ಸಾರಾಂಶ
ರಾಜಧಾನಿ ಬೆಂಗಳೂರಿನಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಕಳೆದೆರಡು ದಿನ ಸುರಿದ ಅಬ್ಬರದ ಮಳೆಯಿಂದ ತೊಂದರೆಗೆ ಸಿಲುಕಿದ ಜನರ ಬದುಕು ಸಹಜ ಸ್ಥಿತಿಗೆ ಬಂದಿಲ್ಲ.
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಕಳೆದೆರಡು ದಿನ ಸುರಿದ ಅಬ್ಬರದ ಮಳೆಯಿಂದ ತೊಂದರೆಗೆ ಸಿಲುಕಿದ ಜನರ ಬದುಕು ಸಹಜ ಸ್ಥಿತಿಗೆ ಬಂದಿಲ್ಲ.
ಕಳೆದ ಎರಡು ದಿನ ಸುರಿದ ಮಳೆಗೆ ನಗರದ ಯಲಹಂಕ, ದಾಸರಹಳ್ಳಿ, ಮಹದೇವಪುರ ಸುಮಾರು 45ಕ್ಕೂ ಅಧಿಕ ತಗ್ಗು ಪ್ರದೇಶದ ಲೇಔಟ್‌ಗಳು ಜಲಾವೃತಗೊಂಡು ಸಾವಿರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಈ ಪೈಕಿ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್, ಟಾಟಾ ನಗರ, ಮಹದೇವಪುರದ ಸಾಯಿಲೇಔಟ್ ಹಾಗೂ ವಡ್ಡರಪಾಳ್ಯ ಹೊರತು ಪಡಿಸಿ ಉಳಿದ ಬಡಾವಣೆಗಳ ನೀರು ಬುಧವಾರ ತೆರವುಗೊಂಡಿದೆ.
ನೀರು ಕಡಿಮೆಯಾಗುತ್ತಿದಂತೆ ನಿವಾಸಿಗಳು ಮನೆಗಳನ್ನು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದರು. ಬಟ್ಟೆ, ಹಾಸಿಗೆ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಬಿಸಿಲಿನಲ್ಲಿ ಒಣಗಿಸಿಕೊಳ್ಳುವುದಕ್ಕೆ ಮುಂದಾದರು. ಉಳಿದಂತೆ ವಾಟರ್ ಪಂಪ್, ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್, ಮಿಕ್ಸಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ ದುರಸ್ತಿಗೆ ತೆಗೆದುಕೊಂಡು ಹೊರಟ್ಟಿದ್ದರು.
ನೀರು ಶೇಖರಣೆ ಮಾಡುವ ತೊಟ್ಟಿಯಲ್ಲಿ ತುಂಬಿಕೊಂಡಿದ್ದ ಕೊಳಚೆ ನೀರನ್ನು ಜನರು ಸ್ವಚ್ಛಗೊಳಿಸುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು. ಕುಡಿಯಲು ಮಿನರಲ್ ವಾಟರ್, ಹೋಟೆಲ್‌ನಿಂದ ಊಟ ತೆಗೆದುಕೊಂಡು ಬರಲಾಗುತ್ತಿತ್ತು.
ರಸ್ತೆ ಸೇರಿದಂತೆ ನೆಲ ಮಹಡಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್, ಕಾರು, ಆಟೋ ಸೇರಿದಂತೆ ಮೊದಲಾದ ವಾಹನಗಳು ನೀರಿನಲ್ಲಿ ಮುಳುಗಿದ್ದರಿಂದ ವಾಹನಗಳಲ್ಲಿ ಭಾರೀ ಪ್ರಮಾಣ ಕೆಸರು ತುಂಬಿಕೊಂಡಿತ್ತು. ಬುಧವಾರ ಅವುಗಳ ಸ್ವಚ್ಚಗೊಳಿಸುವ ಕಾರ್ಯ ನಡೆಸುತ್ತಿರುವುದು ಕಂಡು ಬಂತು. ಕೆಲವು ವಾಹನಗಳನ್ನು ಬೇರೆಗೆ ಎಳೆದುಕೊಂಡು ಹೋಗಿ ರಿಪೇರಿ ಮಾಡಿಸಬೇಕಾಯಿತು.
ಫ್ಲ್ಯಾಟ್‌ನಿಂದ ಹೊರ ಬರಲು ಜನ ನಿರಾಸಕ್ತಿ: ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಸ್ವಲ್ಪ ಪ್ರಮಾಣದಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಈ ನಡುವೆ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ಬುಧವಾರ ಮುಂದುವರೆದಿತ್ತು. ಆದರೆ, 30 ಮನೆಯವರು ಮನೆಯಿಂದ ಸ್ಥಳಾಂತರಕ್ಕೆ ನಿರಾಸಕ್ತಿ ವ್ಯಕ್ತಪಡಿಸಿದರು. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಮನೆ ಬಾಗಿಲು ಬಳಿ ನಿಂತು ಮನವೋಲಿಸುವ ಪ್ರಯತ್ನ ನಡೆಸಿದರು. ಇನ್ನೂ 27 ಪ್ಲಾಟ್‌ನಲ್ಲಿ ಜನರು ವಾಸವಿದ್ದಾರೆ.
ಮಂಗಳವಾರ ದೋಣಿ ಬಳಕೆ ಮಾಡಿಕೊಂಡು ಜನರನ್ನು ಸ್ಥಳಾಂತರ ಕಾರ್ಯ ನಡೆಸಿದ್ದ ರಕ್ಷಣಾ ತಂಡಗಳು, ಬುಧವಾರ ಟ್ರ್ಯಾಕ್ಟರ್ ಬಳಸಿ ರಕ್ಷಣಾ ಕಾರ್ಯ ನಡೆಸಿದರು. ಸ್ಥಳಾಂತರಗೊಂಡವರಿಗೆ ತಮ್ಮದೇ ವೆಚ್ಚದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸೂಚಿಸಲಾಗಿತ್ತು.
ಬಿಬಿಎಂಪಿಯಿಂದ ಸ್ವಚ್ಛತಾ ಕಾರ್ಯ: ಜಲಾವೃತಗೊಂಡ ಬಡಾವಣೆಗಳಲ್ಲಿ ಬಿಬಿಎಂಪಿ ಪೌರಕಾರ್ಮಿಕರು ಸೇರಿದಂತೆ ಮೊದಲಾದವರು ಬುಧವಾರ ಸ್ವಚ್ಛತಾ ಕಾರ್ಯ ನಡೆಸಿದರು. ಜತೆಗೆ, ಸಾಂಕ್ರಮಿಕ ರೋಗ ಹರಡದಂತೆ ಔಷಧಿ, ಬ್ಲೀಚಿಂಗ್ ಪುಡಿ ಹಾಕುವುದು. ಕಸ ವಿಲೇವಾರಿ ಮಾಡುವ ಕಾರ್ಯ ನಡೆಸಿದರು. ಬಿಬಿಎಂಪಿಯಿಂದ ಆಹಾರ ಮತ್ತು ಕುಡಿಯುವ ನೀರು ವಿತರಣೆ ಕಾರ್ಯ ನಡೆಸಲಾಯಿತು.
ನೀರಿನಲ್ಲಿ ಮಕ್ಕಳ ಅಟ: ಮಳೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಶಾಲೆಗಳನ್ನು ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಪ್ರವಾಹ ಉಂಟಾದ ಪ್ರದೇಶದಲ್ಲಿನ ಮಕ್ಕಳು ಮನೆ ಮುಂದೆ ನಿಂತ ನೀರಿನಲ್ಲಿ ಆಟವಾಡಿ ಕಾಲ ಕಳೆದರು.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))