ಲಂಡನ್ ಸಂಸದೀಯ ಶೃಂಗಕ್ಕೆ ಗೌರ್ನರ್‌ ಚಾಲನೆ - ರಾಜಭವನದಲ್ಲಿ ಚಾಲನೆ ನೀಡಿದ ರಾಜ್ಯಪಾಲ ಗೆಹ್ಲೋತ್‌

| Published : Nov 18 2024, 11:10 AM IST

thavar chand gehlot

ಸಾರಾಂಶ

ಲಂಡನ್‌ನಲ್ಲಿ ನಡೆಯಲಿರುವ ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ‘ಲಂಡನ್ ಸಂಸದೀಯ ನಾಯಕತ್ವ ಶೃಂಗಸಭೆ-2024’ರಲ್ಲಿ ಭಾಗವಹಿಸಲಿರುವ 23 ಗಣ್ಯರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಶುಭ ಕೋರಿದರು.

ಬೆಂಗಳೂರು : ಲಂಡನ್‌ನಲ್ಲಿ ನಡೆಯಲಿರುವ ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ‘ಲಂಡನ್ ಸಂಸದೀಯ ನಾಯಕತ್ವ ಶೃಂಗಸಭೆ-2024’ರಲ್ಲಿ ಭಾಗವಹಿಸಲಿರುವ 23 ಗಣ್ಯರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಶುಭ ಕೋರಿದರು.

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದಿನಪತ್ರಿಕೆ ಸಾರ್ವಜನಿಕ ಸಮಸ್ಯೆಗಳು, ಸಾಮಾಜಿಕ, ಆರ್ಥಿಕತೆ, ರಾಜ್ಯ ಮತ್ತು ವಿದೇಶಗಳಲ್ಲಿ ನಡೆಯುವ ಘಟನೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಪ್ರಕಟಿಸಿ ಮತ್ತು ಪ್ರಸಾರ ಮಾಡುವ ಮೂಲಕ ಸಾರ್ವಜನಿಕ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಮಹತ್ವದ ಪಾತ್ರ ವಹಿಸುತ್ತಿದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಾಯಕರನ್ನು ಬೆಳೆಸಲು, ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಅಭಿನಂದನಾರ್ಹ ಎಂದರು.

ಲಂಡನ್ ಅಭಿವೃದ್ಧಿ ಆಗಿದೆ. ಭಾರತ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಅಭಿವೃದ್ಧಿಯ ಪರಿಕಲ್ಪನೆಗಳು, ಹೊಸ ಆಲೋಚನೆಗಳು, ಉತ್ತಮ ನಾಯಕರ ಅವಶ್ಯಕತೆ ಈಗ ಮತ್ತು ಭ‍ವಿಷ್ಯದಲ್ಲಿ ಭಾರತಕ್ಕೆ ಬಹಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಲೋಚಿಸಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಕೆಲಸ. ಯುನೈಟೆಡ್ ಕಿಂಗ್‌ಡಂ ಅಭಿವೃದ್ಧಿ ಮಾದರಿಯನ್ನು ಭಾರತದಲ್ಲಿ ಅನುಸರಿಸಲು ಈ ಶೃಂಗಸಭೆ ಉತ್ತಮ ವೇದಿಕೆಯಾಗಲಿ. ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವವರು, ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಲಿ ಎಂದು ರಾಜ್ಯಪಾಲರು ಆಶಿಸಿದರು.

ಲಂಡನ್ ಲೀಡರ್‌ಶಿಪ್ ಶೃಂಗಸಭೆಯು ಕರ್ನಾಟಕ ರಾಜ್ಯದ ಪ್ರತಿಭೆಗಳನ್ನು ಗುರುತಿಸುವುದರ ಜೊತೆಗೆ, ಭಾರತದ ಶ್ರೇಷ್ಠ ಸಂಸ್ಕೃತಿ ಮತ್ತು ಲಂಡನ್ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಇದು ಜಾಗತಿಕ ದೃಷ್ಟಿಕೋನದೊಂದಿಗೆ ಪರಿಚಯ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ಕರ್ನಾಟಕವನ್ನು ಮುನ್ನಡೆಸಲು ಇದು ಉತ್ತಮ ಅವಕಾಶವಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಕನ್ನಡಪ್ರಭ - ಏಷ್ಯಾನೆಟ್‌ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ದಿನಪತ್ರಿಕೆ ಮತ್ತು ಸುದ್ದಿವಾಹಿನಿ ಜಂಟಿಯಾಗಿ ವಿದೇಶದಲ್ಲಿ ಇಂತಹ ಶೃಂಗಸಭೆ ಆಯೋಜಿಸುತ್ತಿರುವುದು ದೇಶದಲ್ಲೇ ಮೊದಲು. ಶೃಂಗಸಭೆಯ ಪ್ರವಾಸದ ವೇಳೆ ಅಲ್ಲಿನ ರಾಜಕೀಯ ವ್ಯವಸ್ಥೆ ಸೇರಿದಂತೆ ಅನೇಕ ಮಹತ್ವದ ವಿಚಾರ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದರು.

ಈ ಶೃಂಗಸಭೆಯು ತಳಮಟ್ಟದಿಂದ ನಾಯಕರನ್ನು ಬೆಳೆಸುವ ಸ್ಫೂರ್ತಿದಾಯಕ ಉದ್ದೇಶ ಹೊಂದಿದೆ. 23 ಸಾಧಕರಿಗೆ ಹೊಸದೊಂದು ಅನುಭವವನ್ನು ನೀಡಲಿದೆ. ಹೊಸ ವಿಚಾರಗಳನ್ನು ತಿಳಿಯಲು, ಅರಿಯಲು ಮತ್ತು ನಮ್ಮ ದೇಶಕ್ಕೆ ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ಅನುಸರಿಸಲು ಸಾಧ್ಯವಾಗಿಸಲಿದೆ. ನಾಯಕತ್ವ ಗುಣಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನೆರವಾಗುತ್ತದೆ ಎಂದರು.

ಏಷ್ಯಾನೆಟ್ ಸುವರ್ಣ ನ್ಯೂಸ್‌ನ ನಿರ್ದೇಶಕರು ಹಾಗೂ ರೇಡಿಯೋ ಇಂಡಿಗೋ ಸಿಇಒ ಸಂಜಯ್ ಪ್ರಭು ಉಪಸ್ಥಿತರಿದ್ದರು.

ರಾಜಭವನದ ಪರಿಚಯ:

ಲಂಡನ್‌ ಸಂಸತ್ ಭವನಕ್ಕೆ ಭೇಟಿ ನೀಡಿ, ಸುತ್ತಾಡಿ ಅಲ್ಲಿನ ಕಾರ್ಯವಿಧಾನ ಅರಿಯಲಿರುವ ನಾಡಿನ ಸಾಧಕರು ಅಲ್ಲಿನ ಸಂಸದರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಕರ್ನಾಟಕದ ರಾಜಭವನಕ್ಕೆ ಭೇಟಿ ನೀಡಿ ರಾಜಭವನದಲ್ಲಿ ಒಂದು ಸುತ್ತು ಹಾಕಿ ಇಲ್ಲಿನ ಕಾರ್ಯ ಚಟುವಟಿಕೆಗಳ ಸ್ಥೂಲ ಪರಿಚಯವನ್ನು ಪಡೆದುಕೊಂಡರು.

ಪೂರ್ವಭಾವಿ ಸಭೆ ಮತ್ತು ಸಂವಾದ ಕಾರ್ಯಕ್ರಮ

ದೇಶಕ್ಕೆ ಮತ್ತು ನಾಡಿಗೆ ಹೊಸ ಆಲೋಚನೆಗಳ ನಾಯಕರನ್ನು ಬೆಳೆಸುವ ಉದ್ದೇಶದೊಂದಿಗೆ ‘ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್’ ಆಯೋಜಿಸಿರುವ ‘ಲಂಡನ್ ಸಂಸದೀಯ ನಾಯಕತ್ವ ಶೃಂಗಸಭೆ’ಯ (London parliamentry leadership summit) ಪೂರ್ವಭಾವಿ ಸಭೆ ಮತ್ತು ಸಂವಾದ ಕಾರ್ಯಕ್ರಮ ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಿತು.

ಕರ್ನಾಟಕ ಮತ್ತು ಕೇರಳ ರಾಜ್ಯಗಳ ಲಂಡನ್ ಡೆಪ್ಯುಟಿ ಹೈಕಮೀಷನರ್ ಚಂದ್ರು ಅಯ್ಯರ್ ಅವರು ಲಂಡನ್ ಪ್ರವಾಸಕ್ಕೆ ಹೊರಟಿರುವ 23 ಗಣ್ಯರೊಂದಿಗೆ ಸಂವಾದ ನಡೆಸಿದರು.

ರಾಜಕೀಯ, ಸಮಾಜ ಸೇವೆ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ್ತಷ್ಟು ಉತ್ತಮ ಸಾಧನೆ ಮಾಡಲು ಐದು ದಿನಗಳ ಕಾಲ ಲಂಡನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಯುನೈಟೆಡ್ ಕಿಂಗ್ಡಮ್‌ನ ಸಂಸತ್ ಭವನಕ್ಕೆ ಭೇಟಿ ನೀಡಿ ಸಂಸದರೊಂದಿಗೆ ಚರ್ಚೆ ನಡೆಸಲಿದ್ದಾರೆ. ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರುವ ಯುನೈಟೆಡ್‌ ಕಿಂಗ್ಡಮ್‌ನಿಂದ ಭಾರತೀಯ ನಾಯಕರು ಕಲಿಯಬೇಕಿರುವ ವಿಚಾರಗಳನ್ನು ನೇರವಾಗಿ ಅರಿಯಲು ಈ ಶೃಂಗಸಭೆ ಸಹಕಾರಿಯಾಗಲಿದೆ.

ಅಲ್ಲದೇ, ಲಂಡನ್ ನಗರದ ನಡುವೆ ಹರಿಯುವ, ಒಂದು ಕಾಲದಲ್ಲಿ ಪೂರ್ತಿ ಹಾಳಾಗಿದ್ದ ಥೇಮ್ಸ್ ನದಿಯನ್ನು ಅದ್ಭುತ ರೀತಿಯಲ್ಲಿ ಪುನರುಜ್ಜೀವನಗೊಳಿಸಿರುವುದರ ಹಿಂದಿನ ಯಶೋಗಾಥೆಯನ್ನು ಅರಿಯಲು ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲಿನ ಶಿಕ್ಷಣ, ಆರೋಗ್ಯ, ಮೆಟ್ರೊ ರೈಲು, ಬಸ್ ಸೇರಿದಂತೆ ಸಮೂಹ ಸಾರಿಗೆ, ಮೂಲಸೌಕರ್ಯಗಳ ಅಭಿವೃದ್ಧಿ, ಉದ್ಯಮಗಳ ಸ್ಥಾಪನೆ, ಪ್ರವಾಸೋದ್ಯಮಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಅವುಗಳನ್ನು ಭಾರತದ ಸುಸ್ಥಿರ ಅಭಿವೃದ್ಧಿಗೆ ಯಾವ ರೀತಿ ಅನುಷ್ಠಾನಗೊಳಿಸಬಹುದು ಎಂಬುದರ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಲಾಗುತ್ತದೆ.

ಈ ವೇಳೆ ಮಾತನಾಡಿದ ಚಂದ್ರು ಅಯ್ಯರ್, ಲಂಡನ್ ಜಗತ್ತಿನ ಸುಂದರ ನಗರವಾಗಿದೆ. ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ವಿಚಾರ ವಿನಿಮಯದಿಂದ ಸಾಕಷ್ಟು ಪ್ರಯೋಜನಗಳಿವೆ. ಅಲ್ಲಿನ ಅಭಿವೃದ್ಧಿ ಮತ್ತು ಅಭಿವೃದ್ಧಿ ಮಾದರಿಯನ್ನು ನಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲು ಅವಕಾಶವಿದೆ. ಸಮೂಹ ಸಾರಿಗೆ, ಇವಿ ವಾಹನಗಳ ಬೆಳವಣಿಗೆ, ವಿವಿಧ ಉದ್ಯಮ, ವ್ಯಾಪಾರ, ಶಿಕ್ಷಣ ಪದ್ಧತಿ ಕುರಿತು ಅರಿಯಲು ಈ ಶೃಂಗಸಭೆ ನೆರವಾಗುತ್ತದೆ ಎಂದರು.

ಭಾರತದಲ್ಲಿ ಬ್ರಿಟನ್ನಿನ 950 ವ್ಯವಹಾರೋದ್ಯಮಿಗಳಿದ್ದಾರೆ. ಅನೇಕ ಕಂಪನಿಗಳು ಬೆಂಗಳೂರಿನಲ್ಲಿ ಕಚೇರಿ ಹೊಂದಿವೆ. ಬ್ರಿಟನ್‌ನಿಂದ ಬೃಹತ್ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಮತ್ತು ಇಡೀ ದೇಶದಲ್ಲಿ ಹೂಡಿಕೆ ಆಗುತ್ತಿದೆ. ಉದ್ಯೋಗ ಸೃಷ್ಟಿ, ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಅನೇಕ ಸಾಮ್ಯತೆಗಳಿರುವ ಕಾರಣ ಆ ಮಾದರಿ ಅನುಸರಿಸಿಕೊಂಡು ಭಾರತ ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದು ಚಂದ್ರು ಅಯ್ಯರ್ ಹೇಳಿದರು.

ಕನ್ನಡಪ್ರಭ- ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಈ ಹಿಂದೆ ಇಂಟರ್‌ನ್ಯಾಷನಲ್ ವಿಸಿಟರ್ಸ್ ಲೀಡರ್‌ಶಿಪ್ ಪ್ರೋಗ್ರಾಂ (ಐವಿಎಲ್‌ಪಿ) ಆಗುತ್ತಿತ್ತು. ಆದರೆ, ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಾಗದ ಕಾರಣ ಇಂತಹ ಯೋಜನೆಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಇಂತಹ ಕಾರ್ಯಕ್ರಮಗಳಿಂದ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಉತ್ತಮಗೊಳ್ಳುತ್ತದೆ. ವ್ಯಾಪಾರೋದ್ಯಮ ಬೆಳೆಯುತ್ತದೆ. ಇಂತಹ ಮಹತ್ವದ ಯೋಜನೆಗಳನ್ನು ಮುಂದುವರೆಸುವ ಉದ್ದೇಶದಿಂದ ನಾಯಕತ್ವ ಶೃಂಗಸಭೆ ಆಯೋಜಿಸಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆ ಮೇಲೆ ಮಾಡಿದ ಭಾಷಣದಲ್ಲಿ ಭಾರತಕ್ಕೆ ಹೊಸ ತಲೆಮಾರಿನ ನಾಯಕರು ಬೇಕು ಎಂದು ಹೇಳಿದ್ದರು. ಅದೇ ಮಾದರಿಯಲ್ಲಿ ದೇಶದಲ್ಲಿ, ಸಮಾಜದಲ್ಲಿ ಬದಲಾವಣೆ ತರಲು ಈ ಯೋಜನೆ ರೂಪಿಸಲಾಗಿದೆ. ಲಂಡನ್ನಿನಲ್ಲಿ ಸಂಸತ್ ಭವನ, ಹೌಸ್ ಆಫ್ ಲಾರ್ಡ್ಸ್, ಕೇಂಬ್ರಿಡ್ಜ್ ಡಿಬೇಟ್ ಹಾಲ್, ಥೇಮ್ಸ್‌ ನದಿಗೆ ಭೇಟಿ, ಸಂಸದರ ಜೊತೆ ಸಂವಾದ ಆಯೋಜಿಸಲಾಗಿದೆ. ಶೃಂಗಸಭೆಯಲ್ಲಿ ಭಾಗವಹಿಸುವ ಗಣ್ಯರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ರವಿ ಹೆಗಡೆ ತಿಳಿಸಿದರು.

 ಬಂಧ ಬೆಸೆದ ಕ್ರಿಕೆಟ್‌: 

ಭಾರತ ಮತ್ತು ಇಂಗ್ಲೆಂಡ್‌ನಲ್ಲಿ ಬೃಹತ್ ಸಂಖ್ಯೆಯ ಕ್ರಿಕೆಟ್ ಆಸಕ್ತರಿದ್ದಾರೆ. ಕ್ರಿಕೆಟ್ ಎರಡು ರಾಷ್ಟ್ರಗಳ ಕೊಟ್ಯಂತರ ಜನರನ್ನು ಬೆಸೆಯುತ್ತದೆ. ಅದೇ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶೃಂಗಸಭೆಯ ಸಂವಾದ ನಡೆಸಲಾಯಿತು.

 ಶೃಂಗಸಭೆಯಲ್ಲಿ ಭಾಗವಹಿಸುವವರು: 

- ಕೆ.ರಾಜಶೇಖರ್ ಬಸವರಾಜ ಹಿಟ್ನಾಳ್, ಸಂಸದರು

- ವಿಠ್ಠಲ್ ಸೋಮಣ್ಣ ಹಲಗೇಕರ್, ಶಾಸಕರು

- ಎಸ್.ಮುನಿರಾಜು, ಶಾಸಕರು

- ವಿಶ್ವಾಸ್ ವಸಂತ ವೈದ್ಯ, ಶಾಸಕರು

- ಪಿ.ನಾರಾಯಣ, ಕಾರ್ಯನಿರ್ವಾಹಕ ಉಪಾಧ್ಯಕ್ಷ, ಕಿರ್ಲೋಸ್ಕರ್ ಫೆರ್ರಸ್ ಇಂಡಸ್ಟ್ರೀಸ್ ಲಿಮಿಟೆಡ್‌

- ಡಾ. ಹಂಸ ಕೆ. ವೇಣುಗೋಪಾಲ್, ವ್ಯವಸ್ಥಾಪಕ ನಿರ್ದೇಶಕರು, ನ್ಯೂ ಬಾಲ್ಡ್ವೀನ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್ಸ್, ಬೆಂಗಳೂರು

- ಟಿ.ವಿ.ಬಾಬು, ಬಿಜೆಪಿ ನಾಯಕರು, ಆನೇಕಲ್

- ಡಾ.ಎಚ್.ನಾಗೇಶ್, ಮಾಲೀಕರು, ಎನ್‌ಟಿಸಿ ರೈಸ್ ಇಂಡಸ್ಟ್ರೀಸ್

- ಎಲ್. ಸತ್ಯನಾರಾಯಣ ರಾವ್, ಮಾಜಿ ಅಧ್ಯಕ್ಷರು, ಶಿವಮೊಗ್ಗ ಸಿಟಿ ಮುನ್ಸಿಪಲ್ ಕೌನ್ಸಿಲ್

- ರಾಜಶೇಖರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕೆಆರ್‌ಐಡಿಎಲ್‌, ಸಿಂದಗಿ

- ಎಂ.ಡಿ. ಫಿರೋಜ್ ಖಾನ್, ಅಧ್ಯಕ್ಷರು, ವಕ್ಫ್ ಮಂಡಳಿ ಸಲಹಾ ಸಮಿತಿ, ಬೀದರ್

- ವಿಶ್ವಾಸ್, ಮಾಲೀಕರು, ವಿಶ್ವಾಸ್ ಜ್ಯುವೇಲರಿ

- ಕೆ.ಎಂ. ಸಯ್ಯದ್, ಕೆಪಿಸಿಸಿ ಸಂಯೋಜಕರು

- ಮೃಣಾಲ್ ಆರ್. ಹೆಬ್ಬಾಳ್ಕರ್, ಕಾಂಗ್ರೆಸ್ ನಾಯಕರು, ಬೆಳಗಾವಿ

- ಉಮೇಶ್ ಆರ್. ಕಾರಜೋಳ, ಬಿಜೆಪಿ ಯುವ ನಾಯಕರು, ಚಡಚಣ

- ಎಚ್.ಎಂ. ಹೂಡಿ ವಿಜಯ್‌ಕುಮಾರ್, ರಾಜಕೀಯ ನಾಯಕರು ಮತ್ತು ಸಮಾಜ ಸೇವಕರು, ಮಾಲೂರು

- ಡಾ.ಶೇಖರ್ ಆರ್.ಮಾನೆ, ಮಕ್ಕಳ ತಜ್ಞರು ಮತ್ತು ನಿರ್ದೇಶಕರು ಮಾನೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಬಾಗಲಕೋಟೆ

- ಡಾ.ಜಿ.ಎಸ್.ಮಹಾಬಲ, ಕೃಷಿ ತಂತ್ರಜ್ಞರು, ಚಿಕ್ಕಮಗಳೂರು

- ಮೀರಜ್ ಅನ್ವರ್, ಸೆಲೆಬ್ರಿಟಿ ಫ್ಯಾಷನ್ ಡಿಸೈನರ್‌

- ಬಿ.ಜಿ.ತಿಮ್ಮಾರೆಡ್ಡಿ, ಉದ್ಯಮ, ಸಮಾಜಕ ಸೇವಕರು, ಚಿತ್ರದುರ್ಗ

- ಬಸವರಾಜ ಕೌಜಲಗಿ, ಸಂಸ್ಥಾಪಕ ಅಧ್ಯಕ್ಷರು, ಎಕ್ಸ್‌ಲೆಂಟ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್ಸ್‌

- ಡಾ.ಸುಭಾಷ್ ಪಾಟೀಲ್ ಎಂ.ಡಿ., ಚಿಕಿತ್ಸಕರು, ನಿರ್ದೇಶಕರು ಪಾಟೀಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಬಾಗಲಕೋಟೆ