ಸಾರಾಂಶ
ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿ ಕೀಳು ಪದಗಳಿಂದ ನಿಂದಿಸಿದ್ದರಿಂದ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪರಿಷತ್ತಿನ ಸಭಾಪತಿಗೆ ದೂರು ನೀಡಿದ್ದಾರೆ
ಬೆಂಗಳೂರು : ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿ ಕೀಳು ಪದಗಳಿಂದ ನಿಂದಿಸಿದ್ದರಿಂದ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪರಿಷತ್ತಿನ ಸಭಾಪತಿಗೆ ದೂರು ನೀಡಿದ್ದಾರೆ.
ಶುಕ್ರವಾರ ಪರಿಷತ್ತಿನ ಪಕ್ಷದ ಹಲವು ಸದಸ್ಯರ ನೇತೃತ್ವದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರ ಆಪ್ತ ಕಾರ್ಯದರ್ಶಿಯನ್ನು ಭೇಟಿಯಾಗಿ ದೂರು ನೀಡಿದರು. ಸದಸ್ಯರಾದ ಕೇಶವಪ್ರಸಾದ್, ನವೀನ್, ಹೇಮಲತಾ ನಾಯಕ್ ಮತ್ತಿತರರು ಇದ್ದರು.
ತಮ್ಮ ಹಕ್ಕಿಗೆ ಚ್ಯುತಿ ಬರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ಮತ್ತು ನನ್ನ ಭದ್ರತೆಯಲ್ಲಿ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದು, ಸರ್ಕಾರಿ ಅತಿಥಿಗೃಹದಲ್ಲಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಎಂದು ರಾಜಕೀಯ ಪ್ರೇರಿತ ಗೂಂಡಾಗಳು ಜಮಾಯಿಸಿದ್ದರು. ಈ ವೇಳೆ ನನ್ನನ್ನು ಕೀಳುಮಟ್ಟದ ಪದಗಳಿಂದ ನಿಂದಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಘಟನಾ ಸ್ಥಳಕ್ಕೆ ಆಗಮಿಸದ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡುರು ಶ್ರೀನಿವಾಸುಲು ಮತ್ತು ಸ್ಥಳದಲ್ಲಿದ್ದ ಹೆಚ್ಚುವರಿ ಎಸ್‌ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಸೇರಿ ಇತರೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ಥಳದಲ್ಲಿದ್ದ ಗುಂಪು ನನ್ನ ಸರ್ಕಾರಿ ವಾಹನ ಮೇಲೆ ನೀಲಿಬಣ್ಣ ಎರಚಿ ವಾಹನ ಜಖಂಗೊಳಿಸಿದರು. ನನ್ನ ಮೇಲೆ ಹಲ್ಲೆ ಯತ್ನಕ್ಕೆ ಪ್ರಯತ್ನಿಸಿ, ಪದೇ ಪದೆ ಕೀಳುಮಟ್ಟದ ಭಾಷೆ ಬಳಸಿ ಅವಮಾನ ಮಾಡಿ ಜೀವ ಬೆದರಿಕೆ ಹಾಕಿದರು. ಇದನ್ನು ಪೊಲೀಸರು ಸುಮ್ಮನೆ ನೋಡುತ್ತಾ ಕಾಲ ಕಳೆಯುತ್ತಿದ್ದರು. ಅಲ್ಲದೆ, ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಪದೇ ಪದೆ ದೂರವಾಣಿ ಕರೆಗಳ ಮೂಲಕ ಬರುತ್ತಿದ್ದ ಸೂಚನೆಗಳಂತೆ ವರ್ತಿಸುತ್ತಿದ್ದರು. ಅತಿಥಿಗೃಹದಲ್ಲಿ ಸುಮಾರು 6 ಗಂಟೆಗಳಿಗೂ ಹೆಚ್ಚು ಕಾಲ ಸಿಕ್ಕಿಹಾಕಿಕೊಂಡರೂ ಸೂಕ್ತ ರಕ್ಷಣೆ ಇಲ್ಲದೆ ಅಕ್ರಮ ಬಂಧನದಲ್ಲಿ ಉಳಿಸಿ ನನ್ನ ಹಕ್ಕಿಗೆ ಚ್ಯುತಿ ತಂದಿದ್ದಾರೆ ಎಂದು ಛಲವಾದಿ ಆಪಾದಿಸಿದ್ದಾರೆ.
ಪ್ರತಿಪಕ್ಷ ನಾಯಕನಾಗಿ ನನ್ನ ಸ್ಥಾನಮಾನ ಮತ್ತು ಗೌರವಕ್ಕೆ ಧಕ್ಕೆಯಾಗುವಂಥ ಕೆಲಸವಾಗಿದೆ. ಪ್ರತಿಭಟನೆ ನಡೆಸಲು ಅವರಿಗೆ ಅನುಮತಿ ನೀಡಿದವರು ಯಾರು? ಅವರು ಕಲ್ಲು, ದೊಣ್ಣೆ, ಬಣ್ಣ, ಮೊಟ್ಟೆ, ಟೊಮೆಟೋ ಇತ್ಯಾದಿ ವಸ್ತುಗಳನ್ನು ತಂದಿರುವುದು ಪೊಲೀಸರ ಗಮನಕ್ಕೆ ಬಂದಿರಲಿಲ್ಲವೇ? ಈ ಹಿನ್ನೆಲೆಯಲ್ಲಿ ಅವಮಾನಕಾರಿ ಕೃತ್ಯದಲ್ಲಿ ಭಾಗವಹಿಸಿ ನನ್ನ ಹಕ್ಕಿಗೆ ಚ್ಯುತಿ ಬರುವ ರೀತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಿರುವುದರಿಂದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.