ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ

| N/A | Published : Jul 26 2025, 09:41 AM IST

Goa Chief Minister Pramod Sawant

ಸಾರಾಂಶ

ಮಹದಾಯಿ ವಿಚಾರವಾಗಿ ತಮ್ಮ ವಿರುದ್ಧ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್‌ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

 ಪಣಜಿ :  ಮಹದಾಯಿ ವಿಚಾರವಾಗಿ ತಮ್ಮ ವಿರುದ್ಧ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್‌ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಹದಾಯಿ ಯೋಜನೆ ಜಾರಿಗೆ ಅ‍ವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವರು ತಿಳಿಸಿದ್ದಾಗಿ ಸಿಎಂ ಪ್ರಮೋದ್‌ ಸಾವಂತ್‌ ಅವರು ಗೋವಾ ವಿಧಾನಸಭೆಯಲ್ಲಿ ನೀಡಿದ್ದ ಹೇಳಿಕೆಗೆ ಡಿ.ಕೆ.‍ಶಿವಕುಮಾರ್‌ ಗುರುವಾರ ತೀವ್ರ ಕಿಡಿಕಾರಿದ್ದರು.

‘ಗೋವಾ ಸಿಎಂಗೆ ಮಹದಾಯಿ ಬಗ್ಗೆ ಮಾಹಿತಿ ಇದ್ದಂತಿಲ್ಲ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಒಕ್ಕೂಟ ವ್ಯವಸ್ಥೆಯ ಅರಿವಿಲ್ಲ. ನಾವು ಈಗಾಗಲೇ ಕಾಮಗಾರಿ ಕುರಿತು ಟೆಂಡರ್‌ ಕರೆದಿದ್ದೇವೆ. ಈ ಯೋಜನೆ ಜಾರಿ ಮಾಡಿಯೇ ಸಿದ್ಧ. ಬೇಕಿದ್ದರೆ ಗೋವಾ ಸಿಎಂ ಅದನ್ನು ತಡೆಯಲಿ’ ಎಂದು ಸವಾಲು ಹಾಕಿದ್ದರು.

ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಸಾವಂತ್‌ ಅವರು, ‘ಶಿವಕುಮಾರ್ ಹೇಳಿಕೆಯು ಕಾಂಗ್ರೆಸ್‌ ಸಂಸ್ಕೃತಿಯನ್ನು ತೋರಿಸುತ್ತದೆ. ಯಾರಾದರೂ ತೀವ್ರ ಹತಾಶೆಗೊಳಗಾದಾಗ ಇಂಥ ಪದ ಬಳಸುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ನಾಯಕರು ಕೆಳಮಟ್ಟಕ್ಕಿಳಿಯುವ ವಿಚಾರದಲ್ಲಿ ಪರಸ್ಪರ ಸ್ಪರ್ಧೆಗಿಳಿಸಿದ್ದಾರೆ’ ಎಂದು ಕಿಡಿಕಾರಿದರು.

‘ಮಹದಾಯಿ ನದಿ ತಿರುವು ವಿರೋಧಿಸಿ ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದೇವೆ ಮತ್ತು ಕೇಂದ್ರದ ಮುಂದೆ ಒತ್ತಡ ಹಾಕುತ್ತೇವೆ. ನಾವು ಮಹದಾಯಿ ವಿಚಾರದಲ್ಲಿ ಗಂಭೀರವಾಗಿದ್ದೇವೆ. ಮಹದಾಯಿ ರಕ್ಷಣೆಗೆ ನಾವು ನಮ್ಮ ಪ್ರಯತ್ನ ಮುಂದುವರಿಸುತ್ತೇವೆ. ಈ ಸಂಬಂಧ ಕೇಂದ್ರ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಇದೇ ವೇಳೆ ತಿಳಿಸಿದರು.

Read more Articles on