ಉ. ಭಾರತೀಯರಿಂದಾಗಿ ಬೆಂಗ್ಳೂರಲ್ಲಿ ಕ್ರೈಂ ಹೆಚ್ಚಳ - ಫುಡ್‌ ಡೆಲಿವರಿ ಹೆಸರಲ್ಲಿ ಡ್ರಗ್ಸ್‌ ಸಾಗಣೆ

| Published : Oct 30 2024, 10:48 AM IST

Crime News

ಸಾರಾಂಶ

ಗತ್ತಿನ ಪ್ರಮುಖ ನಗರದಲ್ಲಿ ಒಂದಾದ ರಾಜಧಾನಿ ಬೆಂಗಳೂರಿಗೆ ಉತ್ತರ ಭಾರತ ಮೂಲದವರು ಉದ್ಯೋಗದ ಕಾರಣಕ್ಕೆ ಭಾರೀ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ

ಮೋಹನ ಹಂಡ್ರಂಗಿ

 ಬೆಂಗಳೂರು : ಜಗತ್ತಿನ ಪ್ರಮುಖ ನಗರದಲ್ಲಿ ಒಂದಾದ ರಾಜಧಾನಿ ಬೆಂಗಳೂರಿಗೆ ಉತ್ತರ ಭಾರತ ಮೂಲದವರು ಉದ್ಯೋಗದ ಕಾರಣಕ್ಕೆ ಭಾರೀ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ. ಇದರ ಜತೆಗೆ ನಗರದಲ್ಲಿ ಜರುಗುತ್ತಿರುವ ಅಪರಾಧ ಕೃತ್ಯಗಳಲ್ಲಿ ಉತ್ತರ ಭಾರತ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಇವರು ಸಹ ಪ್ರಮುಖ ಕಾರಣರಾಗಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ನಗರದ ಕಟ್ಟಡ ನಿರ್ಮಾಣ, ಫುಡ್‌ ಡೆಲಿವರಿ, ಕೈಗಾರಿಕೆಗಳು, ಗಾರ್ಮೆಂಟ್ಸ್‌, ಖಾಸಗಿ ಸೆಕ್ಯೂರಿಟಿ, ಹೋಟೆಲ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಉದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಉತ್ತರ ಭಾರತ ಮೂಲದ ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಕೆಲವರು ದ್ವೇಷ, ಸ್ವಾರ್ಥ, ದುಶ್ಚಟ, ಮೋಜು-ಮಸ್ತಿ, ಸುಲಭ ಹಣ ಸಂಪಾದನೆಗಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೆಲ ಪ್ರಕರಣಗಳು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ ಬೆಂಗಳೂರು ಅದರಲ್ಲೂ ಕನ್ನಡಿಗರ ಘನತೆಗೆ ಧಕ್ಕೆಯಾಗುತ್ತಿದೆ.

ಬೆಂಗಳೂರು ಮಹಾನಗರ ಐಟಿ-ಬಿಟಿ, ನವೋದ್ಯಮ, ಆಟೋಮೊಬೈಲ್‌ ಸೇರಿ ಹಲವು ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಆದರೆ, ಇಲ್ಲಿನ ಅಪರಾಧ ಚಟುವಟಿಕೆಗಳಿಂದ ಹಲವು ಬಾರಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ನಗರದ ಖ್ಯಾತಿಗೆ ಧಕ್ಕೆಯಾಗಿದೆ. ಅದರಲ್ಲೂ ಉತ್ತರ ಭಾರತ ಮೂಲದ ವಲಸಿಗರು ನಡೆಸುವ ದುಷ್ಕೃತ್ಯಗಳು ನಗರದ ಹೆಸರನ್ನು ಹೆಚ್ಚು ಕೆಡಿಸುತ್ತಿವೆ. ಈ ವಲಸಿಗರ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವುದು ಸವಾಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ಫುಡ್‌ ಡೆಲಿವರಿ ಹೆಸರಿನಲ್ಲಿ ಡ್ರಗ್ಸ್‌ ಡೆಲಿವರಿ!:

ಉತ್ತರ ಭಾರತ ಮೂಲದ ಬಿಹಾರ, ಒಡಿಶಾ, ಉತ್ತರಪ್ರದೇಶ, ಮಧ್ಯಪ್ರದೇಶ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ಯುವಕರು ನಗರದಲ್ಲಿ ಆನ್‌ಲೈನ್‌ ಫುಡ್‌ ಡೆಲಿವರಿ ಕೆಲಸ ಮಾಡಿಕೊಂಡಿದ್ದಾರೆ. ಈ ಪೈಕಿ ಕೆಲವರು ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸುವ ದುರಾಸೆಯಿಂದ ಡ್ರಗ್ಸ್‌ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಫುಡ್‌ ಡೆಲಿವರಿ ಬಾಯ್‌ ಸೋಗಿನಲ್ಲಿ ಗಿರಾಕಿಗಳಿಗೆ ಗಾಂಜಾ, ಎಂಡಿಎಂಎ, ಕೊಕೇನ್‌ ಸೇರಿ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದಾರೆ. ನಗರದಲ್ಲಿ ಒಂದು ತಿಂಗಳಲ್ಲಿ ದಾಖಲಾಗುವ ಎನ್‌ಡಿಪಿಎಸ್‌ ಪ್ರಕರಣಗಳಲ್ಲಿ ಶೇ.50ರಷ್ಟು ಆರೋಪಿಗಳು ಉತ್ತರ ಭಾರತ ಮೂಲದ ಫುಡ್‌ ಡೆಲಿವರಿ ಬಾಯ್‌ಗಳೇ ಆಗಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಪಬ್‌-ಬಾರ್‌ಗಳಲ್ಲಿ ಗಲಾಟೆ, ಅನುಚಿತ ವರ್ತನೆ:

ಹೊರರಾಜ್ಯಗಳ ಸಾಕಷ್ಟು ಐಟಿ-ಬಿಟಿ ಉದ್ಯೋಗಿಗಳು ನಗರದ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಬಹುತೇಕರು ವಾರಾಂತ್ಯ ದಿನಗಳಲ್ಲಿ ಪಬ್‌, ಬಾರ್‌ಗಳಲ್ಲಿ ಪಾರ್ಟಿ ಮಾಡಿ ಕಂಠಮಟ್ಟ ಮದ್ಯ ಸೇವಿಸಿ, ರಸ್ತೆಗಳಲ್ಲಿ ಹುಚ್ಚಾಟ ಮೆರೆಯುವ ಘಟನೆಗಳು ವರದಿಯಾಗುತ್ತಿವೆ. ಕೆಲವು ಬಾರಿ ಮದ್ಯದ ಅಮಲಿನಲ್ಲಿ ಪರಿಚಿತರು, ಸ್ನೇಹಿತರೇ ಪಾನಮತ್ತ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ, ಅನುಚಿತ ವರ್ತನೆ, ಕಿರುಕುಳದಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ದೇಶ-ವಿದೇಶಗಳ ಮಟ್ಟದಲ್ಲಿ ಬೆಂಗಳೂರು ನಗರದ ಸುರಕ್ಷತೆ ಬಗ್ಗೆ ಚರ್ಚೆಗಳು ನಡೆಯುತ್ತವೆ ಎಂದು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಮನೆಗಳವು ಪ್ರಕರಣಗಳಲ್ಲಿ ಕೈ ಚಳಕ:

ನಗರದಲ್ಲಿ ಜರುಗುವ ಮನೆಗಳವು ಪ್ರಕರಣಗಳಲ್ಲಿ ಹೊರರಾಜ್ಯದ ಆರೋಪಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಬಿಹಾರ, ಜಾರ್ಖಂಡ್‌, ಉತ್ತರ ಪ್ರದೇಶ, ಅಸ್ಸಾಂ, ಒಡಿಶಾ, ತ್ರಿಪುರ, ನಾಗಾಲ್ಯಾಂಡ್‌ ಸೇರಿ ವಿವಿಧ ರಾಜ್ಯಗಳಿಂದ ಸಾಕಷ್ಟು ಜನರು ನಗರಕ್ಕೆ ಬರುತ್ತಾರೆ. ಅಮಾಯಕರಂತೆ ನಟಿಸಿ ಮನೆಗೆಲಸ, ಸೆಕ್ಯೂರಿಟಿ ಗಾರ್ಡ್‌ ಕೆಲಸಗಳಿಗೆ ಸೇರುತ್ತಾರೆ. ಆರಂಭದಲ್ಲಿ ಮನೆಯ ಮಾಲೀಕರ ನಂಬಿಕೆ ಗಳಿಸಿ ಬಳಿಕ ಹೊಂಚು ಹಾಕಿ ನಗದು, ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಾರೆ. ಇವರನ್ನು ಪತ್ತೆ ಮಾಡಿ ಬಂಧಿಸಿ ನಗರಕ್ಕೆ ಕರೆತರುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಆದರೂ ನಮ್ಮ ಪೊಲೀಸರು ಸವಾಲುಗಳನ್ನು ಮೀರಿ ಆರೋಪಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ರಾಜಪ್ಪ ಹೇಳುತ್ತಾರೆ.

ಇತ್ತೀಚೆಗೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ 2 ಪ್ರಕರಣಗಳು

ಪ್ರಕರಣ-1: ಮಹಿಳೆಯ ಮೃತದೇಹ ತುಂಡು ಮಾಡಿ ಫ್ರಿಡ್ಜ್‌ಗೆ ತುಂಬಿದ್ದ

ಸೆಪ್ಟೆಂಬರ್‌ 8ರಂದು ನಗರದ ವೈಯಾಲಿ ಕಾವಲ್‌ನಲ್ಲಿ ನಡೆದಿದ್ದ ಮಹಾಲಕ್ಷ್ಮೀ(29) ಭೀಕರ ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ನಗರದ ಬಟ್ಟೆ ಶೋರೂಮ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಒಡಿಶಾ ಮೂಲದ ಆರೋಪಿ ಮುಕ್ತಿರಂಜನ್‌ ಪ್ರತಾಪ್‌ ರಾಯ್‌, ಮದುವೆ ವಿಚಾರಕ್ಕೆ ತನ್ನ ಸಹೋದ್ಯೋಗಿ ಮಹಾಲಕ್ಷ್ಮೀಯನ್ನು ಆಕೆಯ ಮನೆಯಲ್ಲೇ ಕೊಲೆ ಮಾಡಿ ಬಳಿಕ ಮಾಂಸ ಕತ್ತರಿಸುವ ಚಾಕುಗಳಿಂದ ಮೃತದೇಹವನ್ನು 50ಕ್ಕೂ ಅಧಿಕ ತುಂಡು ಮಾಡಿ ಫ್ರಿಡ್ಜ್‌ಗೆ ತುಂಬಿ ಒಡಿಶಾಗೆ ಪರಾರಿಯಾಗಿದ್ದ. ಈ ಭಯಾನಕ ಸುದ್ದಿ ರಾಷ್ಟ್ರವ್ಯಾಪಿ ಚರ್ಚೆಯಾಗಿತ್ತು.

ಪ್ರಕರಣ-2: ಪಿಜಿಗೆ ನುಗ್ಗಿ ಯುವತಿಯ ಭೀಕರ ಕೊಲೆ

ಜುಲೈ 23ರಂದು ಬೆಂಗಳೂರಿನ ಕೋರಮಂಗಲದ ಮಹಿಳಾ ಪೇಯಿಂಗ್‌ ಗೆಸ್ಟ್‌(ಪಿ.ಜಿ)ವೊಂದರಲ್ಲಿ ನಡೆದ ಬಿಹಾರ ಮೂಲದ ಕೃತಿ ಕುಮಾರಿ(24) ಭೀಕರ ಕೊಲೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಆರೋಪಿ ಮಧ್ಯಪ್ರದೇಶ ಮೂಲದ ಅಭಿಷೇಕ್‌, ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಪ್ರೇಯಸಿಯ ಸ್ನೇಹಿತೆ ಕೃತಿ ಕುಮಾರಿಯನ್ನು ಪಿ.ಜಿ.ಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಘಟನೆ ನಗರದ ಪೇಯಿಂಗ್‌ ಗೆಸ್ಟ್‌ಗಳ ಸುರಕ್ಷತೆ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಹೊರರಾಜ್ಯಗಳ ಬಂಧಿತ ಆರೋಪಿಗಳ ಮಾಹಿತಿ

ಅಪರಾಧ 2023 -  2024

ಡಕಾಯಿತಿ 06 - 12

ರಾಬರಿ 17 - 29

ಹಗಲು-ರಾತ್ರಿ ಮನೆಗಳವು 58 50

ಕಳ್ಳತನ 70 92

ಒಟ್ಟು 151 183

ಬೆಂಗಳೂರು ನಗರಕ್ಕೆ ಈ ಹೊರರಾಜ್ಯದವರೇ ಅತಿದೊಡ್ಡ ಅಪಾಯ. ನಗರದಲ್ಲಿ ನಡೆಯುವ ಮನೆಗಳವು, ಸರ ಅಪಹರಣ, ದ್ವಿಚಕ್ರ ವಾಹನಗಳ ಕಳವು, ಎಟಿಎಂ ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಹೊರರಾಜ್ಯದವರೇ ಹೆಚ್ಚಿನ ಆರೋಪಿಗಳಾಗಿದ್ದಾರೆ. ಹಲವು ಪ್ರಕರಣಗಳಲ್ಲಿ ನಮ್ಮ ಪೊಲೀಸರು ಹೊರರಾಜ್ಯಗಳಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಇಂತಹ ಅಪರಾಧ ಕೃತ್ಯಗಳಿಂದ ಬೆಂಗಳೂರು ನಗರಕ್ಕೂ ಕೆಟ್ಟ ಹೆಸರು ಬರುತ್ತಿದೆ.

- ಡಾ.ರಾಜಪ್ಪ, ನಿವೃತ್ತ ಡಿಐಜಿ