೀಂ ಅವರು ಸೇರಿ ಆರು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರಿನ ಪಟ್ಟಿಯನ್ನು ಯುಪಿಎಸ್‌ಸಿಗೆ ರಾಜ್ಯ ಸರ್ಕಾರ ಕಳುಹಿಸಿತ್ತು. ನಾಲ್ಕು ತಿಂಗಳ ಬಳಿಕ ಆರು ಮಂದಿಯಲ್ಲಿ ಹಂಗಾಮಿ ಡಿಜಿ-ಐಜಿಪಿ ಸಲೀಂ ಹಾಗೂ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಸೇರಿ ಮೂವರ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಯುಪಿಎಸ್‌ಸಿ ಪಟ್ಟಿ ಮರಳಿಸಿದೆ.
ಬಿಹಾರ ರಾಜ್ಯಕ್ಕೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಶನಿವಾರ ರಾಜ್ಯಕ್ಕೆ ವಾಪಸಾಗಲಿದ್ದಾರೆ. ನಂತರ ಉಭಯ ನಾಯಕರು ಸಭೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ. ಬಹುತೇಕ ಹಂಗಾಮಿ ಡಿಜಿ-ಐಜಿಪಿ ಸಲೀಂ ಅವರ ಅಧಿಕಾರ ಅಡ್ಡಿ ಇಲ್ಲದೆ ಮುಂದುವರೆಯಲಿದೆ ಎನ್ನಲಾಗಿದೆ.
ಸಿಐಡಿ ಡಿಜಿಪಿ ಯಾರು?
ಡಿಜಿ-ಐಜಿಪಿ ಹುದ್ದೆ ಕಾಯಂ ಹಿನ್ನೆಲೆಯಲ್ಲಿ ಸಲೀಂ ಅವರಿಂದ ತೆರವಾಗಲಿರುವ ಸಿಐಡಿ ಡಿಜಿಪಿ ಹುದ್ದೆ ಯಾರಿಗೆ ಒಲಿಯಲಿದೆ ಎಂಬ ಚರ್ಚೆಯಲ್ಲಿ ಇಲಾಖೆಯಲ್ಲಿ ನಡೆದಿದೆ. ಸಿಐಡಿ ಡಿಜಿಪಿ ಪದವಿಗೆ ರಾಜ್ಯ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಡಿಜಿಪಿ ಹಾಗೂ ಧರ್ಮಸ್ಥಳ ಪ್ರಕರಣದ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಪ್ರಯತ್ನಿಸಿದ್ದಾರೆ. ಇನ್ನೊಂದೆಡೆ ಸಿಐಡಿಗೆ ಎಡಿಜಿಪಿ ಅವರಿಗೆ ಸ್ವತಂತ್ರ ನಿರ್ವಹಣೆ ಹೊಣೆಗಾರಿಕೆ ಕೊಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಗಳು ಕೇಳಿ ಬಂದಿವೆ.
ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ಹಾಲಿ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ಹಾಗೂ ಸಿಐಡಿಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಅವರನ್ನು ವರ್ಗಾಯಿಸಬಹುದು ಎಂದು ತಿಳಿದು ಬಂದಿದೆ.
ಇಬ್ಬರಿಗೆ ಮುಂಬಡ್ತಿ ಸಾಧ್ಯತೆ?
ಖಾಲಿ ಇರುವ ಎರಡು ಡಿಜಿಪಿ ಹುದ್ದೆಗಳಿಗೆ ಸಹ ಸೇವಾ ಹಿರಿತನದ ಮೇರೆಗೆ ಎಡಿಜಿಪಿಗಳಾದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರಿಗೆ ಮುಂಬಡ್ತಿ ನೀಡಬಹುದು ಎಂದು ಮೂಲಗಳು ಹೇಳಿವೆ.
ರಾಜ್ಯ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರುಣ್ ಚಕ್ರವರ್ತಿ ಅವರು ಮುಂಬಡ್ತಿ ಪಡೆದು ಅದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಆದರೆ ಕೆಎಸ್‌ಆರ್‌ಪಿ ಎಡಿಜಿಪಿ ಉಮೇಶ್ ಕುಮಾರ್ ಅವರಿಗೆ ಸಿಐಡಿ ಮುಖ್ಯಸ್ಥ ಅಥವಾ ಬೇರೊಂದು ಹುದ್ದೆ ಸಿಗಬಹುದು. ಈ ಹಿಂದೆ ಸಿಐಡಿ ಎಡಿಜಿಪಿಯಾಗಿದ್ದ ಅವರು, ಪಿಎಸ್‌ಐ ನೇಮಕಾತಿ ಅಕ್ರಮದ ತನಿಖಾ ತಂಡದ ಸಾರಥ್ಯ ವಹಿಸಿದ್ದರು. ಈ ಹಿನ್ನಲೆಯಲ್ಲಿ ಸಿಐಡಿ ಡಿಜಿಪಿ ಹುದ್ದೆಗೆ ಉಮೇಶ್ ಕುಮಾರ್ ಅವರ ಹೆಸರೂ ಪ್ರಸ್ತಾಪವಾಗಿದೆ ಎನ್ನಲಾಗಿದೆ.