ಡ್ರೋನ್‌ ತಡೆಗೆ ಬಂತು ಜಾಮರ್‌! ವಿಶಾಖಪಟ್ಟಣಂ ನೌಕಾನೆಲೆಯ ‘ಐಎನ್‌ಎಸ್‌ ಸುಖನ್ಯಾ’ದಲ್ಲಿ ನಿಯೋಜನೆ -

| N/A | Published : Feb 14 2025, 09:32 AM IST

jamar

ಸಾರಾಂಶ

ಬೆಂಗಳೂರಲ್ಲಿ ನಿರ್ಮಿತವಾಗಿ ಭಾರತೀಯ ಸೈನ್ಯಕ್ಕೆ ಒಪ್ಪಿಸಲಾದ ಈ ಆ್ಯಂಟಿ ಡ್ರೋನ್‌ ಜಾಮರ್‌ ಸಂರಕ್ಷಿತ ವಲಯದಲ್ಲಿ ಶತ್ರುಗಳ ಡ್ರೋನ್‌ ಬರುತ್ತಿದ್ದಂತೆ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಇದನ್ನು ತಿಳಿದ ಶತ್ರುಪಾಳಯ ತಮ್ಮ ಡ್ರೋನ್‌ನ್ನು ವಾಪಸ್‌ ಕರೆಸಿಕೊಳ್ಳಲೂ ಅವಕಾಶ ನೀಡದಂತೆ ಅಲ್ಲಿಯೇ ಬೀಳಿಸುತ್ತದೆ.

  ಬೆಂಗಳೂರು : ಬೆಂಗಳೂರಲ್ಲಿ ನಿರ್ಮಿತವಾಗಿ ಭಾರತೀಯ ಸೈನ್ಯಕ್ಕೆ ಒಪ್ಪಿಸಲಾದ ಈ ಆ್ಯಂಟಿ ಡ್ರೋನ್‌ ಜಾಮರ್‌ ಸಂರಕ್ಷಿತ ವಲಯದಲ್ಲಿ ಶತ್ರುಗಳ ಡ್ರೋನ್‌ ಬರುತ್ತಿದ್ದಂತೆ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಇದನ್ನು ತಿಳಿದ ಶತ್ರುಪಾಳಯ ತಮ್ಮ ಡ್ರೋನ್‌ನ್ನು ವಾಪಸ್‌ ಕರೆಸಿಕೊಳ್ಳಲೂ ಅವಕಾಶ ನೀಡದಂತೆ ಅಲ್ಲಿಯೇ ಬೀಳಿಸುತ್ತದೆ.

ಬೆಂಗಳೂರು ಮೂಲದ ಏಡಿನ್‌ ಟೆಕ್ನಾಲಜಿಸ್‌ ನಿರ್ಮಿಸಿರುವ ‘ಡ್ರೋನ್‌ ಜಾಮರ್‌ ಎಲ್‌ಆರ್‌’ ವಿಶೇಷತೆಯಿದು. 5 ರಿಂದ 7 ಕಿ.ಮೀ. ಅಂತರದಲ್ಲಿ ಯಾವುದೇ ಡ್ರೋನ್‌ ಬಂದರೂ ಇದು ಜಿಪಿಎಸ್‌ ಮೂಲಕ ಅದನ್ನು ನಿಷ್ಕ್ರೀಯಗೊಳಿಸುತ್ತದೆ. ಅಲ್ಲದೆ, ಡ್ರೋನ್‌ ವಾಪಸ್‌ ಹೋಗಲು ಅವಕಾಶ ಕೊಡದೆ ಅಲ್ಲಿಯೇ ಬೀಳಿಸುತ್ತದೆ. ಇದರಿಂದ ಡ್ರೋನ್‌ ಯಾವುದೇ ಮಾಹಿತಿ ಸಂಗ್ರಹಿಸಿದ್ದರೂ ಅದು ರವಾನೆ ಆಗದಂತೆ ರಹಸ್ಯವನ್ನು ಕಾಪಾಡಲು ಅನುಕೂಲವಾಗುತ್ತದೆ ಎಂದು ಏಡಿನ್‌ ಟೆಕ್ನಾಲಜಿಯ ಎಕ್ಸಿಕ್ಯೂಟಿವ್‌ ಅಡ್ಮಿನ್‌ ವಿ.ಎಸ್‌.ಮಧು ತಿಳಿಸಿದರು.

ಇದನ್ನು ಮೊದಲು ಉಚಿತವಾಗಿ ನೌಕಾದಳಕ್ಕೆ ಅರ್ಪಿಸಲಾಗಿತ್ತು. ಅವರು ಇದನ್ನು ಬಳಸಿ ಪೂರೈಕೆಗೆ ಒಪ್ಪಿದ ಬಳಿಕ ಎರಡು ಜಾಮರ್‌ನ್ನು ಭಾರತ್‌ ಎಲೆಕ್ಟ್ರಾನಿಕ್ಸ್‌ ಮೂಲಕ ಭಾರತೀಯ ನೌಕಾದಳಕ್ಕೆ ನೀಡಲಾಗಿದೆ. ಸದ್ಯ ವಿಶಾಖಪಟ್ಟಣಂ ನೌಕಾನೆಲೆಯ ‘ಐಎನ್‌ಎಸ್‌ ಸುಖನ್ಯಾ’ದಲ್ಲಿ ಇದನ್ನು ನಿಯೋಜನೆ ಮಾಡಲಾಗಿದೆ. ಸೈನ್ಯದಿಂದ ಸುಮಾರು ನೂರು ‘ಡ್ರೋನ್‌ ಜಾಮರ್‌ ಎಲ್‌ಆರ್‌’ಗಳಿಗೆ ಬೇಡಿಕೆ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಗಡಿಯಲ್ಲಿ, ಕಾಡಿನಲ್ಲಿ ಗಸ್ತಿನಲ್ಲಿರುವ ಯೋಧರು ಕೂಡ ಇಂಥಹ ಡ್ರೋನ್‌ಗಳನ್ನು ಹೊಡೆದುರುಳಿಸಲು ಕಂಪನಿ ‘ಮ್ಯಾನ್‌ಪ್ಯಾಕ್ಡ್‌ ಜಾಮರ್‌’ ಅನ್ನು ರೂಪಿಸಿದೆ. ಯೋಧರು ತಮ್ಮ ಬೆನ್ನಿಗೆ ಪ್ಯಾಕ್ಡ್‌ ಜಾಮರ್ ಏರಿಸಿಕೊಂಡು ಗಸ್ತು ನಡೆಸಬೇಕು. ಸಂಶಯಾತ್ಮಕ ಡ್ರೋನ್‌ಗಳು ಎದುರಾದರೆ, ಕೈನಲ್ಲಿರುವ ಟ್ಯಾಬ್‌ ಮಾದರಿಯ ಎಲೆಕ್ಟ್ರಾನಿಕ್‌ ಪರಿಕರ 2 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್‌ ಸೇರಿ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣ ಪ್ರವೇಶಿಸಿದರೂ ಅದನ್ನು ನಿಷ್ಕ್ರೀಯಗೊಳಿಸುತ್ತದೆ. ಜೊತೆಗೆ ಗನ್‌ ಮಾದರಿಯ ಅಸ್ತ್ರದಿಂದ ಡ್ರೋನ್‌ನ್ನು ಸಾಫ್ಟ್ ಕಿಲ್‌ ಮಾಡಬಹುದು. ಸದ್ಯ ಇದು ಉತ್ತರ ಕಮಾಂಡ್‌ನ ಓಡಿಶ್ಶಾದ ತೇಜ್‌ಪುರದಲ್ಲಿ ಬಳಕೆಯಲ್ಲಿದೆ ಎಂದು ಮಧು ತಿಳಿಸಿದರು.

ಇನ್ನು, ಕಂಪನಿ ರೂಪಿಸಿರುವ ‘ಅಡ್ವಾನ್ಸಡ್‌ ಡಿಜಿಟಲ್‌ ರಿಸೀವರ್‌’ ಅನ್ನು ಸೈನ್ಯದ ವಾಕಿಟಾಕಿ ಮೂಲಕ ನಡೆಯುವ ಸೈನಿಕರ ರಹಸ್ಯ ಮಾತುಕತೆ ಶತ್ರುಪಾಳಯಕ್ಕೆ ತಿಳಿಯದಂತೆ ಮಾಡಲು, ಅವರು ಫ್ರಿಕ್ವೆನ್ಸಿಯನ್ನು ಕನೆಕ್ಟ್‌ ಮಾಡಿಕೊಂಡು ಕದ್ದಾಲಿಕೆ ಮಾಡದಂತೆ ತಡೆಯಲು ರೂಪಿಸಲಾಗಿದೆ. ಇದು ಸೈನ್ಯದ ವಾಕಿಟಾಕಿಯ ಫ್ರಿಕ್ವೆನ್ಸಿಯನ್ನು ಜಾಮ್‌ ಆಗದಂತೆಯೂ ರಕ್ಷಿಸುತ್ತದೆ ಎಂದು ಹೇಳಿದರು.

 ‘ಡ್ರೋನ್‌ ಜಾಮರ್‌ ಎಲ್‌ಆರ್‌’ ‘ಮ್ಯಾನ್‌ಪ್ಯಾಕ್ಡ್‌ ಜಾಮರ್‌ ಗನ್‌’

ಎಚ್‌ಎಎಲ್‌ ದೇಶಿಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವ ಎರಡು ಸೀಟುಗಳಿರುವ ಪ್ರಾಥಮಿಕ ತರಬೇತಿ ವಿಮಾನ ‘ಎಚ್‌ಟಿಟಿ-40’ರಲ್ಲಿ ಸಂಸದ ತೇಜಸ್ವಿ ಸೂರ್ಯ ಕೆಲ ನಿಮಿಷಗಳ ಕಾಲ ಹಾರಾಟ ನಡೆಸಿದರು.

ಯಲಹಂಕ ವಾಯುಪಡೆ ನೆಲೆಯಲ್ಲಿ ನಡೆಯುತ್ತಿರುವ ಏರೋಇಂಡಿಯಾದ 4ನೇ ದಿನವಾದ ಗುರುವಾರ ತರಬೇತಿ ವಿಮಾನದ ಹಿಂಬದಿ ಸೀಟಿನಲ್ಲಿ ಕುಳಿತು ಹಾರಾಟ ನಡೆಸಿದ ಸೂರ್ಯ, ಯುಪಿಎ ಅವಧಿಯಲ್ಲಿ ಮೂಲೆಗುಂಪಾಗಿದ್ದ ಎಚ್‌ಟಿಟಿ-40 ಯೋಜನೆಯು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಮರುಜೀವ ಪಡೆಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಚ್ಎಎಲ್‌ಗೆ ಉತ್ತೇಜನ ನೀಡಿ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಿದರು. ಇದರ ಪರಿಣಾಮವಾಗಿ ಎಚ್‌ಎಎಲ್‌ ಉತ್ತಮವಾದ ತರಬೇತಿ ವಿಮಾನವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಎಂದರು.

2012ರಲ್ಲಿ ಎಚ್‌ಟಿಟಿ-40 ವಿಮಾನ ಅಭಿವೃದ್ಧಿಗೆ ಉತ್ತೇಜನ ನೀಡುವ ಬದಲು ಅಂದಿನ ಯುಪಿಎ ಸರ್ಕಾರ ಸ್ವಿಸ್ ಮೂಲದ ಪಿಲಟಸ್ ಪಿಸಿ-7 ವಿಮಾನವನ್ನು ಖರೀದಿಸಿತ್ತು. ಬಳಿಕ ಈ ವಿಮಾನ ಖರೀದಿಯಲ್ಲಿ ₹339 ಕೋಟಿ ಮೊತ್ತದ ಹಗರಣ ನಡೆದಿರುವುದು ಬಯಲಾಗಿ ಸಿಬಿಐನಲ್ಲಿ ಎಫ್‌ಐಆರ್ ದಾಖಲಾಯಿತು. ಮತ್ತೊಂದೆಡೆ ಎನ್‌ಡಿಎ ಅವಧಿಯಲ್ಲಿ ಕೇವಲ 40 ತಿಂಗಳಲ್ಲೇ ಹೊಸ ರೂಪದಲ್ಲಿ ಎಚ್‌ಟಿಟಿ-40 ವಿಮಾನ ಸಿದ್ಧವಾಗಿದೆ ಎಂದು ಹೇಳಿದರು.