ಸಾರಾಂಶ
ಆಪರೇಷನ್ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿ ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಾವಳಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
ಬೆಂಗಳೂರು : ಆಪರೇಷನ್ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿ ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಾವಳಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
ಆರ್‌ಸಿಬಿ ಹಾಗೂ ಕೆಕೆಆರ್ ಮಧ್ಯೆ ಪಂದ್ಯ ನಡೆಯಲಿದ್ದು, ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎರಡು ಸಾವಿರಕ್ಕೂ ಹೆಚ್ಚಿನ ಪೊಲೀಸರು ನಿಗಾ ವಹಿಸಲಿದ್ದಾರೆ.
ಈ ಸಂಬಂಧ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಎಂ.ಚಂದ್ರಗುಪ್ತ, ಕಳೆದ ಎರಡು ವಾರಗಳಿಂದ ನಗರ ವ್ಯಾಪ್ತಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರವಹಿಸಲಾಗಿದೆ ಎಂದರು.
ಜನದಟ್ಟಣೆ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದ್ದು, ವಾಹನಗಳ ತಪಾಸಣೆ ಸಹ ನಡೆಸಲಾಗುತ್ತಿದೆ. ಅದೇ ರೀತಿ ಐಪಿಎಲ್ ಪಂದ್ಯಕ್ಕೂ ಭದ್ರತೆ ಕಲ್ಪಿಸಲಾಗಿದೆ. ಪಂದ್ಯದ ಬಂದೋಬಸ್ತ್‌ಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ರೀಲ್ಸ್ ಹುಚ್ಚಾಟ
ಐಪಿಎಲ್ ಪಂದ್ಯದ ವೇಳೆ ಕ್ರಿಕೆಟ್ ಆಟಗಾರ ವಿರಾಟ್ ಕೊಯ್ಲಿ ಅವರನ್ನು ಅಪ್ಪಿಕೊಳ್ಳುವುದಾಗಿ ಇನ್‌ಸ್ಟ್ರಾಗ್ರಾಂನಲ್ಲಿ ಯುವಕನೊಬ್ಬನ ರೀಲ್ಸ್ ಸಿಕ್ಕಾಪಟ್ಟೆ ಸದ್ದು ಮಾಡಿದೆ.
ಶರಣು ಕಬ್ಜ ಎಂಬ ಹೆಸರಿನ ಖಾತೆಯಲ್ಲಿ ರೀಲ್ಸ್ ಅಪ್ ಲೋಡ್ ಆಗಿದ್ದು, ಆತನ ಮೇಲೆ ಪೊಲೀಸರು ಕಣ್ಣಿಟಿದ್ದಾರೆ. ಈ ರೀಲ್ಸ್ ಹಿನ್ನೆಲೆಯಲ್ಲಿ ಪಂದ್ಯದ ವೇಳೆ ಭದ್ರತೆ ಲೋಪವಾಗದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದಾರೆ. ತಾನು ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ವಿರಾಟ್ ಕೊಯ್ಲಿ ಅವರನ್ನು ಅಪ್ಪಿಕೊಳ್ಳುವುದಾಗಿ ಶರಣು ಹೇಳಿಕೊಂಡಿದ್ದಾನೆ.
ಇಂದು ಮಧ್ಯರಾತ್ರಿವರೆಗೆ
ಮೆಟ್ರೋ ರೈಲು ಸೇವೆ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಮೇ 17 ಮತ್ತು 23ರಂದು ನಮ್ಮ ಮೆಟ್ರೋ ರೈಲು ಸೇವೆಯನ್ನು ಮಧ್ಯರಾತ್ರಿವರೆಗೆ ವಿಸ್ತರಿಸಲಾಗುತ್ತಿದೆ. ಮೇ 17 ಮತ್ತು 23ರಂದು ನಮ್ಮ ಮೆಟ್ರೋದ ನಾಲ್ಕು ಟರ್ಮಿನಲ್‌ಗಳಾದ ವೈಟ್‌ಫೀಲ್ಡ್, ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಹಾಗೂ ಮಾದವಾರಗಳಿಂದ ಮಧ್ಯರಾತ್ರಿ 1 ಗಂಟೆಗೆ ಕೊನೆಯ ರೈಲು ಹೊರಡಲಿದೆ. ಅದೇ ರೀತಿ ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಮಧ್ಯರಾತ್ರಿ 1.35ಕ್ಕೆ ನಾಲ್ಕು ದಿಕ್ಕುಗಳಿಗೂ ಕೊನೆಯ ಮೆಟ್ರೋ ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.