ಸಾರಾಂಶ
ರಾಜ್ಯದ ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಪರಿಸರ, ಹವಾಮಾನ ವೈಪರೀತ್ಯ ಜಾಗೃತಿ ಕ್ಲಬ್ ರಚಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು : ಮಕ್ಕಳಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದ ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಪರಿಸರ, ಹವಾಮಾನ ವೈಪರೀತ್ಯ ಜಾಗೃತಿ ಕ್ಲಬ್ ರಚಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಶ್ವ ಪರಿಸರ ದಿನದ ಅಂಗವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮಂಗಳವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಿಗೆ ಶಾಲಾ ಸಮಯದಲ್ಲಿಯೇ ಪರಿಸರ ಸಂರಕ್ಷಣೆ ಕುರಿತಂತೆ ಅರಿವು ಮೂಡಿಸಬೇಕು. ಅದಕ್ಕಾಗಿ ಪ್ರತಿ ಶಾಲೆಯಲ್ಲೂ ಕನಿಷ್ಠ 25 ವಿದ್ಯಾರ್ಥಿಗಳನ್ನೊಳಗೊಂಡ ಜಾಗೃತಿ ಕ್ಲಬ್ ರಚಿಸಬೇಕು. ಪ್ರಕೃತಿ ಉಳಿಸಲು ದೊಡ್ಡ ಹೋರಾಟದ ಕುರಿತಂತೆ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಆದೇಶಿಸಲಾಗಿದೆ. ಜತೆಗೆ ಒಂದೊಂದು ಶಾಲೆಯೂ ಮರ ಬೆಳೆಸಲು ಆಯಾಯ ಪ್ರದೇಶಗಳನ್ನು ದತ್ತು ಪಡೆಯಬೇಕು ಎಂದು ಹೇಳಿದರು.
ರಾಜ್ಯದ ಪ್ರತಿ ವಿದ್ಯಾರ್ಥಿಯೂ ಒಂದೊಂದು ಸಸಿಯನ್ನು ದತ್ತು ಪಡೆಯಬೇಕು ಎಂದು ತಿಳಿಸಲಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚಿನ ಮಕ್ಕಳು ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ವಾತಾವರಣವೇ ನಮ್ಮ ಆಸ್ತಿ. ಅದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಐಷಾರಾಮಿ ಜೀವನಕ್ಕಾಗಿ ಅತಿಯಾಗಿ ಸಂಪನ್ಮೂಲ ಬಳಸುತ್ತಿದ್ದು, ಅದರಿಂದ ಪರಿಸರ ನಾಶವಾಗುತ್ತಿದೆ. ಪ್ರಕೃತಿ ನಮಗೆ ನೀಡಿರುವ ಸಕಲ ಸಂಪನ್ಮೂಲವನ್ನೂ ಹಿತ-ಮಿತವಾಗಿ ಬಳಸಬೇಕು. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಜಗತ್ತಿನ ಮುಂದಿರುವ ದೊಡ್ಡ ಸವಾಲು. ಅರಣ್ಯ ನಾಶ ಹಾಗೂ ನಮ್ಮ ಜೀವನ ಶೈಲಿಯೇ ಅದಕ್ಕೆ ಕಾರಣವಾಗಿದೆ. ಮರಗಳನ್ನು ಹೆಚ್ಚಾಗಿ ಬೆಳೆಸುವ ಮೂಲಕ ಹಸಿರು ಹೊದಿಕೆ ಹೆಚ್ಚಿಸಿದರೆ ಹವಾಮಾನದಲ್ಲಾಗುತ್ತಿರುವ ಬದಲಾವಣೆಯ ಪರಿಣಾಮ ತಗ್ಗಿಸಬಹುದು ಎಂದು ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ, ಶಾಸಕ ರಿಜ್ವಾನ್ ಅರ್ಷದ್ ಇದ್ದರು.