ಸಾರಾಂಶ
ಭಾರತೀಯ ಆಹಾರ ಸಂಸ್ಕೃತಿಗೆ ಒಗ್ಗಿಕೊಂಡ ನಮಗೆ ಊಟದಲ್ಲಿ ಹುಳ ಕಂಡರೂ ವಾಕರಿಕೆ ಬಂದು ಊಟವನ್ನು ಅರ್ಧಕ್ಕೆ ಬಿಡುವವರೇ ಹೆಚ್ಚು. ಹೀಗಿರುವಾಗ ಹುಳಗಳಲ್ಲೇ ತಯಾರಿಸಿರುವ ಖಾದ್ಯಗಳನ್ನು ಉಣ ಬಡಿಸಿದರೆ?
ಸಂಪತ್ ತರೀಕೆರೆ
ಬೆಂಗಳೂರು : ಭಾರತೀಯ ಆಹಾರ ಸಂಸ್ಕೃತಿಗೆ ಒಗ್ಗಿಕೊಂಡ ನಮಗೆ ಊಟದಲ್ಲಿ ಹುಳ ಕಂಡರೂ ವಾಕರಿಕೆ ಬಂದು ಊಟವನ್ನು ಅರ್ಧಕ್ಕೆ ಬಿಡುವವರೇ ಹೆಚ್ಚು. ಹೀಗಿರುವಾಗ ಹುಳಗಳಲ್ಲೇ ತಯಾರಿಸಿರುವ ಖಾದ್ಯಗಳನ್ನು ಉಣ ಬಡಿಸಿದರೆ?
ಹೌದು, ಜಿರಳೆ, ಊಜಿಹುಳ, ರೇಷ್ಮೆ ಹುಳದಂತ ಹುಳು ಹುಪ್ಪಡಿ ಖಾದ್ಯಗಳು ಜಿಕೆವಿಕೆಯ ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆ.
ಉತ್ತರ ಭಾರತದ ಕೆಲ ಪ್ರದೇಶಗಳ, ಚೀನಾ ಸೇರಿದಂತೆ ದೇಶ, ವಿದೇಶಗಳಲ್ಲಿ ಜನ ಈಗಾಗಲೆ ಕೆಲವು ಕೀಟಗಳನ್ನು ಬಳಸಿ ಸ್ವಾದಿಷ್ಟ ಹಾಗೂ ಆರೋಗ್ಯಯುತ ಖಾದ್ಯಗಳನ್ನು ತಯಾರಿಸಿ ಸೇವಿಸುತ್ತಿದ್ದಾರೆ. ಜನಸಂಖ್ಯೆ ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ಸುಸ್ಥಿರ ಆಹಾರ ಭದ್ರತೆಯನ್ನು ಸಾಧಿಸುವುದು ಪ್ರಸ್ತುತ ಅತಿದೊಡ್ಡ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ.
ಈ ಹಿನ್ನೆಲೆಯಲ್ಲಿ ಕೀಟಗಳ ಸೇವನೆ (ಎಂಟೊಮೊಫಾಗಿ) ಆರೋಗ್ಯಕರ ಕಾರಣಗಳಿಗಾಗಿ ಗಮನ ಸೆಳೆಯುತ್ತಿದೆ. ಪ್ರೋಟೀನ್, ಕೊಬ್ಬು, ಖನಿಜಗಳು, ಜೀವಸತ್ವಗಳು ಮತ್ತು ನಾರಿನಂಶಗಳಲ್ಲಿ ಹೆಚ್ಚಿನ ಅಂಶವನ್ನು ಹೊಂದಿರುವ ವ್ಯಾಪಕ ಶ್ರೇಣಿಯ ಖಾದ್ಯ ಕೀಟ ಪ್ರಭೇದಗಳು ಆಹಾರ ಅಭದ್ರತೆಯನ್ನು ಪರಿಹರಿಸುವಲ್ಲಿ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎನ್ನುವ ಜಿಕೆವಿಕೆಯ ಕೀಟಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಸಂತೃಪ್ತಿ ಅವರು, ಕೀಟ ಪ್ರಪಂಚದಲ್ಲಿ ಇಡಲಾಗಿದ್ದ ವಿವಿಧ ಕೀಟಗಳಿಂದ ತಯಾರಿಸಿದ ಖಾದ್ಯಗಳನ್ನು ಪರಿಚಯಿಸಿದರು.
13 ಬಗೆಯ ಖಾದ್ಯಗಳು:
ಪ್ರದರ್ಶನಕ್ಕೆ ಇಟ್ಟಿದ್ದ ಮೀಲ್ವರಂ ಪಿಜ್ಜಾ, ಕಣಜ ಹುಳುವಿನ ಮಸಾಲ, ಮಿಡತೆ ಫ್ರೈ, ರೇಷ್ಮೆಹುಳು ಕೋಶದ ಚಾಕಲೇಟ್, ಚಿಗಳಿ ಚಟ್ನಿ, ಮಿಡತೆ ಕಬಾಬ್, ಎರಿ ರೇಷ್ಮೆ ಹುಳುವಿನ ಬಾರ್ಬಿಕ್ಯೂ, ಮೀಲ್ವರಂ ಫ್ರೈಡ್‌ರೈಸ್, ರೇಷ್ಮೆಹುಳು ಕೋಶದ ಸೂಪ್, ಮಿಲ್ವರಂ ಕೇಕ್, ರಾಣಿ ಗೆದ್ದಲಿನ ಬರ್ಗರ್, ಜಿರಳೆ ಪಕೋಡ, ಬೇರು ಹುಳುವಿನ ಬಾರ್ಬಿಕ್ಯೂ, ರೇಷ್ಮೆ ಹುಳು ಕೋಶದ ಮಂಚೂರಿಯನ್ ನೋಡಿ ಬಾಯಲ್ಲಿ ನೀರೂರಿಸಿದವರಿಗಿಂತ, ಮುಖ ಸಿಂಡರಿಸಿದವರೇ ಹೆಚ್ಚು. ಆದರೂ ಭವಿಷ್ಯದಲ್ಲಿ ಆಹಾರ ಅಭದ್ರತೆಯನ್ನು ಪರಿಹರಿಸಬಲ್ಲ, ಕೀಟಗಳಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ಹಲವರು ಬಹಳ ಕುತೂಹಲದಿಂದಲೇ ಪರಿಶೀಲಿಸಿ, ಕೀಟ ಶಾಸ್ತ್ರದ ವಿದ್ಯಾರ್ಥಿನಿ ವೈಷ್ಣವಿ ಅವರಿಂದ ಮಾಹಿತಿ ಪಡೆಯುತ್ತಿದ್ದ ದೃಶ್ಯ ಕಂಡುಬಂತು.
ಪರ್ಯಾಯ ಆಹಾರ!
ಖಾದ್ಯ ಕೀಟಗಳು ಕ್ಯಾಲೋರಿ ದಟ್ಟವಾದ ಮತ್ತು ಹೆಚ್ಚು ಪೌಷ್ಟಿಕವಾಗಿರುವುದರಿಂದ, ಅವುಗಳ ಸೇವನೆಯು ವಿಶ್ವಾದ್ಯಂತ ಕ್ಷಾಮವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ವಿವಿಧ ಸೂಕ್ಷ್ಮ ಪೋಷಕಾಂಶಗಳು ಹಾಗೂ ಸಂಭಾವ್ಯ ಪರಿಸರ ಮತ್ತು ಆರ್ಥಿಕ ಪ್ರಯೋಜನಗಳ ಉಪಸ್ಥಿತಿಯು ಖಾದ್ಯ ಕೀಟಗಳನ್ನು ಜಾಗತಿಕವಾಗಿ ಭವಿಷ್ಯದ ಪ್ರಮುಖ ಆಹಾರವನ್ನಾಗಿ ಮಾಡುತ್ತದೆ ಎನ್ನುತ್ತಾರೆ ಕೀಟಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು.
ಆರೋಗ್ಯಕ್ಕೂ ಸಹಕಾರಿ
ಪ್ರಪಂಚದಾದ್ಯಂತ ಒಂದು ಬಿಲಿಯನ್‌ಗೂ ಹೆಚ್ಚು ಜನರು ಕೀಟಗಳನ್ನು ಆಹಾರವಾಗಿ ಬಳಸುತ್ತಾರೆ. ಕೃಷಿ ಪ್ರದೇಶ ಕಡಿಮೆಯಾಗಿ ಆಹಾರ ಉತ್ಪಾದನೆಯಲ್ಲಿ ಕೊರತೆಯಾಗುವಂತ ಪರಿಸ್ಥಿತಿಯಲ್ಲಿ ಈ ಕೀಟಗಳನ್ನು ಆಹಾರ ಧಾನ್ಯಗಳಿಗೆ ಪರ್ಯಾಯವಾಗಿ ಬಳಸಬಹುದಾಗಿದೆ. ಕೀಟಗಳನ್ನು ಆಹಾರವಾಗಿ ಬಳಸುವುದರಿಂದ ಆರೋಗ್ಯಕ್ಕೂ ಹೆಚ್ಚು ಸಹಕಾರಿಯಾಗುತ್ತದೆ.
-ಸಂತೃಪ್ತಿ, ಕೀಟಶಾಸ್ತ್ರ ವಿಭಾಗ, ಜಿಕೆವಿಕೆ
ಸಂಶೋಧನೆ ಅಗತ್ಯ
ಕೀಟಗಳನ್ನು ಬಳಸಿ 16 ಬಗೆಯ ಖಾದ್ಯಗಳನ್ನು ಮಾಡಿದ್ದೇವೆ.ಕೀಟಗಳಲ್ಲಿ ಒಳ್ಳೆಯ ಪ್ರೋಟಿನ್ ಇದೆ. ಕೆಟ್ಟಕೊಬ್ಬು ಕಡಿಮೆ ಇರುತ್ತದೆ. ಹೇಗೆ ಬೇರೆ ದೇಶಗಳಲ್ಲಿ ಆಹಾರಕ್ಕೆ ಪರ್ಯಾಯವಾಗಿ ಕೀಟಗಳ ಖಾದ್ಯ ಬಳಸುತ್ತಿದ್ದಾರೋ ಹಾಗೆಯೇ ಭವಿಷ್ಯದಲ್ಲಿ ಇಲ್ಲಿಯೂ ಜನರು ಬಳಸಬಹುದಾಗಿದೆ. ಹೆಚ್ಚಿನ ಸಂಶೋಧನೆ ನಡೆಸಿದರೆ, ತಿನ್ನಲು ಯೋಗ್ಯವಾದ ಮತ್ತಷ್ಟು ಕೀಟಗಳು ದೊರೆಯುತ್ತವೆ.
-ಹರ್ಷಿಣಿ, ಎಂಎಸ್ಸಿ, ಕೀಟಶಾಸ್ತ್ರ ವಿಭಾಗ, ಜಿಕೆವಿಕೆ
;Resize=(690,390))
)
)
;Resize=(128,128))
;Resize=(128,128))
;Resize=(128,128))