ರಾಜ್ಯದ ನ್ಯಾಯಯುತ ತೆರಿಗೆ ಪಾಲಿಗಾಗಿ ಪ್ರಯತ್ನ - ಕೇಂದ್ರದಿಂದ ನಿರೀಕ್ಷೆ ಮಾಡುವುದು ತಪ್ಪಲ್ಲ: ಸಿಎಂ

| N/A | Published : Feb 01 2025, 11:42 AM IST

Siddaramaiah
ರಾಜ್ಯದ ನ್ಯಾಯಯುತ ತೆರಿಗೆ ಪಾಲಿಗಾಗಿ ಪ್ರಯತ್ನ - ಕೇಂದ್ರದಿಂದ ನಿರೀಕ್ಷೆ ಮಾಡುವುದು ತಪ್ಪಲ್ಲ: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಪಾಲು ಪಡೆಯಲು ನಿರಂತರ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಡಿಕೇರಿ : ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಪಾಲು ಪಡೆಯಲು ನಿರಂತರ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಭಾಗಮಂಡಲದ ಹೆಲಿಪ್ಯಾಡ್‌ನಲ್ಲಿ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಶನಿವಾರ ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸಬೇಕು. ಕೇಂದ್ರ ಸರ್ಕಾರದಿಂದ ನಿರೀಕ್ಷೆ ಮಾಡುವುದೇ ಇಲ್ಲ ಎಂದೇನಿಲ್ಲ. ನಿರೀಕ್ಷೆ ಮಾಡಿದರೂ ಅವು ಹುಸಿಯಾಗುತ್ತಿವೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡುತ್ತೇವೆ. ದೆಹಲಿಗೆ ಹೋಗಿ ತೆರಿಗೆ ಹಂಚಿಕೆಯಲ್ಲಿ ಕಡಿಮೆ ಅನುದಾನ ಬರುತ್ತಿದೆ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ, ಕೇಂದ್ರದಿಂದ ಅನುದಾನ ಬರುತ್ತಿಲ್ಲ ಎಂದು ಶಾಸಕರು, ಸಂಸದರು, ಸಚಿವರು ದೆಹಲಿಯಲ್ಲಿಯೇ ಪ್ರತಿಭಟನೆ ಮಾಡಿದೆವು ಎಂದು ಹೇಳಿದರು.

ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಅನುದಾನ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಇಂದಿನವರೆಗೂ ಒಂದು ರುಪಾಯಿ ಬಿಡುಗಡೆಯಾಗಿಲ್ಲ ಎಂದರು.

ಬಳಿಕ, ಭಾಗಮಂಡಲ ಮೇಲ್ಸೇತುವೆ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ, ಒಂಭತ್ತು ವರ್ಷಗಳ ನಂತರ ಭಾಗಮಂಡಲ ಮೇಲ್ಸೇತುವೆ ಉದ್ಘಾಟನೆಯಾಗುತ್ತಿದೆ. 2016ರಲ್ಲಿ ನಮ್ಮ ಸರ್ಕಾರ ಕಾಮಗಾರಿಗೆ ಮಂಜೂರಾತಿ ಕೊಟ್ಟು, 2017ರಲ್ಲಿ ಪ್ರಾರಂಭವಾಗಿತ್ತು. ಹಿಂದಿನ ಸರ್ಕಾರ ಅದನ್ನು ಪೂರ್ಣಮಾಡದೆ ವಿಳಂಬವಾಯಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನವನ್ನು ನೀಡಿ ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ ಎಂದರು.

ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿಗಳ ಉಪಟಳ ಕುರಿತು ಪ್ರತಿಕ್ರಿಯಿಸಿ, ವನ್ಯಜೀವಿ-ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ ಕೈಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಿಎಂ ಬದಲಾವಣೆ ವಿಚಾರದಲ್ಲಿ ಎಲ್ಲವೂ ಹೈಕಮಾಂಡ್ ತೀರ್ಮಾನ:  ಸಿಎಂ ಬದಲಾವಣೆ ವಿಚಾರವನ್ನು ಮತ್ತೆ ಮತ್ತೆ ಕೇಳಬೇಡಿ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಅದೇ ಆಗುತ್ತದೆ. ಎಲ್ಲದನ್ನೂ ತೀರ್ಮಾನ ಮಾಡುವುದು ಹೈಕಮಾಂಡ್. ಈ ವಿಚಾರದ ಬಗ್ಗೆ ನಾನು ಎಷ್ಟು ಬಾರಿ ಸ್ಪಷ್ಟೀಕರಣ ಕೊಡಲಿ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಇಬ್ಬರು, ಮೂವರು ಸಚಿವರು ಜೊತೆಯಲ್ಲಿ ಕುಳಿತು ಮಾತನಾಡಿದ ತಕ್ಷಣ ಅದನ್ನೇ ಇದೇ ವಿಚಾರ ಎಂದು ಯಾಕೆ ಗ್ರಹಿಸುತ್ತೀರಾ?. ಊಹಾ ಪತ್ರಿಕೋದ್ಯಮ ಬಿಟ್ಟು ಬಿಡಿ. 3-4 ಜನ ಸೇರಿದಾಗ ರಾಜಕೀಯ ಚರ್ಚೆ ಮಾಡುತ್ತೇವೆ. ನನ್ನ ಪ್ರಕಾರ ಡಿನ್ನರ್ ಮೀಟಿಂಗ್ ಹಾಗೂ ಸಭೆ ಮಾಡುವುದರಲ್ಲಿ ತಪ್ಪೇ ಇಲ್ಲ. ನೀವು ಅದರಲ್ಲಿ ಹುಡುಕುವ ಗ್ರಹಿಕೆ ಸರಿ ಇಲ್ಲ ಅಷ್ಟೇ ಎಂದು ಅವರು ಹೇಳಿದರು.

ವಿಜಯೇಂದ್ರ ಹೇಳಿಕೆ ಬಾಲಿಶ:  ಕುಂಭಮೇಳ ಟೀಕಿಸುವ ಕಾಂಗ್ರೆಸ್ ನವರು ಆಯೋಗ್ಯರು ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಂಭಮೇಳ ನಡೆಯುತ್ತಿರುವುದು ಎಲ್ಲಿ?. ಹಾಗಾದರೆ ಅವರು ಅಯೋಗ್ಯರಾ?. ಟೀಕೆ ಮಾಡಬಾರದು ಎಂದರೇ ಏನು ಅರ್ಥ. ವಿಜಯೇಂದ್ರ ಹೇಳಿಕೆ ಬಾಲಿಶವಾದದ್ದು ಎಂದು ಕಿಡಿಕಾರಿದರು.