ಸಾರಾಂಶ
ತಾವರೆಕೆರೆ ಮುಖ್ಯರಸ್ತೆಯ ಜಿಎಸ್ ಸೂಟ್ಸ್ ಹೋಟೆಲ್‌ನ ಎಲ್ಇಡಿ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತು ಅವಾಚ್ಯ ಪದ ಹಾಕಿದ ಪ್ರಕರಣ ಸಂಬಂಧ ಹೋಟೆಲ್‌ನ ಮ್ಯಾನೇಜರ್‌ನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ತಾವರೆಕೆರೆ ಮುಖ್ಯರಸ್ತೆಯ ಜಿಎಸ್ ಸೂಟ್ಸ್ ಹೋಟೆಲ್‌ನ ಎಲ್ಇಡಿ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತು ಅವಾಚ್ಯ ಪದ ಹಾಕಿದ ಪ್ರಕರಣ ಸಂಬಂಧ ಹೋಟೆಲ್‌ನ ಮ್ಯಾನೇಜರ್‌ನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಾಸರಗೊಡು ಮೂಲದ ನಿವಾಸಿ ಸರ್ಫರಾಜ್(32) ಬಂಧಿತ. ಶನಿವಾರ ಸರ್ಫರಾಜ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದ ಪೊಲೀಸರು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಸದ್ಯ ಕೇರಳದಲ್ಲಿರುವ ಹೋಟೆಲ್ ಮಾಲೀಕ ಜಮ್‌ಶದ್‌ಗೆ ನೋಟಿಸ್ ಜಾರಿಗೊಳಿಸಲಾಗಿದೆ. ಶೀಘ್ರದಲ್ಲೇ ಆತ ವಿಚಾರಣೆಗೆ ಹಾಜರಾಗಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋರ್ಡ್ ಆನ್ ಮಾಡದಂತೆ ಸೂಚಿಸಿದ್ದೆ:
ಇನ್ನು ಹೋಟೆಲ್‌ಗೆ ಎಲ್‌ಇಡಿ ಡಿಸ್ ಪ್ಲೇ ಬೋರ್ಡ್ ಮಾಡಿಕೊಟ್ಟಿದ್ದ ಮಡಿವಾಳದ ಡಿಜಿಟಲ್ ಆರ್ಟ್ಸ್ ಅಂಗಡಿಯ ರಾಯ್ ಎಂಬುವವರನ್ನು ಪೊಲೀಸರು ವಿಚಾರಣೆ ಮಾಡಿ ಹೇಳಿಕೆ ದಾಖಲಿಸಿದ್ದಾರೆ. ಕೆಲ ತಿಂಗಳ ಹಿಂದೆ ಹೋಟೆಲ್‌ಗೆ ಎಲ್‌ಇಡಿ ಡಿಸ್‌ಪ್ಲೇ ಬೋರ್ಡ್ ಮಾಡಿಕೊಟ್ಟಿದ್ದೆ. ಬೋರ್ಡ್‌ಗೆ ವೈಫೈ ಕನೆಕ್ಟ್ ಮಾಡಲಾಗಿತ್ತು. ಪಾಸ್ ವರ್ಡ್ ಮುಖಾಂತರ ಪದಗಳ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಮೇ 8ರಂದು ಬೋರ್ಡ್‌ನಲ್ಲಿ ಮೋಟೋ ಬೈ ಬೈ ಇತ್ಯಾದಿ ಅನಗತ್ಯ ಪದಗಳು ಸ್ಕ್ರಾಲ್ ಆಗುತ್ತಿದ್ದರಿಂದ ಹೋಟೆಲ್‌ನ ಮ್ಯಾನೇಜರ್ ನನ್ನ ಗಮನಕ್ಕೆ ತಂದಿದ್ದರು.
ಈ ವೇಳೆ ನಾನು ಸ್ಥಳಕ್ಕೆ ತೆರಳಿ ಬೋರ್ಡ್ ಪರಿಶೀಲಿಸಿ ಪಾಸ್‌ವರ್ಡ್ ಹಾಕಿ ಪದಗಳನ್ನು ಬದಲಿಸಲು ಪ್ರಯತ್ನಿಸಿದ್ದೆ. ಆದರೆ, ಬದಲಾವಣೆ ಸಾಧ್ಯವಾಗಿರಲಿಲ್ಲ. ಬಳಿಕ ಯಾರೋ ಹ್ಯಾಕ್ ಮಾಡಿರುವುದು ಗೊತ್ತಾಗಿತ್ತು. ಹೀಗಾಗಿ ಡಿಸ್‌ಪ್ಲೇ ಬೋರ್ಡ್‌ನ ಮದರ್ ಬೋರ್ಡ್ ಬದಲಿಸಬೇಕು. ಅಲ್ಲಿಯವರೆಗೂ ಬೋರ್ಡ್ ಆನ್ ಮಾಡಬೇಡಿ ಎಂದು ಹೋಟೆಲ್ ಮ್ಯಾನೇಜರ್‌ಗೆ ಹೇಳಿದ್ದೆ. ಆದರೂ ಬೋರ್ಡ್ ಆನ್ ಮಾಡಿದ್ದಾರೆ. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ ಎಂದು ರಾಯ್ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಾನಲ್ಲ, ಸಿಬ್ಬಂದಿ ಮಾಡಿದ್ದು:
ಬಂಧಿತ ಮ್ಯಾನೇಜರ್ ಸರ್ಫರಾಜ್ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ಕಳೆದ ಐದು ತಿಂಗಳಿಂದ ಜಿಎಸ್ ಸೂಟ್ಸ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ರಾಯ್ ಸೂಚನೆಯಂತೆ ಡಿಸ್ ಪ್ಲೇ ಬೋರ್ಡ್ ಆನ್ ಮಾಡದಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಿದ್ದೆ. ಆದರೆ, ಕೆಲ ದಿನಗಳ ಹಿಂದೆ ಹೋಟೆಲ್ ಸಿಬ್ಬಂದಿ ಬೋರ್ಡ್ ಆನ್ ಮಾಡಿದ್ದಾರೆ. ಹೀಗಾಗಿ ಬೋರ್ಡ್‌ನಲ್ಲಿ ಅಶ್ಲೀಲ ಪದ ಸ್ಕ್ರಾಲ್ ಆಗಿವೆ. ಈ ಬಗ್ಗೆ ನನ್ನ ಗಮನಕ್ಕೆ ಬರುತ್ತಿದ್ದಂತೆ ಬೋರ್ಡ್ ಆಫ್ ಮಾಡಿಸಿದ್ದೆ. ಅಷ್ಟರಲ್ಲಿ ಯಾರೋ ಅಶ್ಲೀಲ ಪದ ಸ್ಕ್ರಾಲ್ ಆಗುತ್ತಿರುವುದನ್ನು ಗಮನಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಉದ್ದೇಶಪೂರ್ವಕವಾಗಿ ಅಶ್ಲೀಲ ಪದ ಹಾಕಿಲ್ಲ. ನಿರ್ಲಕ್ಷ್ಯದಿಂದ ಹೀಗೆ ಆಗಿದೆ ಎಂದು ಮ್ಯಾನೇಜರ್ ಸರ್ಫರಾಜ್ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಾಲೀಕನಿಗೆ ನೋಟಿಸ್ ಜಾರಿ:
ಈ ಪ್ರಕರಣ ಸಂಬಂಧ ಪೊಲೀಸರು ಹೋಟೆಲ್‌ನ ಐದು ಮಂದಿ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ.
ಇನ್ನು ಜಿಎಸ್ ಹೋಟೆಲ್ ಮಾಲೀಕ ಜಮ್‌ಶದ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯ ಜಮ್‌ಶದ್ ಕೇರಳದಲ್ಲಿದ್ದು, ಶೀಘ್ರದಲ್ಲೇ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ:
ತಾವರೆಕೆರೆ ಮುಖ್ಯರಸ್ತೆಯ ಭುವನಪ್ಪ ಲೇಔಟ್‌ನ ಜಿಎಸ್ ಸೂಟ್ಸ್ ಹೋಟೆಲ್‌ನ ಎಲ್ಇಡಿ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತ ಅಶ್ಲೀಲ ಪದ ಸ್ಕ್ರಾಲ್ ಆಗುತ್ತಿರುವ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ್ದ ಮಡಿವಾಳ ಠಾಣೆ ಪಿಎಸ್‌ಐ ರಮೇಶ್ ಹೂಗಾರ್ ಹೋಟೆಲ್ ಬಳಿ ತೆರಳಿ ಬೋರ್ಡ್ ಜಪ್ತಿ ಮಾಡಿದ್ದರು. ಈ ಸಂಬಂಧ ಹೋಟೆಲ್ ಮಾಲೀಕ ಜಮ್‌ಶದ್ ಮತ್ತು ಮ್ಯಾನೇಜರ್ ಸರ್ಫರಾಜ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು. ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರನ್ನು ನಿಂದಿಸಿದ್ದಕ್ಕೆ ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.
ಹೋಟೆಲ್‌ಗೆ ಬೀಗ ಜಡಿದ ಬಿಬಿಎಂಪಿ
ಜಿಎಸ್ ಹೋಟೆಲ್ ನಡೆಸಲು ಮಾಲೀಕ ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಹೋಟೆಲ್‌ಗೆ ಬಿಗ ಜಡಿದು ಬಂದ್ ಮಾಡಿಸಿದ್ದಾರೆ. ಹೋಟೆಲ್‌ನ ಮಾಲೀಕನಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.