ಜಿಎಸ್‌ಟಿ ನೋಟಿಸ್‌ಗೆ ಬಿಪಿ ಹೆಚ್ಚಾಗಿದೆ : ವ್ಯಾಪಾರಸ್ಥರು

| N/A | Published : Jul 22 2025, 10:09 AM IST

Understanding GST
ಜಿಎಸ್‌ಟಿ ನೋಟಿಸ್‌ಗೆ ಬಿಪಿ ಹೆಚ್ಚಾಗಿದೆ : ವ್ಯಾಪಾರಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದಂಡ ಮತ್ತು ಬಡ್ಡಿ ಕಟ್ಟಬೇಕು ಎಂಬ ನೋಟಿಸ್ ನೋಡಿ ನಮಗೆ ರಕ್ತದೊತ್ತಡ (ಬಿ.ಪಿ) ಹೆಚ್ಚಿದ್ದು, ಆತಂಕವಾಗಿದೆ. ನಿತ್ಯದ ದುಡಿಮೆ, ಕೆಲಸ ಕಾರ್ಯಗಳನ್ನು ಬಿಟ್ಟು ಈ ನೋಟಿಸ್‌ಗೆ ಏನು ಮಾಡುವುದು ಎಂಬ ಚಿಂತೆ ಶುರುವಾಗಿದೆ ಎಂದು ಸಣ್ಣ ವ್ಯಾಪಾರಿಗಳು ಅಳಲು ತೋಡಿಕೊಂಡರು.

ಬೆಂಗಳೂರು : ಲಕ್ಷಾಂತರ ರು. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದಂಡ ಮತ್ತು ಬಡ್ಡಿ ಕಟ್ಟಬೇಕು ಎಂಬ ನೋಟಿಸ್ ನೋಡಿ ನಮಗೆ ರಕ್ತದೊತ್ತಡ (ಬಿ.ಪಿ) ಹೆಚ್ಚಿದ್ದು, ಆತಂಕವಾಗಿದೆ. ನಿತ್ಯದ ದುಡಿಮೆ, ಕೆಲಸ ಕಾರ್ಯಗಳನ್ನು ಬಿಟ್ಟು ಈ ನೋಟಿಸ್‌ಗೆ ಏನು ಮಾಡುವುದು ಎಂಬ ಚಿಂತೆ ಶುರುವಾಗಿದೆ ಎಂದು ಸಣ್ಣ ವ್ಯಾಪಾರಿಗಳು ಅಳಲು ತೋಡಿಕೊಂಡರು.

ಸೋಮವಾರ ವಾಣಿಜ್ಯ ತೆರಿಗೆ ಇಲಾಖೆಯಿಂದ ಕೋರಮಂಗಲದ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ‘ಜಿಎಸ್ಟಿ ತಿಳಿಯಿರಿ’ ಸಭೆಗೆ ಆಗಮಿಸಿದ್ದ ನೂರಾರು ವ್ಯಾಪಾರಿಗಳು, ಅಧಿಕಾರಿಗಳ ಎದುರು ತಮ್ಮ ಆತಂಕ ಹೇಳಿಕೊಂಡರು.

ನಾನು ಹೋಲ್‌ಸೇಲ್ ಸಿಗರೇಟು ವ್ಯಾಪಾರ ಮಾಡುತ್ತೇನೆ. 100 ರು. ವ್ಯಾಪಾರಕ್ಕೆ 80 ಪೈಸೆ ಕಮಿಷನ್ ಸಿಗುತ್ತದೆ. ದಿನಕ್ಕೆ ಸುಮಾರು 800 ರು. ದುಡಿಯುತ್ತೇನೆ. ಆದರೆ, ಇಲಾಖೆಯಿಂದ 90 ಲಕ್ಷ ರು. ಕಟ್ಟುವಂತೆ ನೋಟಿಸ್ ಬಂದಿದೆ. ಅದನ್ನು ನೋಡಿ ಬಿಪಿ ಹೆಚ್ಚಾಗಿ ಅನಾರೋಗ್ಯವಾಗಿದೆ. ಹೆಂಡತಿ, ಮಕ್ಕಳು ಆತಂಕಗೊಂಡಿದ್ದಾರೆ. ಕೆಲಸ ಮಾಡಲು ಆಗುತ್ತಿಲ್ಲ ಎಂದು ವ್ಯಾಪಾರಿಯೊಬ್ಬರು ನೋವು ಹೇಳಿಕೊಂಡರು. ಇದೇ ವ್ಯಾಪಾರದಲ್ಲಿ ತೊಡಗಿದ್ದ ಅನೇಕ ವ್ಯಾಪಾರಿಗಳು ಇಂಥದ್ದೇ ಅಲವತ್ತು ತೋಡಿಕೊಂಡರು.

ಅದಕ್ಕೆ ಉತ್ತರಿಸಿದ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಮೀರಾ ಪಂಡಿತ್, ಕಂಪನಿಯಿಂದ ಮಳಿಗೆಗೆ ಸರಬರಾಜು ಮಾಡುತ್ತಿರುವ ಕಾರಣ ಅದಕ್ಕೆ ಸಂಬಂಧಿಸಿದ ದಾಖಲೆಗಳು, ರಸೀದಿಗಳನ್ನು ಒದಗಿಸಿದರೆ ತೆರಿಗೆ ಬಹುತೇಕ ಕಡಿಮೆಯಾಗುತ್ತದೆ ಎಂದರು.

ನಮ್ಮ ಬೇಕರಿಯಲ್ಲಿ ಹಾಲು, ಗುಟ್ಕಾ, ಸಿಗರೇಟು, ಹಾಲು, ಚಹಾ, ಬೇಕರಿ ಉತ್ಪನ್ನಗಳು, ಬಾಳೆಹಣ್ಣು, ಕುರುಕಲು ತಿಂಡಿಗಳು ಮಾರುತ್ತೇವೆ. ಆದರೆ, ಶೇ.18ರ ದರದಲ್ಲಿ ಜಿಎಸ್ಟಿ, ದಂಡ ಮತ್ತು ಬಡ್ಡಿ ಕಟ್ಟುವಂತೆ ನೋಟಿಸ್ ನೀಡಿದ್ದಾರೆ. ಎರಡ್ಮೂರು ವರ್ಷಗಳ ಹಿಂದಿನ ಲೆಕ್ಕ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು.

ಹಳೇ ದಾಖಲೆಗಳನ್ನು ಒದಗಿಸಬೇಕಾಗಿಲ್ಲ. ನಿಮ್ಮ ವ್ಯಾಪಾರದ ಕುರಿತು ಇತ್ತೀಚಿನ ರಸೀದಿಗಳನ್ನು ಒದಗಿಸಿದರೆ ಹಿಂದಿನ ಲೆಕ್ಕವನ್ನು ಅಂದಾಜು ಪರಿಗಣಿಸುತ್ತೇವೆ. ಅಲ್ಲದೆ, ನೀವು ಈ ಕುರಿತು ವಿವರಣೆ ನೀಡಿದಾಗ ಅಧಿಕಾರಿಗಳು ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ವ್ಯಾಪಾರದ ಸ್ವರೂಪ ನೋಡಿ, ಮೌಲ್ಯಮಾಪನ ಮಾಡಿ ಅದಕ್ಕೆ ಸೂಕ್ತ ಮತ್ತು ನ್ಯಾಯೋಚಿತ ಎನಿಸುವ ಜಿಎಸ್ಟಿ ವಿಧಿಸುತ್ತಾರೆ. ನೋಟಿಸ್‌ನಲ್ಲಿ ನೀಡಿರುವ ಮೊತ್ತ ಅಂತಿಮವಲ್ಲ ಎಂದು ಮೀರಾ ಪಂಡಿತ್ ಸ್ಪಷ್ಟಪಡಿಸಿದರು.

ಮಟನ್ ಜೊತೆ ಮಸಾಲೆ ಪ್ಯಾಕೆಟ್ ಮಾರಿದ್ರೆ ಜಿಎಸ್ಟಿ:

ಅಂಗಡಿಯಲ್ಲಿ ಕೇವಲ ಮಟನ್ ಮಾತ್ರ ಮಾರಿದರೆ ಜಿಎಸ್ಟಿ ಅನ್ವಯವಾಗುವುದಿಲ್ಲ. ಜಿಎಸ್ಟಿ ನೋಂದಣಿಯೂ ಬೇಕಿಲ್ಲ. ಆದರೆ, ಮಟನ್‌ ಅಡುಗೆ ತಯಾರಿಸಲು ಬ‍ಳಸುವ ಮಸಾಲೆ ಪ್ಯಾಕೆಟ್ಟುಗಳನ್ನೂ ಅಲ್ಲಿ ಮಾರಿದರೆ ಜಿಎಸ್ಟಿ ಕಟ್ಟಬೇಕು ಎಂದು ಮಟನ್ ವ್ಯಾಪಾರಿಯೊಬ್ಬರು ತನಗೂ ಜಿಎಸ್ಟಿ ಅನ್ವಯವಾಗುವುದೇ ಎಂಬ ಪ್ರಶ್ನೆಗೆ ಅಧಿಕಾರಿ ಉತ್ತರಿಸಿದರು.

ಬೇರೆಯವರ ಚೀಟಿ ಹಣದಿಂದ ಪೀಕಲಾಟ

ನಮ್ಮ ಏರಿಯಾದಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದೇನೆ. ಅದೇ ಭಾಗದಲ್ಲಿರುವ ಪರಿಚಿತ ವ್ಯಕ್ತಿಯೊಬ್ಬರು ಚೀಟಿ ವ್ಯವಹಾರ ನಡೆಸುತ್ತಾರೆ. ಚೀಟಿ ಹಾಕಿರುವ ಎಲ್ಲರೂ ಪರಿಚಯದವರೇ ಆಗಿದ್ದಾರೆ. ನನ್ನ ಅಂಗಡಿಯಲ್ಲಿ ಚೀಟಿ ಕೂಗಲಾಗುತ್ತದೆ. ಪರಿಚಯದ ಕಾರಣಕ್ಕೆ ಅನೇಕರು ನನ್ನ ಅಂಗಡಿಗೆ ಬಂದು ಯುಪಿಐ ಸ್ಕ್ಯಾನ್ ಮಾಡಿ ತಿಂಗಳ ಚೀಟಿ ಹಣ ಜಮೆ ಮಾಡಿದ್ದಾರೆ. ಆ ಹಣವನ್ನು ಚೀಟಿ ನಡೆಸುವವರಿಗೆ ವರ್ಗಾಯಿಸಿದ್ದೇನೆ. ಆ ಚೀಟಿ ವ್ಯವಹಾರಕ್ಕೆ ಲೈಸನ್ಸ್ ಇಲ್ಲ. ಈಗ ಇಲಾಖೆಯಿಂದ ನನಗೆ ನೋಟಿಸ್ ಬಂದಿದೆ. ಏನು ಮಾಡುವುದು ಎಂದು ಮತ್ತೊಬ್ಬ ವ್ಯಾಪಾರಿ ಅಳಲು ತೋಡಿಕೊಂಡರು. ಈ ಕುರಿತು ಸೂಕ್ತ ವಿವರಣೆ ನೀಡಿ ಎಂದು ಅಧಿಕಾರಿ ತಿಳಿಸಿದರು.

ಸಾಲ ಕೊಡುತ್ತಾರೆಂದು ಸಿಕ್ಕಾಕೊಂಡೆ!

ನಾನು ನಡೆಸುವ ವ್ಯವಹಾರದ ಮೇಲೆ ಸಾಲ ಕೊಡುವುದಾಗಿ ಫೋನ್‌ಪೇ ಮತ್ತು ಪೇಟಿಎಂನವರು ಹೇಳಿದ್ದರು. ಅದಕ್ಕಾಗಿ ಅವರು ಒದಗಿಸಿದ ಕ್ಯೂಆರ್ ಕೋಡ್‌ ಬಳಸಿ ಹಣ ಸ್ವೀಕರಿಸಿದೆ. ಸಾಲ ಪಡೆದು ಅದನ್ನು ತೀರಿಸಿದ್ದೇನೆ. ಆದರೆ, ಈಗ ನೋಡಿದರೆ ಅದೇ ಕ್ಯೂಆರ್ ಕೋಡ್‌ನಿಂದಾಗಿ ಇಲಾಖೆಯಿಂದ ನನಗೆ ನೋಟಿಸ್ ಬಂದಿದೆ ಎಂದು ಹಣ್ಣಿನ ವ್ಯಾಪಾರಿ ಬೇಸರ ವ್ಯಕ್ತಪಡಿಸಿದಾಗ, ಇಡೀ ಸಭಾಂಗಣ ನಗೆಗಡಲಲ್ಲಿ ಮುಳುಗಿತು.

Read more Articles on