ಸಾರಾಂಶ
ಪಟ್ಟಣದಲ್ಲಿರುವ ಬಯಲು ರಂಗಮಂದಿರದಲ್ಲೆ ಬಹಳಷ್ಟು ಸ್ಪರ್ಧೆ ಆಯೋಜನೆ
ಅನಂತ ನಾಡಿಗ್ ಕನ್ನಡಪ್ರಭ ವಾರ್ತೆ ತರೀಕೆರೆಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಪ್ರಮುಖವಾದ ಕಂದಾಯ ಉಪ ವಿಭಾಗ ಕೇಂದ್ರವಾದ ತರೀಕೆರೆ ನಾಗರಿಕರಿಗೆ ಅಗತ್ಯ ಸೌಲಭ್ಯಗಳಾದಿಯಾಗಿ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲೂ ಸಾಕಷ್ಟು ಬೆಳವಣಿಗೆ ಸಾಧಿಸಿದೆ. ಇಂತಹ ಅಭಿವೃದ್ಧಿ ಪರವಾದ ತರೀಕೆರೆಯಲ್ಲಿ ಕ್ರೀಡೆಗಳ ಆಯೋಜನೆ ಸೇರಿದಂತೆ ಇತರೆ ಕ್ರಿಡಾಚಟುವಟಿಕೆಗಳಿಗೆ ಒಂದು ಕ್ರೀಡಾಂಗಣ ಅತ್ಯಗತ್ಯವಾಗಿದೆ ಎಂಬುದು ಸಾರ್ವಜನಿಕರ ಆಶಯ.
ಉತ್ಸಾಹಿ ಯುವಜನ ಸಮೂಹ ಹೊಂದಿರುವ ತರೀಕೆರೆ ತಾಲೂಕು ಕೇಂದ್ರ ಸ್ಥಳದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜುಗಳು, ಫಾರ್ಮಿಸಿ ಕಾಲೇಜು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಹೊಂದಿ ಸಾವಿರಾರು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಾ ಪಟ್ಟಣ ನಾಲ್ಕೂ ದಿಕ್ಕಿನಲ್ಲಿ ವಿಸ್ತಾರವಾಗಿ ಬೆಳೆಯುತ್ತಿದೆ. ಶಾಲಾ ಕಾಲೇಜುಗಳಾದಿಯಾಗಿ ಯುವಜನ ಕ್ರೀಡಾ ಸಂಸ್ಥೆ, ಸರ್ಕಾರಿ ನೌಕರರ ಸಂಘ, ಖಾಸಗಿ ಸಂಘ ಸಂಸ್ಥೆಗಳು ತರೀಕೆರೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಕ್ರೀಡಾಕೂಟಗಳನ್ನು ಆಗಾಗ್ಗೆ ಸಂಘಟಿಸುವಾಗಲೂ ಕ್ರಿಡಾಂಗಣದ ಕೊರತೆ ಅನುಭವಿಸುತ್ತವೆ. ಪಟ್ಟಣದಲ್ಲಿರುವ ಬಯಲು ರಂಗಮಂದಿರದಲ್ಲೆ ಬಹಳಷ್ಟು ಸ್ಪರ್ಧೆಗಳನ್ನು ಆಯೋಜಿಸ ಲಾಗುತ್ತಿ ದ್ದು ಅಲ್ಲಿ ಸ್ಪರ್ಧೆ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಆಯೋಜಕರೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ಖಾಸಾಗಿ ಶಾಲಾ ಕಾಲೇಜಿನ ಕ್ರೀಡಾಂಗಣವನ್ನು ಆಶ್ರಯಿಸಬೇಕಾಗುತ್ತದೆ.ಕ್ರೀಡಾಕೂಟಗಳನ್ನು ವ್ಯವಸ್ಥಿತವಾಗಿ ಆಯೋಜಿಸಲು ತರೀಕೆರೆಯಂತಹ ಪ್ರಮುಖ ತಾಲೂಕು ಕೇಂದ್ರದಲ್ಲಿ ಒಂದು ಸುಸಜ್ಜಿತ ಕ್ರೀಡಾಂಗಣ ಇಲ್ಲದಿರುವುದು ವಿಪರ್ಯಾಸವೇ ಸರಿ. ತಾತ್ಕಾಲಿಕ ಕ್ರೀಡಾಂಗಣ ವ್ಯವಸ್ಥೆಗೆ ಆಗಾಧ ಪ್ರಮಾಣದಲ್ಲಿ ಹಣ ಖರ್ಚು ಮಾಡಬೇಕಾಗುತ್ತಿದೆ. ಚೆಸ್, ಕೇರಂ, ಟೇಬಲ್ ಟೆನ್ನಿಸ್, ಫುಟ್ ಬಾಲ್ ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಎತ್ತರ ಜಿಗಿತ, ಉದ್ದ ಜಿಗಿತ, ರನ್ನಿಂಗ್ ರೇಸ್ ಇಂತಹ ಕ್ರೀಡೆಗಳಿಗೂ ಸಮರ್ಪಕ ಕ್ರೀಡಾಂಗಣ ಇಲ್ಲದೆ ಅದೆಷ್ಟೋ ಯುವಜನರ, ಕ್ರೀಡಾಸಕ್ತರಿಗೆ ಅಭ್ಯಾಸದಿಂದ ಹಿಡಿದು ಪಂದ್ಯಾವಳಿ ಆಯೋಜನೆಯೂ ದುಸ್ಥರವಾಗಿದೆ.ಬಯಲು ಜಂಗೀ ಕುಸ್ತಿಗೆ ತರೀಕೆರೆ ಪ್ರಖ್ಯಾತಿ:ರಾಜ ಮಹಾರಾಜರು ಮತ್ತು ಪಾಳೆಗಾರರ ಕಾಲದಿಂದ ತರೀಕೆರೆಯಲ್ಲಿ ಅನೂಚಾನವಾಗಿ ನಡೆಯುತ್ತಿರುವ. ಜಾನಪದ ದೇಶೀಯ ಮಾದರಿಯ, ಇತಿಹಾಸ ಪ್ರಸಿದ್ಧ ರಾಜ್ಯಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಸ್ಪರ್ಧೆಗಳಲ್ಲಿ ಸ್ಥಳೀಯವಾಗಿ, ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನರು, ಕುಸ್ತಿ ಪಟುಗಳು ಭಾಗವಹಿಸುತ್ತಾರೆ. ಕುಸ್ತಿ ಕ್ರೀಡಾಪಟುಗಳಿಗೆ ತರೀಕೆರೆ ಕುಸ್ತಿ ಅಖಾಡದಲ್ಲಿ ಭಾಗವಹಿಸಿದ ಕುಸ್ತಿಪಟು ಎಂದರೆ ಅದೇ ಒಂದು ಬಹು ದೊಡ್ಡೆ ಹೆಮ್ಮೆಯ ಸಂಗತಿ. ಇಲ್ಲಿನ ಕುಸ್ತಿ ತರೀಕೆರೆ ಕೀರ್ತಿಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಿದೆ. ಇಷ್ಟೆಲ್ಲಾ ಹೆಗ್ಗಳಿಕೆಗೆ ಪಾತ್ರವಾದ ತರೀಕೆರೆಯಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ ಅದೆಷ್ಟೋ ಕ್ರೀಡಾಪಟುಗಳಿಗೆ ಒಳ್ಳೆಯ ವೇದಿಕೆ ಕಲ್ಪಿಸಿ ದಂತಾಗುತ್ತದೆ. ಆ ಮೂಲಕ ಕ್ರೀಡೆಯಲ್ಲೂ ತರೀಕೆರೆ ಯುವ ಜನ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಲಿದೆ.
ಕುಸ್ತಿಯನ್ನು ಪಟ್ಟಣದಲ್ಲಿ ಆಯೋಜಿಸುವಾಗ ತಾತ್ಕಾಲಿಕವಾಗಿ ಕುಸ್ತಿ ಸ್ಟೇಡಿಯಂನ ಸಿದ್ಧಪಡಿಸ ಬೇಕಾಗುತ್ತದೆ. ಕುಸ್ತಿ ಪಂದ್ಯ ವೀಕ್ಷಿಸಲು ಸಹಸ್ರ ಸಂಖ್ಯೆಯಲ್ಲಿ ಸೇರುವ ಪ್ರೇಕ್ಷಕರಿಗಾಗಿ ಸ್ಟೇಡಿಯಂ ನಿರ್ಮಿಸಲು ಅಪಾರ ಪ್ರಮಾಣದ ಹಣ ಖರ್ಚು ಮಾಡಬೇಕಾಗುತ್ತದೆ. ಅಂತದೇ ಪರಿಸ್ಥಿರಿ ಇತೆರೆ ಕ್ರೀಡೆಗಳಿಳೂ ಇದೆ.ತರೀಕೆರೆಯ ಅನೇಕ ಸಂಸ್ಥೆಗಳು ಆಯೋಜಿಸುವ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾ ಪಂದ್ಯಗಳು ಯಶಸ್ವಿಯಾಗಿ ನಡೆದಿವೆ. ಆದರೆ ಕ್ರೀಡೆಗಳಿಗಾಗಿಗೇ ಇರುವ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಿಸಲು ಹೆಚ್ಚು ಉಪಯುಕ್ತವಾಗಲಿದೆ. ಈ ನಿಟ್ಟಿನಲ್ಲಿ ತರೀಕೆರೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಬೇಕೆಂಬುದು ನಾಗರಿಕರಾದಿಯಾಗಿ ಯುವಜನರ, ಕ್ರೀಡಾಸಕ್ತರ ಬಹು ದಿನದ ಆಶಯ. ತಾಲೂಕು ಕೇಂದ್ರ ತರೀಕೆರೆ ಅಭಿವೃದ್ಧಿಗೆ ತಕ್ಕಂತೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ವಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಅದರಂತೆ ತರೀಕೆರೆಯಲ್ಲಿ ಪ್ರಸ್ತುತ ಗುರುತಿಸಲಾದ ಸ್ಥಳದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದು ಅದಕ್ಕೆ ಸಮ್ಮತಿ ದೊರೆತು ವಿಶಾಲವಾದ ಸ್ಥಳದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರುವ ಶುಭಘಳಿಗೆ ಶೀಘ್ರದಲ್ಲಿ ಬರುವಂತಾಗಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.-- ಕೋಟ್--
ಚುನಾವಣಾ ಸಮಯದಲ್ಲಿ ಕ್ರೀಡಾಂಗಣ ನಿರ್ಮಾಣ ಕುರಿತು ನಾವು ನೀಡಿದ್ದ ಭರವಸೆಗೆ ಅನುಗುಣವಾಗಿ ಈಗಾಗಲೇ ಅಜ್ಜಂಪುರದಲ್ಲಿ ಕ್ರೀಡಾಂಗಣ ನಿರ್ಮಿಸಲು ಕ್ರಮ ವಹಿಸಲಾಗಿದೆ, ಅದರಂತೆ ತರೀಕೆರೆ ಬಳಿ ಎ.ರಂಗಾಪುರದಲ್ಲಿ 11 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಕುರಿತ ಪ್ರಸ್ತಾವನೆಯನ್ನು ಪುರಸಭೆಯಿಂದ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿ ಸರ್ಕಾರಕ್ಕೆ ಈ ಪ್ರಸ್ತಾವನೆ ಕಳಿಸಿದ್ದಾರೆ. ಇದಕ್ಕೆ ಮಂಜೂರಾತಿ ದೊರಕಿದ ಕೂಡಲೇ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು.ಜಿ.ಎಚ್.ಶ್ರೀನಿವಾಸ್ , ಶಾಸಕ-- ಕೋಟ್--
ತರೀಕೆರೆಗೆ ಕ್ರೀಡಾಂಗಣ ಅಗತ್ಯವಿದೆ. ಕ್ರೀಡೆಗೆ ಪೂರಕ ವಾತಾವರಣ ಇದ್ದರೆ ಜನರು ಆರೋಗ್ಯವಂತರಾಗಿರಲು ಸಾಧ್ಯ ವಾಗುತ್ತದೆ ಸಾರ್ವಜನಿಕರ ಆರೋಗ್ಯ ಕಾಪಾಡುವುದರಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತದೆ. - - - -ಡಾ.ಎಸ್.ಎನ್.ಆಚಾರ್ಯರೋಟರಿ ಡಿಸ್ಟ್ರಿಕ್ಟ್ ಚೆಸ್ ಚಾಂಪಿಯನ್
18ಕೆಟಿಆರ್.ಕೆ.1ಃತರೀಕೆರೆ ಬಳಿ ಎ.ರಂಗಾಪುರದಲ್ಲಿ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಿರುವ ವಿಶಾಲವಾದ ಸ್ಥಳ18ಕೆಟಿಆರ್.ಕೆ.2ಃ
ಜಿ.ಎಚ್.ಶ್ರೀನಿವಾಸ್, ಶಾಸಕರು18ಕೆಟಿಆರ್.ಕೆ.3ಃಡಾ.ಎಸ್.ಎನ್.ಆಚಾರ್ಯ, ರೋಟರಿ ಡಿಸ್ಟ್ರಿಕ್ಟ್ ಚೆಸ್ ಚಾಂಪಿಯನ್ ---------------------