ಆರೆಸ್ಸೆಸ್‌, ಬಿಜೆಪಿ ಮೇಲೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಕೆಂಡ

| Published : Mar 26 2024, 01:04 AM IST / Updated: Mar 26 2024, 12:24 PM IST

pinarayi vijayan

ಸಾರಾಂಶ

‘ಮುಸ್ಲಿಂ ವ್ಯಕ್ತಿಗಳು ಸೃಷ್ಟಿಸಿದ ಭಾರತ್‌ ಮಾತಾ ಕಿ ಜೈ ಹಾಗೂ ಜೈ ಹಿಂದ್‌ ಘೋಷಣೆಗಳನ್ನು ಸಂಘ ಪರಿವಾರದವರು ತ್ಯಜಿಸುತ್ತಾರಾ’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಶ್ನಿಸಿದ್ದಾರೆ.

ಪಿಟಿಐ ಮಲಪ್ಪುರಂ

‘ಮುಸ್ಲಿಂ ವ್ಯಕ್ತಿಗಳು ಸೃಷ್ಟಿಸಿದ ಭಾರತ್‌ ಮಾತಾ ಕಿ ಜೈ ಹಾಗೂ ಜೈ ಹಿಂದ್‌ ಘೋಷಣೆಗಳನ್ನು ಸಂಘ ಪರಿವಾರದವರು ತ್ಯಜಿಸುತ್ತಾರಾ’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತರೇ ಹೆಚ್ಚಿರುವ ಮಲಪ್ಪುರಂ ಜಿಲ್ಲೆಯಲ್ಲಿ ಸೋಮವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ವಿಜಯನ್‌, ‘ಅಜೀಮುಲ್ಲಾ ಖಾನ್‌ ಎಂಬುವರು ಭಾರತ್‌ ಮಾತಾ ಕೀ ಜೈ ಘೋಷಣೆ ಸೃಷ್ಟಿಸಿದವರು. 

ಅಬಿದ್‌ ಹಸನ್‌ ಎಂಬುವರು ಜೈ ಹಿಂದ್‌ ಘೋಷಣೆಯನ್ನು ಮೊದಲ ಬಾರಿ ಕೂಗಿದವರು. ಇದು ಸಂಘ ಪರಿವಾರದವರಿಗೆ ಗೊತ್ತಿದೆಯೋ ಇಲ್ಲವೋ ತಿಳಿಯದು.

ಮುಸ್ಲಿಮರನ್ನು ವಿರೋಧಿಸುವ ಅವರಿಗೆ ಈ ವಿಷಯ ತಿಳಿದರೆ ಇವೆರಡೂ ಘೋಷಣೆಗಳನ್ನು ತ್ಯಜಿಸಲು ಸಿದ್ಧರಿದ್ದಾರಾ’ ಎಂದು ಪ್ರಶ್ನಿಸಿದರು.

ಮುಸ್ಲಿಂ ರಾಜರು ಹಾಗೂ ಸಾಂಸ್ಕೃತಿಕ ನಾಯಕರು ದೇಶದ ಇತಿಹಾಸ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಅಂತಹ ಮುಸ್ಲಿಮರ ದೇಶಭಕ್ತಿಯನ್ನೇ ಸಂಘ ಪರಿವಾರದವರು ಪ್ರಶ್ನಿಸುತ್ತಾರೆ. 

50ಕ್ಕೂ ಹೆಚ್ಚು ಉಪನಿಷತ್ತುಗಳನ್ನು ಸಂಸ್ಕೃತದಿಂದ ಪರ್ಷಿಯನ್‌ ಭಾಷೆಗೆ ಅನುವಾದಿಸಿ ಜಗತ್ತಿನಾದ್ಯಂತ ತಲುಪುವಂತೆ ಮಾಡಿದ್ದು ಮೊಘಲ್‌ ಚಕ್ರವರ್ತಿ ಶಹಜಹಾನ್‌ನ ಪುತ್ರ ದಾರಾ ಶಿಕೋ. 

ಮುಸ್ಲಿಮರನ್ನು ಭಾರತದಿಂದ ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕು ಎನ್ನುವ ಸಂಘ ಪರಿವಾರದವರಿಗೆ ಇದೆಲ್ಲ ತಿಳಿದಿದೆಯೇ ಎಂದು ವಾಗ್ದಾಳಿ ನಡೆಸಿದರು.