ಅಕ್ರಮ ಶೆಡ್‌ ತೆರವು ಕಾರ್ಯಾಚರಣೆ ವಿಚಾರದಲ್ಲಿ ಮೂಗು ತೂರಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ‘ಬುಲ್ಡೋಜರ್‌ ನ್ಯಾಯಕ್ಕೂ ಅಕ್ರಮ ಒತ್ತುವರಿ ತೆರವಿಗೂ ಇರುವ ಅಂತರದ ಪರಿಜ್ಞಾನವಿಲ್ಲದ ರಾಜಕಾರಣಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ರಾಜ್ಯ ನಾಯಕರು ತೀವ್ರ ತಿರುಗೇಟು 

 ಬೆಂಗಳೂರು : ರಾಜಧಾನಿ ಬೆಂಗಳೂರಿನ ಅಕ್ರಮ ಶೆಡ್‌ ತೆರವು ಕಾರ್ಯಾಚರಣೆ ವಿಚಾರದಲ್ಲಿ ಮೂಗು ತೂರಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ‘ಬುಲ್ಡೋಜರ್‌ ನ್ಯಾಯಕ್ಕೂ ಅಕ್ರಮ ಒತ್ತುವರಿ ತೆರವಿಗೂ ಇರುವ ಅಂತರದ ಪರಿಜ್ಞಾನವಿಲ್ಲದ ರಾಜಕಾರಣಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ರಾಜ್ಯ ನಾಯಕರು ತೀವ್ರ ತಿರುಗೇಟು ನೀಡಿದ್ದು, ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ತಾಕೀತು ಮಾಡಿದ್ದಾರೆ.

ಪಿಣರಾಯಿ ವಿಜಯನ್‌ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ರಾಜ್ಯ ನಾಯಕರು, ಬುಲ್ಡೋಜರ್ ನ್ಯಾಯಕ್ಕೂ ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಪಿಣರಾಯಿ ವಿಜಯನ್ ಅವರಿಗೆ ವಾಸ್ತವ ಸಂಗತಿಗಳ ಅರಿವಿಲ್ಲ ಎಂದು ಟೀಕಿಸಿದ್ದಾರೆ.

ಸತ್ಯಾಸತ್ಯತೆ ಅರಿವಿಲ್ಲದೇ ಕೇರಳ ಮುಖ್ಯಮಂತ್ರಿ ಹಸ್ತಕ್ಷೇಪ

ಅಲ್ಲದೆ, ಸತ್ಯಾಸತ್ಯತೆ ಅರಿವಿಲ್ಲದೇ ಕೇರಳ ಮುಖ್ಯಮಂತ್ರಿ ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ಕಾರಣಕ್ಕೆ ಟೀಕೆ:ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಸ್ತವ ಸಂಗತಿ ಬಗ್ಗೆ ಅರಿವಿಲ್ಲದೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಬುಲ್ಡೋಜರ್ ನ್ಯಾಯಕ್ಕೂ ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ತಿಳಿ ಹೇಳಿದ್ದಾರೆ. ಜತೆಗೆ, ಅಕ್ರಮ ವಾಸಿಗಳಿಗೆ ತಾತ್ಕಾಲಿಕವಾಗಿ ಆಶ್ರಯ, ಊಟ ಇನ್ನಿತರೆ ವ್ಯವಸ್ಥೆ ಮಾಡಿಕೊಡುವಂತೆ ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಅಲ್ಲದೆ, ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಸತ್ಯಾಸತ್ಯತೆ ಅರಿಯದೇ ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ನಮಗೂ ಮಾನವೀಯತೆಯಿದ್ದು, ಒತ್ತುವರಿದಾರರು ಬೇರೆ ಜಾಗಗಳಿಗೆ ಹೋಗಲು ಅವಕಾಶ ನೀಡಲಾಗಿತ್ತು. ಬುಲ್ಡೋಜರ್‌ ಸಂಸ್ಕೃತಿ ನಮ್ಮಲ್ಲಿಲ್ಲ. ನಾವು ಸರ್ಕಾರಿ ಜಮೀನಿನ ರಕ್ಷಣೆ ಮಾಡಿಕೊಂಡಿದ್ದೇವೆ. ಹೊಸ ಕೊಳಗೇರಿ ನಿರ್ಮಾಣಕ್ಕೆ ಬಿಡುವುದಿಲ್ಲ. ಇದು ಅಲ್ಪಸಂಖ್ಯಾತ ಅಥವಾ ಬೇರೆ ವಿಚಾರವಲ್ಲ. ಕೇರಳದಲ್ಲಿ ಚುನಾವಣೆ ಸಮಯವಾದ ಕಾರಣ ಈ ರೀತಿಯ ರಾಜಕೀಯ ಮಾಡಲಾಗುತ್ತಿದೆ ಎಂದಿದ್ದಾರೆ.

ಇನ್ನೂ ಸಚಿವ ಪ್ರಿಯಾಂಕ್‌ ಖರ್ಗೆ, ಕೇರಳದಲ್ಲಿ ದಲಿತ ಯುವಕನ ಮೇಲೆ ಹಲ್ಲೆಯಾಗಿದ್ದು, ಆ ಬಗ್ಗೆ ಮಾತನಾಡದೇ, ಚುನಾವಣೆ ದೃಷ್ಟಿ ಹಾಗೂ ರಾಜಕೀಯಕ್ಕೆ ಬೆಂಗಳೂರಿನ ಶೆಡ್‌ ತೆರವು ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

 ಡಿಕೆಶಿಯಿಂದ ಮಾಹಿತಿ ಪಡೆದ ವೇಣುಗೋಪಾಲ್‌

ಕೇರಳದ ಸಿಎಂ ಟ್ವೀಟ್‌ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಘಟನೆಯ ಕುರಿತು ಶುಕ್ರವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಂದ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

ನಮ್ಮಲ್ಲಿ ಮಾತ್ರ

‘ಬೆಂಗಳೂರಿನ ಯಲಹಂಕದ ಕೋಗಿಲು ಎಂಬಲ್ಲಿ 200 ಮುಸ್ಲಿಂ ಮನೆ ಧ್ವಂಸ ಮಾಡಿದ್ದು ಸರಿಯಲ್ಲ’ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಖಂಡಿಸಿದ್ದನ್ನು ‘ಕನ್ನಡಪ್ರಭ’ ನಿನ್ನೆಯೇ ವರದಿ ಮಾಡಿತ್ತು.

--

ಪಿಣರಾಯಿ ಹೇಳಿದ್ದೇನು?

ಉತ್ತರ ಭಾರತದಲ್ಲಿ ಹಿಂದೆ ಮುಸ್ಲಿಮರ ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಬುಲ್ಡೋಜರ್‌ ನ್ಯಾಯ ಈಗ ದಕ್ಷಿಣಕ್ಕೂ ಹರಡುತ್ತಿದೆ. ಬೆಂಗಳೂರಲ್ಲಿ ಮನೆ ಒಡೆದು ತೀವ್ರ ಚಳಿಯ ನಡುವೆಯೂ 200 ಮುಸ್ಲಿಂ ಕುಟುಂಬಗಳನ್ನು ಹೊರದಬ್ಬಲಾಗಿದೆ.

- ಪಿಣರಾಯಿ ವಿಜಯನ್‌, ಕೇರಳ ಸಿಎಂ

--

ಪಿಣರಾಯಿ ರಾಜಕೀಯ

ವಾಸ್ತವ ಸಂಗತಿ ಬಗ್ಗೆ ಅರಿವಿಲ್ಲದೇ ಕೇರಳ ಸಿಎಂ ಪಿಣರಾಯಿ ವಿಜಯನ್ ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಿದ್ದಾರೆ. ಬುಲ್ಡೋಜರ್ ನ್ಯಾಯಕ್ಕೂ ಅಕ್ರಮ ಒತ್ತುವರಿ ತೆರವಿಗೂ ಭಾರಿ ವ್ಯತ್ಯಾಸವಿದೆ. ಅಕ್ರಮ ವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

--

ಬುಲ್ಡೋಜರ್‌ ಸಂಸ್ಕೃತಿ ಇಲ್ಲ

ಒತ್ತುವರಿ ಆಗಿದ್ದನ್ನು ತೆರವು ಮಾಡಿದ್ದೇವೆ. ನಮಗೂ ಮಾನವೀಯತೆಯಿದ್ದು, ಒತ್ತುವರಿದಾರರು ಬೇರೆ ಜಾಗಗಳಿಗೆ ಹೋಗಲು ಅವಕಾಶ ನೀಡಲಾಗಿತ್ತು. ಬುಲ್ಡೋಜರ್‌ ಸಂಸ್ಕೃತಿ ನಮ್ಮಲ್ಲಿಲ್ಲ. ಸತ್ಯಾಸತ್ಯತೆ ಅರಿಯದೇ ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಬೇಡ.

- ಡಿ.ಕೆ. ಶಿವಕುಮಾರ್‌, ಡಿಸಿಎಂ