ಸಾರಾಂಶ
ರಾಜಧಾನಿಯಲ್ಲಿ ಸತತ 4ನೇ ದಿನ ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, ಗುರುವಾರ ರಾತ್ರಿ ನಗರದ ಕೇಂದ್ರ ಹಾಗೂ ಉತ್ತರ ಭಾಗದ ವಿವಿಧ ಕಡೆ ಧಾರಾಕಾರ ಮಳೆಯಾಗಿದೆ.
ಬೆಂಗಳೂರು : ರಾಜಧಾನಿಯಲ್ಲಿ ಸತತ 4ನೇ ದಿನ ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, ಗುರುವಾರ ರಾತ್ರಿ ನಗರದ ಕೇಂದ್ರ ಹಾಗೂ ಉತ್ತರ ಭಾಗದ ವಿವಿಧ ಕಡೆ ಧಾರಾಕಾರ ಮಳೆಯಾಗಿದೆ.
ಬುಧವಾರ ರಾತ್ರಿ ಆರಂಭಗೊಂಡ ಮಳೆ, ಗುರುವಾರ ಬೆಳಗಿನ ಜಾವದವರೆಗೆ ಒಂದೇ ಸಮನೆ ಮಳೆ ಸುರಿಯಿತು. ಗುರುವಾರ ಬೆಳಗ್ಗೆಯಿಂದ ಸಾಮಾನ್ಯದಂತೆ ಬಿಸಿಲ ವಾತಾವರಣ ಕಂಡು ಬಂತು. ಮಧ್ಯಾಹ್ನದ ವೇಳೆ ಮೋಡ ಕವಿದ ವಾತಾವರಣ ಅಲ್ಲಲಿ ಕಂಡು ಬಂದಿತು. ಆದರೆ, ರಾತ್ರಿ 9 ಗಂಟೆ ಸುಮಾರು ಧಾರಾಕಾರವಾಗಿ ಮಳೆ ಸುರಿಯಿತು. ಮೆಜೆಸ್ಟಿಕ್, ಮಲ್ಲೇಶ್ವರ, ಗಾಂಧಿನಗರ, ಚಾಮರಾಜಪೇಟೆ, ಡಬ್ಬಲ್ ರಸ್ತೆ, ಶಾಂತಿನಗರ, ಎಂ,ಜಿ.ರಸ್ತೆ, ವಿಧಾನಸೌಧ, ಹೆಬ್ಬಾಳ, ಯಲಹಂಕ. ಜಕ್ಕೂರು, ಹೊರಮಾವು, ಬಾಣಸವಾಡಿ, ಸಂಪಂಗಿರಾಮ ನಗರ, ಯಶವಂತಪುರ, ರಾಜಾಜಿನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಪುಲಕೇಶಿನಗರ, ಸಿಲ್ಕ್‌ಬೋರ್ಡ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಳೆಯಾಗಿದೆ.
ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಗಾಳಿಯಿಂದಾಗಿ 10ಕ್ಕೂ ಹೆಚ್ಚು ಕಡೆಗಳಲ್ಲಿ ರೆಂಬೆ ಕೊಂಬೆಗಳು ಮುರಿದುಬಿದ್ದ ಪರಿಣಾಮ ವಾಹನ ಸಂಚಾರದಲ್ಲಿ ಸಮಸ್ಯೆ ಉಂಟಾಯಿತು. ಹೆಬ್ಬಾಳ, ಮೇಕ್ರಿ ವೃತ್ತ, ಆರ್.ಟಿ ನಗರ, ಹೊರವರ್ತುಲ ರಸ್ತೆ, ಜಕ್ಕೂರು, ಬಾಣಸವಾಡಿ ಬಳಿ ಸಂಚಾರ ದಟ್ಟಣೆ ಎದುರಾಗಿ ವಾಹನ ಸವಾರರು ಮಳೆಯಲ್ಲಿ ತೊಯ್ದರು. ಪ್ರಮುಖವಾಗಿ ವೈಟ್ ಟಾಪಿಂಗ್ ರಸ್ತೆಗಳಲ್ಲೇ ನೀರು ನಿಂತು ಮೋರಿಗಳಿಗೆ ಸರಾಗವಾಗಿ ಹರಿಯದೆ ಸಮಸ್ಯೆ ಎದುರಾಯಿತು.
ಎಲ್ಲೆಲ್ಲಿ ಎಷ್ಟು ಮಳೆ: ಪುಲಕೇಶಿನಗರದಲ್ಲಿ ಅತಿ ಹೆಚ್ಚು 3 ಸೆಂ.ಮೀಮಳೆಯಾಗಿದೆ. ಜಕ್ಕೂರು 2.5, ಬಾಣಸವಾಡಿ 1.6, ಹೊರಮಾವು 1.4, ಸಂಪಂಗಿರಾಮ ನಗರ 1.2, ಪೀಣ್ಯ 1.1 ಹಾಗೂ ಶೆಟ್ಟಿಯಲ್ಲಿ 1 ಸೆಂ.ಮೀ ಮಳೆಯಾಗಿದೆ. ನಗರದಲ್ಲಿ ಶುಕ್ರವಾರವೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.