ತಡವಾಗಿ ಪ್ರಾರಂಭವಾಗಲಿರುವ ಪೂರ್ವ ಮುಂಗಾರು ಮಳೆ

| N/A | Published : May 15 2025, 01:45 AM IST / Updated: May 15 2025, 12:28 PM IST

ಸಾರಾಂಶ

ಪ್ರಸ್ತುತ ವರ್ಷ ಪೂರ್ವ ಮುಂಗಾರು ಮಳೆಗಳು ಕೈಕೊಟ್ಟ ಕಾರಣ, ತಾಲೂಕಿನ ಕೆಲವೇ ಬಾಗದಲ್ಲಿ ರೈತರು ಪೂರ್ವ ಮುಂಗಾರು ಬೆಳೆಗಳನ್ನು ಮಾತ್ರ ಬಿತ್ತನೆ ಮಾಡಿದ್ದು ಮಳೆಯ ಕೊರತೆಯಿಂದ ಪೂರ್ವ ಮುಂಗಾರು ಬೆಳೆಗಳನ್ನು ಬೆಳೆಯಲಾಗದೆ ಸಾಕಷ್ಟು ಆರ್ಥಿಕ ನಷ್ಟ 

 ತಿಪಟೂರು : ಪ್ರಸ್ತುತ ವರ್ಷ ಪೂರ್ವ ಮುಂಗಾರು ಮಳೆಗಳು ಕೈಕೊಟ್ಟ ಕಾರಣ, ತಾಲೂಕಿನ ಕೆಲವೇ ಬಾಗದಲ್ಲಿ ರೈತರು ಪೂರ್ವ ಮುಂಗಾರು ಬೆಳೆಗಳನ್ನು ಮಾತ್ರ ಬಿತ್ತನೆ ಮಾಡಿದ್ದು ಮಳೆಯ ಕೊರತೆಯಿಂದ ಪೂರ್ವ ಮುಂಗಾರು ಬೆಳೆಗಳನ್ನು ಬೆಳೆಯಲಾಗದೆ ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.

ಹಿಂದಿನಿಂದಲೂ ವಾಡಿಕೆಯಂತೆ ಪೂರ್ವ ಮುಂಗಾರು ಮಳೆಗಳಾದ ಅಶ್ವಿನಿ ಹಾಗೂ ಭರಣಿ ಮಳೆಗಳು ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲೇ ಪ್ರಾರಂಭವಾಗಿ ಬೇಸಿಗೆಯ ಧಗೆಯನ್ನು ಸ್ವಲ್ಪಮಟ್ಟಿಗಾದರೂ ತಣಿಸುತ್ತಿದ್ದವು. ಇದರಿಂದಾಗಿ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ಎಳ್ಳು ಜೊತೆಗೆ ತೊಗರಿಯನ್ನೂ ಬಿತ್ತಿ ಬೆಳೆಯುತ್ತಿದ್ದರು. 

ಹೆಸರು, ಉದ್ದು, ಹಲಸಂದಿ ಬೆಳೆಗಳು ಎರಡೂವರೆ ತಿಂಗಳಿಗೂ ಮುಂಚೆಯೆ ಕಟಾವಿಗೆ ಬರುತ್ತವಲ್ಲದೆ ರೈತರಿಗೆ ಆರ್ಥಿಕವಾಗಿ ಬಲ ತುಂಬುತ್ತಿದ್ದವು. ಅಲ್ಲದೆ ಇದೇ ಭೂಮಿಗೆ ಇಲ್ಲಿನ ಪ್ರಮುಖ ಆಹಾರ ಬೆಳೆಯಾದ ರಾಗಿ ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿಯೂ ಸಮಯಕ್ಕೆ ಸರಿಯಾಗಿ ಪೂರ್ವ ಮುಂಗಾರು ಮಳೆ ಬಾರದ ಕಾರಣ ಹೆಸರು, ಉದ್ದು ಮತ್ತಿತರೆ ಬೆಳೆಗಳ ಬಿತ್ತನೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ಕೆಲ ರೈತರು ಮಾತ್ರ ಹೆಸರು, ಉದ್ದು, ಎಳ್ಳನ್ನು ಬಿತ್ತನೆ ಮಾಡಿದ್ದು ಕಳೆದ ೧೦-೧೨ ದಿನಗಳಿಂದ ಮಳೆ ಕೈಕೊಟ್ಟಿದೆ.

 ರೈತರಿಗೆ ಆರ್ಥಿಕ ಹೊರೆ : ಪೂರ್ವ ಮುಂಗಾರು ಬೆಳೆಗಳನ್ನು ಬಿತ್ತಿದ್ದರೆ ರೈತರಿಗೆ ರಾಗಿ ಬೆಳೆ ಬಿತ್ತಲು ಸಾಲ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಹೆಸರು, ಉದ್ದು, ಎಳ್ಳು ಬೆಳೆಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ರಾಗಿ, ಗೊಬ್ಬರ, ಬಿತ್ತುವ ಖರ್ಚುಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ಮುಂಗಾರು ಬೆಳೆಗಳನ್ನೇ ಬಿತ್ತಿಲ್ಲದ ಕಾರಣ ರೈತರು ರಾಗಿ ಬಿತ್ತನೆ ಮಾಡಲು ಸಾಲ ಮಾಡುವ ಸ್ಥಿತಿ ಬಂದಿದ್ದು ರೈತರಿಗೆ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ.

 ಈಗಾಗಲೇ ಶಾಲೆಗಳು ಪ್ರಾರಂಭವಾಗುತ್ತಿದ್ದು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣದ ಅಭಾವ ಎದುರಾಗಿದೆ. ಮನೆ ಖರ್ಚು, ಆಸ್ಪತ್ರೆ ಹೀಗೆ ವಿವಿಧ ರೀತಿಯ ಖರ್ಚುಗಳು ಹೆಚ್ಚಾಗಿದ್ದು ಇದೂ ಸಾಲದೆಂದು ಮಳೆ ತಡವಾಗಿ ಬಂದದ್ದರಿಂದ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿ ನಿತ್ಯದ ಖರ್ಚಿಗಾಗಿ ಯಾವ ತರಕಾರಿ, ಬೆಳೆಗಳನ್ನು ಬೆಳೆದಿಲ್ಲ. ಇದರಿಂದ ರೈತ ಮತ್ತಷ್ಟು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. 

ಬಿತ್ತನೆ ಬೀಜ ಕೇಳುವವರಿಲ್ಲ : ಕೃಷಿ ಇಲಾಖೆ ಪೂರ್ವಮುಂಗಾರು ಬಿತ್ತನೆಗಳಾದ ಹೆಸರು, ಉದ್ದು, ತೊಗರಿ ಮತ್ತಿತರೆ ಬೀಜಗಳು ಹಾಗೂ ರಸಗೊಬ್ಬರವನ್ನು ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸ್ಟಾಕ್ ಮಾಡಿದ್ದರೂ ಕೇಳುವವರಿಲ್ಲ. ಸಮಯಕ್ಕೆ ಸರಿಯಾಗಿ ಮಳೆ ಬೀಳದ್ದರಿಂದ ರೈತರು ರಾಗಿಯತ್ತ ಚಿತ್ತ ಅರಿಸಿದ್ದಾರೆ. ಕೋಟ್‌ 1

ಈ ವರ್ಷವೂ ಮುಂಗಾರು ಭರಣಿ ಮಳೆ ಮುಗಿದು ಕೃತಿಕಾ ಮಳೆ ಪ್ರಾರಂಭವಾದರೂ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಲಾಗಿಲ್ಲ. ಈಗ ರಾಗಿ ಬಿತ್ತನೆ ಮಾಡಲು ಭೂಮಿಯನ್ನು ಸಿದ್ದಮಾಡಿಕೊಳ್ಳಲು ರೈತರು ಮುಂದಾಗಿದ್ದು ಆದರೆ ವರುಣ ಮಾತ್ರ ಕೃಪೆ ತೋರುತ್ತಿಲ್ಲ. 

ರೈತ ಸುರೇಶ್

ತಾಲೂಕಿನಲ್ಲಿ ಪೂರ್ವ ಮುಂಗಾರು ಬೆಳೆಗಳ ವಿಸ್ತೀರ್ಣ ಆರು ಸಾವಿರ ಹೆಕ್ಟೇರ್ ಗುರಿ ಹೊಂದಿದ್ದು ಕೃಷಿ ಇಲಾಖೆ ವ್ಯಾಪ್ತಿಯ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ಉದ್ದು ಮತ್ತು ತೊಗರಿ ಬಿತ್ತನೆ ಬೀಜಗಳು, ಯುರಿಯಾ, ಡಿ.ಎ.ಪಿ, ಎಂ.ಒ.ಪಿ ಹಾಗೂ ಇನ್ನಿತರ ಕಾಂಪ್ಲೆಕ್ಸ್ ರಸಗೊಬ್ಬರಗಳು ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದ್ದು, ಪ್ರಸಕ್ತ ಹಂಗಾಮಿಗೆ ರಸಗೊಬ್ಬರದ ಕೊರತೆ ಇರುವುದಿಲ್ಲ. 

- ಡಾ. ಎಂ.ಪಿ. ಪವನ್, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ತಿಪಟೂರು