ಕಸದ ಸೆಸ್‌ ಹೆಸರಿನಲ್ಲಿ ಕೈ ಸರ್ಕಾರ ಲೂಟಿ : ಅಶೋಕ್‌

| N/A | Published : May 27 2025, 07:18 AM IST

R Ashok

ಸಾರಾಂಶ

ಬೆಂಗಳೂರಿನಲ್ಲಿ ಕಸದ ಸೆಸ್‌ ಹೆಸರಿನಲ್ಲಿ ಕಾಂಗ್ರೆಸ್‌ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಇಡೀ ಬೆಂಗಳೂರನ್ನು ಸರ್ಕಾರ ದುಬಾರಿ ಮಾಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು : ಬೆಂಗಳೂರಿನಲ್ಲಿ ಕಸದ ಸೆಸ್‌ ಹೆಸರಿನಲ್ಲಿ ಕಾಂಗ್ರೆಸ್‌ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಇಡೀ ಬೆಂಗಳೂರನ್ನು ಸರ್ಕಾರ ದುಬಾರಿ ಮಾಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಹಣ ಉಳಿದಿಲ್ಲ. ಹಿಂದೆ ಇದ್ದ ತುಘಲಕ್‌ ಕೂಡ ಹಾಕದಷ್ಟು ತೆರಿಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಮೇಲೆ ಹಾಕಿದ್ದಾರೆ. ಕಸ ವಿಲೇವಾರಿ ಮಾಡಲು ಕೂಡ ತೆರಿಗೆ ಹಾಕಲಾಗಿದೆ. 30*40 ಅಡಿ ವಿಸ್ತೀರ್ಣದ ಮನೆಗೆ ₹120 ಇದ್ದ ಕಸದ ತೆರಿಗೆಯನ್ನು ₹720 ಮಾಡಿದ್ದಾರೆ. ಅಂದರೆ ಶೇ.500 ರಷ್ಟು ಹೆಚ್ಚಾಗಿದೆ. ಅಪಾರ್ಟ್‌ಮೆಂಟ್‌ ನಿವಾಸಿಗಳು ಕಸವನ್ನು ಅವರೇ ವಿಲೇವಾರಿ ಮಾಡಿಕೊಳ್ಳುತ್ತಿದ್ದು, ಅವರಿಗೆ ಕಸದ ಸೆಸ್‌ ₹1,800 ರಿಂದ ₹18,000 ಕ್ಕೆ ಹೆಚ್ಚಿಸಲಾಗಿದೆ ಎಂದು ದೂರಿದರು.

ಮಾಲ್‌ಗಳಲ್ಲಿ ₹3,600 ಇದ್ದ ಕಸದ ಸೆಸ್‌ ₹52,500 ಆಗಿದ್ದು, ಶೇ.14,483 ಹೆಚ್ಚಿದೆ. ಆಸ್ಪತ್ರೆಗಳಲ್ಲಿ ಕಸದ ಸೆಸ್‌ ₹9,600 ರಿಂದ ₹2,75,000 ಆಗಿದೆ. 50*80 ವಿಸ್ತೀರ್ಣದ ಖಾಲಿ ನಿವೇಶನಗಳಿಗೆ ₹600 ರಿಂದ ₹5,400 ಆಗಿದೆ. ಕಸವೇ ಉತ್ಪತ್ತಿ ಆಗದ ಜಾಗದಲ್ಲಿ ಬಿಬಿಎಂಪಿಯಿಂದ ದುಡ್ಡು ಉತ್ಪತ್ತಿ ಮಾಡಲಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಕಳೆದೆರಡು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಜನರು ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ, ಅಭಿವೃದ್ಧಿಗೆ ಹಣ ನೀಡದೆ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದ ವಿವಿಧೆಡೆ ಮಳೆ ಹಾನಿಯಾಗಿದ್ದು, ಒಬ್ಬ ಸಚಿವರೂ ಸಂತ್ರಸ್ತರನ್ನು ಭೇಟಿ ಮಾಡಿಲ್ಲ. ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರು ಮಳೆ ಹಾನಿ ಪ್ರದೇಶಕ್ಕೆ ಹೋಗಿಲ್ಲ. ಬೆಂಗಳೂರಿನಲ್ಲಿ ಸರ್ಕಾರದಿಂದ ಪರಿಶೀಲನೆ ನಡೆಸಿದ ನಂತರ ಒಂದು ರುಪಾಯಿ ಪರಿಹಾರವನ್ನೂ ಬಿಡುಗಡೆ ಮಾಡಿಲ್ಲ. ಸಿಲ್ಕ್‌ ಬೋರ್ಡ್‌ ವೃತ್ತದ ಅಭಿವೃದ್ಧಿಗೂ ಅನುದಾನ ನೀಡಿಲ್ಲ ಎಂದರು.

ನಗರದ 2,800 ಜನರಿಂದ ಆನ್‌ಲೈನ್‌ ಆಂದೋಲನ

ನಿವೇಶನ (ಜಮೀನು) ಬಳಕೆದಾರರ ಶುಲ್ಕ ₹3,600 ರಿಂದ ₹67,000 ಆಗಿ ಶೇ.1,761 ಹೆಚ್ಚಾಗಿದೆ. 110 ಹಳ್ಳಿಗಳಲ್ಲಿ ಲಕ್ಷಾಂತರ ಜಮೀನುಗಳಿವೆ. ಅವುಗಳ ಮಾಲೀಕರು ಲಕ್ಷಾಂತರ ರುಪಾಯಿ ಕಸದ ಸೆಸ್‌ ಪಾವತಿಸಬೇಕಿದೆ. ಬಳಕೆದಾರರ ಶುಲ್ಕವನ್ನು ನಾವು ಪಾವತಿಸುವುದಿಲ್ಲ ಎಂದು ಬೆಂಗಳೂರಿನ 2,800 ಜನರು ಆನ್‌ಲೈನ್‌ ಆಂದೋಲನ ಆರಂಭಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ಬಿಬಿಎಂಪಿಯ ಮೂಲಕ ಜನರನ್ನು ಲೂಟಿ ಮಾಡುತ್ತಿದೆ ಎಂದು ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

Read more Articles on