ಆಂಧ್ರಕ್ಕೆ ರಾಜ್ಯದ ಕುಮ್ಕಿ ಆನೆಗಳ ಹಸ್ತಾಂತರ -ಸಹಕಾರ

| N/A | Published : May 19 2025, 10:48 AM IST

Sakaleshpura wild elephant attacked

ಸಾರಾಂಶ

ಆಂಧ್ರಪ್ರದೇಶದ ಮಾನವ-ಆನೆ ಸಂಘರ್ಷಕ್ಕೆ ಪರಿಹಾರ ನೀಡುವ ಉದ್ದೇಶದೊಂದಿಗೆ ಇದೇ ತಿಂಗಳ 21ರಂದು (ಬುಧವಾರ) ರಾಜ್ಯದಲ್ಲಿ ತರಬೇತಿ ಪಡೆದ ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶಕ್ಕೆ ರಾಜ್ಯ ಅರಣ್ಯ ಇಲಾಖೆ ಹಸ್ತಾಂತರಿಸಲಿದೆ.

 ಬೆಂಗಳೂರು : ಆಂಧ್ರಪ್ರದೇಶದ ಮಾನವ-ಆನೆ ಸಂಘರ್ಷಕ್ಕೆ ಪರಿಹಾರ ನೀಡುವ ಉದ್ದೇಶದೊಂದಿಗೆ ಇದೇ ತಿಂಗಳ 21ರಂದು (ಬುಧವಾರ) ರಾಜ್ಯದಲ್ಲಿ ತರಬೇತಿ ಪಡೆದ ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶಕ್ಕೆ ರಾಜ್ಯ ಅರಣ್ಯ ಇಲಾಖೆ ಹಸ್ತಾಂತರಿಸಲಿದೆ.

ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಆಂಧ್ರಪ್ರದೇಶದ ಮಾನವ-ಆನೆ ಸಂಘರ್ಷಕ್ಕೆ ಪರಿಹಾರ ಒದಗಿಸಲು ಕಾಡಾನೆಗಳನ್ನು ಸೆರೆ ಹಿಡಿಯಲು ಕರ್ನಾಟಕದ ತರಬೇತಿ ಪಡೆದ ಕುಮ್ಕಿ ಆನೆಗಳನ್ನು ನೀಡುವಂತೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಅರಣ್ಯ ಸಚಿವ ಪವನ್‌ ಕಲ್ಯಾಣ್‌ ಮನವಿ ಮಾಡಿದ್ದರು. ಅದರಂತೆ ಮೇ 21ರಂದು ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ವಿಧಾನಸೌಧದ ಮುಂಭಾಗ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಪವನ್‌ ಕಲ್ಯಾಣ್‌ ಅವರಿಗೆ ಪಳಗಿಸಿದ ಆನೆಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

2024ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಆನೆ-ಮಾನವ ಸಂಘರ್ಷ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳೊಂದಿಗೆ ವಿವಿಧ ವಿಚಾರಗಳ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರ ಭಾಗವಾಗಿ ಆಂಧ್ರಪ್ರದೇಶದಲ್ಲಿನ ಕಾಡಾನೆಗಳ ಉಪಟಳ ತಡೆಗೆ ಅವುಗಳನ್ನು ಸೆರೆ ಹಿಡಿಯಲು ರಾಜ್ಯ ನೆರವಾಗುವುದಾಗಿ ತಿಳಿಸಲಾಗಿತ್ತು. ಅದಕ್ಕೆ ಪೂರಕವಾಗಿ ಕಳೆದ ಸೆ.27ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಕುಮ್ಕಿ ಆನೆಗಳ ಹಸ್ತಾಂತರ ಕುರಿತು ಎರಡೂ ರಾಜ್ಯಗಳ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಇದೀಗ ಕುಮ್ಕಿ ಆನೆಗಳನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದಸರಾ ಆನೆಗಳ ಹಸ್ತಾಂತರ ಇಲ್ಲ

ಆಂಧ್ರಪ್ರದೇದ ಚಿತ್ತೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಿದಂತೆಲ್ಲ ಅದರ ಪರಿಣಾಮ ನಮ್ಮ ರಾಜ್ಯದ ಕೋಲಾರ ಜಿಲ್ಲೆಗೂ ಉಂಟಾಗುತ್ತಿದೆ. ಆಂಧ್ರಪ್ರದೇಶದಿಂದ ನಮ್ಮ ರಾಜ್ಯಕ್ಕೆ ಪುಂಡಾನೆಗಳು ಬರುವುದನ್ನು ತಡೆಯಲು ಆಂಧ್ರದಲ್ಲೇ ಕಾಡಾನೆಗಳ ಸೆರೆ ಕಾರ್ಯಾಚರಣೆ ಮಾಡಬೇಕಿದೆ. ಅದಕ್ಕೂ ಕುಮ್ಕಿ ಆನೆಗಳ ಹಸ್ತಾಂತರ ನೆರವಾಗಲಿದೆ. ಅಲ್ಲದೆ, ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಆಂಧ್ರಪ್ರದೇಶಕ್ಕೆ ನೀಡುತ್ತಿಲ್ಲ. ಬದಲಿಗೆ ತರಬೇತಿ ಪಡೆದ ಇತರ ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Read more Articles on