ಗುಡುಗು ಸಹಿತ ಹಿಂಗಾರು ಮಳೆ ಅಬ್ಬರ - ಹಾಳಾದ ಬೆಳೆ - ಮಳೆಗೆ ಇಬ್ಬರು ಬಲಿ, ಸಿಡಿಲಿಗೆ 17 ಕುರಿ, ಮೇಕೆ ಸಾವು

| Published : Oct 24 2024, 09:59 AM IST

Karnataka Rain

ಸಾರಾಂಶ

ರಾಜಧಾನಿ ಸೇರಿ ರಾಜ್ಯದ ಮೂರ್ನಾಲ್ಕು ಜಿಲ್ಲೆಗಳಲ್ಲಿ ಹಿಂಗಾರು ಮಳೆ ಮುಂದುರೆದಿದ್ದು, ಮನೆ ಗೋಡೆ ಕುಸಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಬೆಂಗಳೂರು : ರಾಜಧಾನಿ ಸೇರಿ ರಾಜ್ಯದ ಮೂರ್ನಾಲ್ಕು ಜಿಲ್ಲೆಗಳಲ್ಲಿ ಹಿಂಗಾರು ಮಳೆ ಮುಂದುರೆದಿದ್ದು, ಮನೆ ಗೋಡೆ ಕುಸಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಸ್ತೆ ದಾಟುವಾಗ ಕೊಚ್ಚಿಹೋದ ಬೈಕ್‌ ಸವಾರನ ಮೃತದೇಶ ಪತ್ತೆಯಾಗಿದ್ದು, ಸಿಡಿಲಿನ ಆರ್ಭಟಕ್ಕೆ 17 ಕುರಿ, ಮೇಕೆಗಳು ಬಲಿಯಾಗಿವೆ. ಕಟಾವು ಹಂತದಲ್ಲಿದ್ದ ರಾಗಿ ಬೆಳೆ, ಮೇವು ನಾಶವಾಗಿದ್ದು, ಕೆಲವಡೆ ಡ್ಯಾಂಗಳು ಭರ್ತಿಯಾಗಿದ್ದು, ಕೆರೆಗಳು ಕೋಡಿ ಬಿದ್ದಿವೆ.

ಕಳೆದ ಎರಡ್ಮೂರು ದಿನಗಳಿಂದ ಬೆಂಗಳೂರಲ್ಲಿ ನಿರಂತವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಇನ್ನು ಬುಧವಾರ ತುಮಕೂರು, ಮಂಡ್ಯ, ದಕ್ಷಿಣ ಕನ್ನಡ ಸೇರಿ ಹಲವು ಕಡೆಗಳಲ್ಲಿ ಗುಡುಗು ಸಮೇತ ವರುಣ ಆರ್ಭಟಿಸಿದ್ದಾನೆ.

ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದ ಪರಿಣಾಮ ಸಹನಾ (27) ಎಂಬ ಯುವತಿ ಮೃತಪಟ್ಟಿದ್ದಾರೆ. ಇದೇ ವೇಳೆ, ನಾಗಮಂಗಲ ತಾಲೂಕಿನ ಅಣೆಚನ್ನಾಪುರದ ಕೆರೆ ಕೋಡಿ ಬಿದ್ದು ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಬೈಕ್‌ನಲ್ಲಿ ರಸ್ತೆ ಡಾಟುವಾಗ ಕಂಬದಹಳ್ಳಿಯ ಕೆ.ಎಂ.ರಾಮಚಂದ್ರೇಗೌಡ (67) ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.

ಇನ್ನು, ತುರುವೇಕೆರೆ ತಾಲೂಕಿನ ರಾಮಸಾಗರದಲ್ಲಿ ಸಿಡಿಲು ಬಡಿದು 17 ಕುರಿ, ಮೇಕೆ ಸಾವಿಗೀಡಾಗಿದ್ದು, ಸಮೀಪದಲ್ಲಿದ್ದ ಕುರಿಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಡಗೋಡದ ಸೋಮನಕೆರೆ ಹಳ್ಳಿದಲ್ಲಿ 12 ಎಮ್ಮೆಗಳು ಕೊಚ್ಚಿ ಹೋಗಿದ್ದು, ಅವುಗಳ ಕಳೇಬರ ಪತ್ತೆಯಾಗಿದೆ.

ಇದೇ ವೇಳೆ, ತಿಪಟೂರು ತಾಲೂಕಿನಲ್ಲಿ ಕಟಾವು ಹಂತದಲ್ಲಿದ್ದ ಶೇ.75ರಷ್ಟು ರಾಗಿ ಪೈರು ಹಾಗೂ ಮೇವು ನೆಲಕ್ಕೆ ಬಾಗಿದ್ದು, ಅನ್ನದಾತನ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಾದ್ಯಂತ ಧಾರಕಾರ ಮಳೆಯಾಗಿದ್ದು, ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಡಕಾಗಿದೆ. ಕಡಬ ಆಸ್ಪತ್ರೆ ಸಿಬ್ಬಂದಿಯ ಕ್ವಾಟ್ರಸ್ ಹಾಗೂ ಕೃಷಿ ಪ್ರದೇಶಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕೂಡ್ಲಿಗಿ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಕೆರೆ ಕೋಡಿ ಒಡೆದು 500 ಮನೆಗಳು ಜಲಾವೃತಗೊಂಡಿವೆ.

ಕೋಡಿ ಬಿದ್ದ ತೀತಾ ಜಲಾಶಯ:

ಕೊರಟಗೆರೆ ತಾಲೂಕಿನ ಏಕೈಕ ತೀತಾ ಜಲಾಶಯಕ್ಕೆ ಜಯಮಂಗಲಿ ನದಿಯ ನೀರು ಹರಿದು ಬಂದಿದ್ದು, ತಡರಾತ್ರಿ ಕೋಡಿ ಬಿದ್ದಿದೆ. ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನದ ಸಮೀಪವಿರುವ ಜಲಾಶಯದಿಂದ ನೀರು ದುಮ್ಮುಕ್ಕುತ್ತಿರುವುದನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಇಲ್ಲಿ ಪ್ರವಾಸೋದ್ಯೋಮ ಇಲಾಖೆಯಿಂದ ಬೋಟಿಂಗ್, ಪಾರ್ಕ್ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. 

ಸುಪ್ರಸಿದ್ಧ ಮಧುಗಿರಿಯ ಏಕಶಿಲಾ ಬೆಟ್ಟದ ಕಲ್ಲು ಕೋಟೆ ಗೋಡೆ ಮಳೆಯ ಹೊಡೆತಕ್ಕೆ ಕುಸಿದು ಬೀಳುತ್ತಿದೆ. ಹಲವಾರು ಜನರನ್ನು ತನ್ನತ್ತ ಸೆಳೆಯುವ ಬೆಟ್ಟದ ಕೋಟೆ ಗೋಡೆಯು ತೇವಾಂಶದಿಂದಾಗಿ ಶಿಥಿಲಗೊಂಡಿದ್ದು, ಮುನ್ನೆಚ್ವರಿಕೆ ಕೈಗೊಳ್ಳದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಿರುವ ನಾಗರಿಕರು, ಪ್ರವಾಸಿಗರು ರಾಜ್ಯ ಪ್ರವಾಸೋಧ್ಯಮ ಮತ್ತು ಕೇಂದ್ರ ಪುರಾತತ್ವ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.