3 ದಿನದಲ್ಲಿ ರಾಜ್ಯಕ್ಕೆ ₹10 ಲಕ್ಷ ಕೋಟಿ ಸೆಳೆವ ಗುರಿ - 12ರಿಂದ 3 ದಿನ ‘ಇನ್ವೆಸ್ಟ್‌ ಕರ್ನಾಟಕ’ ಹೂಡಿಕೆ ಸಮಾವೇಶ

| N/A | Published : Feb 04 2025, 08:23 AM IST

MB Patil

ಸಾರಾಂಶ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫೆ.12 ರಿಂದ 14ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫೆ.12 ರಿಂದ 14ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಸಮಾವೇಶದ ಮೂಲಕ 10 ಲಕ್ಷ ಕೋಟಿ ರು. ಬಂಡವಾಳ ಆಕರ್ಷಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ಪೂರಕವಾಗಿ ಫೆ.11 ರಂದು ಸಂಜೆ 4 ಗಂಟೆಗೆ ಸಮಾವೇಶ ಉದ್ಘಾಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಇನ್ವೆಸ್ಟ್ ಕರ್ನಾಟಕ-2025 ಸಮಾವೇಶ ಕುರಿತು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಸೇರಿ ವಿವಿಧ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ ನಡೆಸಿ ಮಾತನಾಡಿದರು.

ಸಮಾವೇಶ ಮೂಲಕ ರಾಜ್ಯದಲ್ಲಿ 10 ಲಕ್ಷ ಕೋಟಿ ರು.ಗೂ ಹೆಚ್ಚು ಬಂಡವಾಳ ಹೂಡಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಇಲ್ಲಿವರೆಗೂ ಸುಮಾರು 7 ಲಕ್ಷ ಕೋಟಿ ಬಂಡವಾಳದ ಹರಿವು ಖಚಿತಪಡಿಸಲಾಗಿದೆ. 18 ದೇಶಗಳ 60ಕ್ಕೂ ಹೆಚ್ಚು ಗಣ್ಯ ಪ್ರತಿನಿಧಿಗಳು ಹಾಗೂ 2,000ಕ್ಕೂ ಹೆಚ್ಚು ಹೂಡಿಕೆದಾರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 9 ದೇಶಗಳು ತಮ್ಮ ಪೆವಿಲಿಯನ್‌ಗಳನ್ನು ತೆರೆಯಲು ಮುಂದೆ ಬಂದಿವೆ. 10 ದೇಶಗಳ ಉನ್ನತ ಮಟ್ಟದ ಕೈಗಾರಿಕಾ ವಲಯದ ನಾಯಕರು ತಾಂತ್ರಿಕ ವಲಯದ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಸಮಾವೇಶ ಸಂಪೂರ್ಣ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.

2025-30 ಕೈಗಾರಿಕಾ ನೀತಿ ಬಿಡುಗಡೆ:

ಸಮಾವೇಶದಲ್ಲೇ ಕರ್ನಾಟಕ ರಾಜ್ಯದ ನೂತನ ಕೈಗಾರಿಕಾ ನೀತಿ 2025-30 ಅನ್ನು ಪ್ರಕಟಿಸಲಾಗುವುದು. ದೇಶದ ಅನೇಕ ರಾಜ್ಯಗಳ ನೀತಿಗಳನ್ನು ಅಧ್ಯಯನ ಮಾಡಲಾಗಿದ್ದು, ಎಲ್ಲದಕ್ಕಿಂತ ಉತ್ತಮವಾದ, ಪ್ರೋತ್ಸಾಹದಾಯಕ ನೀತಿ ಪರಿಚಯಿಸಲಾಗುವುದು. ಜೊತೆಗೆ ಕ್ಲೀನ್ ಮೊಬಿಲಿಟಿ ನೀತಿ 2025-30 ಅನ್ನು ಅನಾವರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಅನೇಕ ಹೂಡಿಕೆದಾರರು ಬೆಂಗಳೂರು ಸೇರಿ ಹೊರಗಿನ ಜಿಲ್ಲೆಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದಾರೆ. ಇವರಿಗೆ ಮೂರು ಲಕ್ಷ ಡಾಲರ್ ಮೊತ್ತದ ಬಹುಮಾನ ನೀಡಲಾಗುವುದು. ನವೋದ್ಯಮಗಳ ಪ್ರತಿ ವಿಭಾಗಕ್ಕೆ ಒಟ್ಟು 1 ಲಕ್ಷ ಡಾಲರ್ ಬಹುಮಾನ ಮೊತ್ತ ನಿಗದಿ ಮಾಡಲಾಗಿದೆ. ವಿನೂತನ ಚಿಂತನೆಗಳನ್ನು ಹೊಂದಿರುವ 45 ನವೋದ್ಯಮಗಳಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಗತಿಯ ಮರುಕಲ್ಪನೆಯ ಥೀಮ್-ಎಂಬಿಪಾ:

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ಜಾಗತಿಕ ಹೂಡಿಕೆದಾರರ ಸಮಾವೇಶವು ‘ಪ್ರಗತಿಯ ಮರುಕಲ್ಪನೆ’ ಎನ್ನುವ ಪ್ರಧಾನ ಥೀಮ್ ಒಳಗೊಂಡಿದ್ದು, ತಂತ್ರಜ್ಞಾನ-ಚಾಲಿತ, ಪರಿಸರಸ್ನೇಹಿ, ಒಳಗೊಳ್ಳುವಿಕೆ ಮತ್ತು ಕ್ಷಮತೆ ಎನ್ನುವ ನಾಲ್ಕು ಉಪ ಆಶಯಗಳನ್ನು ಹೊಂದಿದೆ. ಅಂಕಿತ ಹಾಕುವ ಒಡಂಬಡಿಕೆಗಳ ಪೈಕಿ ಶೇ.70-80ರಷ್ಟಾದರೂ ನಿಜವಾದ ಹೂಡಿಕೆಯಾಗಿ ಪರಿವರ್ತನೆಯಾಗಬೇಕು ಎನ್ನುವುದು ಸರ್ಕಾರದ ಗುರಿ ಎಂದು ಹೇಳಿದರು.

ಸಮಾವೇಶದಲ್ಲಿ ಕುಮಾರ್ ಬಿರ್ಲಾ, ಆನಂದ್ ಮಹೀಂದ್ರ, ಕಿರಣ್ ಮಜುಂದಾರ್ ಸೇರಿ ಖ್ಯಾತ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಫೆ.12 ಮತ್ತು 13ರಂದು ಇಡೀ ಎರಡು ದಿನ ಸಮಾವೇಶದಲ್ಲಿ ಅತ್ಯಂತ ಗಂಭೀರ ಚಟುವಟಿಕೆಗಳು ನಡೆಯಲಿವೆ. ಹೀಗಾಗಿ 11ರಂದು ಸಂಜೆ 4 ಗಂಟೆಗೇ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ಕೈಗಾರಿಕಾ ನೀತಿಯಲ್ಲಿ ಉದ್ಯೋಗ ಸೃಷ್ಟಿ, ಮಹಿಳಾ ಉದ್ಯೋಗ ಸೃಷ್ಟಿ, ಬೆಂಗಳೂರು ಬಿಟ್ಟು ಉಳಿದೆಡೆ ಕೈಗಾರಿಕೆಗಳ ಸ್ಥಾಪನೆ ಉತ್ತೇಜಿಸಲು ಸಹಾಯಧನ ಘೋಷಿಸಲಾಗುವುದು. ಸ್ಥಳೀಯ ಮಟ್ಟದಲ್ಲೇ ಉತ್ಪಾದನೆಯೂ ಆಗುವಂತೆ ನೋಡಿಕೊಳ್ಳಲು ಸರ್ಕಾರ ಉಪಕ್ರಮಗಳನ್ನು ತೆಗೆದುಕೊಳ್ಳಲಿದೆ. ಪರಿಸರ ಸ್ನೇಹಿ ಇಂಧನ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೂ ಗಮನಹರಿಸಲಾಗುವುದು ಎಂದು ಪಾಟೀಲ್ ವಿವರಿಸಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಹಲವರು ಹಾಜರಿದ್ದರು.

18 ದೇಶ: 3 ದಿನಗಳ ಸಮಾವೇಶದಲ್ಲಿ ಭಾಗಿಯಾಗಲಿರುವ ದೇಶಗಳು

2000 ಮಂದಿ: ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಹೂಡಿಕೆದಾರರು

60 ಗಣ್ಯರು: ಇನ್ವೆಸ್ಟ್‌ ಕರ್ನಾಟಕಕ್ಕೆ ಆಗಮಿಸಲಿರುವ ಗಣ್ಯ ಪ್ರತಿನಿಧಿಗಳು

3 ಲಕ್ಷ ಡಾಲರ್‌: ಬೆಂಗಳೂರಿಂದಾಚೆ ಉದ್ಯೋಗ ಸೃಷ್ಟಿಸಿದವರಿಗೆ 2.6 ಕೋಟಿ ರು. ಬಹುಮಾನ

ಸಮಾವೇಶದಲ್ಲೇ ಹೊಸ

ಕೈಗಾರಿಕಾ ನೀತಿ ಪ್ರಕಟ

ಸಮಾವೇಶ ಮೂಲಕ ರಾಜ್ಯದಲ್ಲಿ 10 ಲಕ್ಷ ಕೋಟಿ ರು.ಗೂ ಹೆಚ್ಚು ಬಂಡವಾಳ ಹೂಡಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಇಲ್ಲಿವರೆಗೂ ಸುಮಾರು 7 ಲಕ್ಷ ಕೋಟಿ ಬಂಡವಾಳದ ಹರಿವು ಖಚಿತಪಡಿಸಲಾಗಿದೆ. ಸಮಾವೇಶದಲ್ಲೇ ಕರ್ನಾಟಕ ರಾಜ್ಯದ ನೂತನ ಕೈಗಾರಿಕಾ ನೀತಿ 2025-30 ಅನ್ನು ಪ್ರಕಟಿಸಲಾಗುವುದು.

- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

ಬಿರ್ಲಾ, ಮಹೀಂದ್ರಾ

ಸೇರಿ ಹಲವರು ಭಾಗಿ

ಹೂಡಿಕೆ ಸಮಾವೇಶದಲ್ಲಿ ಕುಮಾರ ಮಂಗಳಂ ಬಿರ್ಲಾ, ಆನಂದ್‌ ಮಹೀಂದ್ರಾ, ಕಿರಣ್‌ ಮಜುಂದಾರ್‌ ಶಾ ಸೇರಿ ಖ್ಯಾತ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಫೆ.12 ಮತ್ತು 13ರಂದು ಇಡೀ ಎರಡು ದಿನ ಸಮಾವೇಶದಲ್ಲಿ ಅತ್ಯಂತ ಗಂಭೀರ ಚಟುವಟಿಕೆಗಳು ನಡೆಯಲಿವೆ. ಹೀಗಾಗಿ 11ರಂದು ಸಂಜೆ 4 ಗಂಟೆಗೇ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

- ಎಂ.ಬಿ.ಪಾಟೀಲ್‌, ಕೈಗಾರಿಕಾ ಸಚಿವ