39 ಗಂಭೀರ ತಪ್ಪುಗಳಿದ್ದರೂ ಕೃಪಾಂಕ ಕೊಟ್ಟಿದ್ದು 5ಕ್ಕೆ : ಕೆಎಎಸ್ ಅಭ್ಯರ್ಥಿಗಳ ಆಕ್ರೋಶ

| N/A | Published : Feb 01 2025, 11:07 AM IST

KPSC New 01

ಸಾರಾಂಶ

ಕೆಎಎಸ್ ನೇಮಕಾತಿ ಪೂರ್ವಭಾವಿ ಮರುಪರೀಕ್ಷೆಯ ಎರಡು ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ ಕೆಪಿಎಸ್‌ಸಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡಿರುವುದರಿಂದ ಕನ್ನಡ ಅಭ್ಯರ್ಥಿಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

 ಬೆಂಗಳೂರು : ಕೆಎಎಸ್ ನೇಮಕಾತಿ ಪೂರ್ವಭಾವಿ ಮರುಪರೀಕ್ಷೆಯ ಎರಡು ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ ಕೆಪಿಎಸ್‌ಸಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡಿರುವುದರಿಂದ ಕನ್ನಡ ಅಭ್ಯರ್ಥಿಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ವಿದ್ಯಾರ್ಥಿ ಸಂಘಟನೆಗಳು, ವಿಷಯ ತಜ್ಞರು, ಕನ್ನಡ ಬೋಧಕರು ಸೇರಿ ಎರಡು ಪತ್ರಿಕೆಗಳ ಒಟ್ಟು 200 ಪ್ರಶ್ನೆಗಳನ್ನು ಪರಿಶೀಲಿಸಿದಾಗ ಕನ್ನಡ ವ್ಯಾಕರಣ ದೋಷ, ತಪ್ಪು ಪದಗಳ ಪ್ರಯೋಗ, ಅಪಾರ್ಥ ಸೇರಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ಒಟ್ಟು 79 ದೋಷಗಳು ಕಂಡು ಬಂದಿವೆ. ಅದರಲ್ಲಿ ಸಣ್ಣ ಪುಟ್ಟ ದೋಷಗಳನ್ನು ನಿರ್ಲಕ್ಷ್ಯಿಸಿದರೂ ಕನಿಷ್ಠ 39 ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕಾಗಿತ್ತು. ಆದರೆ, ಐದು ಪ್ರಶ್ನೆಗಳನ್ನು ಮಾತ್ರ ಕೃಪಾಂಕಕ್ಕೆ ಪರಿಗಣಿಸಲಾಗಿದೆ. 

ಈ ಮೂಲಕ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದವರಿಗೆ ಭಾರಿ ಅನ್ಯಾಯವಾಗಿದೆ ಎಂದ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡ ಪತ್ರಿಕೆಯಲ್ಲಿನ ದೋಷಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಎಸ್‌ಸಿ ಕಾರ್ಯದರ್ಶಿ ಮತ್ತು ಅಧ್ಯಕ್ಷರಿಗೆ ಪತ್ರ ಬರೆದು ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದರು.