ಸಾರಾಂಶ
ಇಸ್ರೇಲ್‌ನ ವಾಯು ಗಡಿ ರಕ್ಷಣಾ ವ್ಯವಸ್ಥೆ ‘ಐರನ್ ಡೋಮ್’ ಮಾದರಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಹೊಸ ತಲೆಮಾರಿನ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ‘ರಕ್ಷಕ್’ ಅನ್ನು ಅಭಿವೃದ್ಧಿಪಡಿಸುತ್ತಿದೆ.
ಮಂಜುನಾಥ ನಾಗಲೀಕರ್
ಬೆಂಗಳೂರು : ಇಸ್ರೇಲ್‌ನ ವಾಯು ಗಡಿ ರಕ್ಷಣಾ ವ್ಯವಸ್ಥೆ ‘ಐರನ್ ಡೋಮ್’ ಮಾದರಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಹೊಸ ತಲೆಮಾರಿನ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ‘ರಕ್ಷಕ್’ ಅನ್ನು ಅಭಿವೃದ್ಧಿಪಡಿಸುತ್ತಿದೆ.
ನಿಗಾ, ಪತ್ತೆ, ಟ್ರ್ಯಾಕಿಂಗ್ ಮತ್ತು ದಾಳಿ ವ್ಯವಸ್ಥೆಯನ್ನು ಒಳಗೊಂಡಿರುವ ‘ರಕ್ಷಕ್’ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಭಾರತದ ಗಡಿ ಮತ್ತು ಮಹತ್ವದ ಸ್ಥಳಗಳಲ್ಲಿ ನಿಯೋಜನೆಗೊಳ್ಳಲಿದೆ. ದೇಶಿಯವಾಗಿ ಅಭಿವೃದ್ಧಿಪಡಿಸಿರುವ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಿರು ಮಾದರಿಗಳ ಮೂಲಕ ಏರೋ ಇಂಡಿಯಾ-2025ರಲ್ಲಿ ಅನಾವರಣಗೊಳಿಸಲಾಗಿದೆ. ಡಿಆರ್‌ಡಿಒದ ವಿವಿಧ ಲ್ಯಾಬ್‌ಗಳು ಅಭಿವೃದ್ಧಿಪಡಿಸಿರುವ ಈ ಯೋಜನೆಗೆ ಖಾಸಗಿ ಕಂಪನಿಗಳು ಕೂಡ ಕೈ ಜೋಡಿಸಿರುವುದು ವಿಶೇಷವಾಗಿದೆ.
ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವ ರಾಷ್ಟ್ರಗಳಿಂದ ವಾಯು ಗಡಿಯ ಉಲ್ಲಂಘನೆ, ಕ್ಷಿಪಣಿ, ವಿಮಾನ, ಡ್ರೋನ್ ಸೇರಿದಂತೆ ಎಲ್ಲಾ ಮಾದರಿಯ ವೈಮಾನಿಕ ದಾಳಿಗಳನ್ನು ರಕ್ಷಕ್ ಹೊಡೆದುರುಳಿಸುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ.
ಹೇಗೆ ಕೆಲಸ ಮಾಡುತ್ತದೆ?:
ವಾಯುಗಡಿ ಉಲ್ಲಂಘಿಸುವ, ಸಂಭವನೀಯ ಬೆದರಿಕೆಗಳನ್ನು ಪತ್ತೆ ಹಚ್ಚಲು ದೇಶದ ಮಿಲಿಟರಿ ಸ್ಯಾಟಲೈಟ್‌ಗಳು, ವಾಯುಬೆದರಿಕೆ ಪತ್ತೆ ವ್ಯವಸ್ಥೆ ಇರುವ ಮಿಲಿಟರಿ ವಿಮಾನ ಮತ್ತು ಮಾನವರಹಿತ ವಿಮಾನಗಳು ಹಾಗೂ ಭೂಮಿಯ ಮೇಲಿನ ರೆಡಾರ್‌ಗಳು ದಿನದ 24 ತಾಸು ಕಾರ್ಯ ನಿರ್ವಹಿಸುತ್ತಿರುತ್ತವೆ. ಈ ವೇಳೆ, ಸಂಭವನೀಯ ದಾಳಿ ಮಾಡುವ ಕ್ಷಿಪಣಿ, ಡ್ರೋನ್ ಪತ್ತೆಯಾದರೆ ಆ ಮಾಹಿತಿಯನ್ನು ಭೂಮಿಯ ಮೇಲಿರುವ ರಕ್ಷಕ್ ಕಂಪ್ಯೂಟರ್ ಸಿಸ್ಟಮ್‌ಗೆ ರವಾನಿಸುತ್ತದೆ.
ಡ್ರೋನ್ ಎಷ್ಟು ಎತ್ತರದಲ್ಲಿದೆ?. ಅದರ ವೇಗ, ಗಾತ್ರ, ಅಕ್ಷಾಂಶ ಮತ್ತು ರೇಖಾಂಶವನ್ನು ನಿರ್ಧರಿಸುವ ರಕ್ಷಕ್ ಕಂಪ್ಯೂಟರ್ ಸಿಸ್ಟಮ್, ಆ ಮಾಹಿತಿಯನ್ನು ‘ದಾಳಿ ಕ್ಷಿಪಣಿ’ಗಳ ವಿಭಾಗಕ್ಕೆ ರವಾನಿಸುತ್ತದೆ. ಮೊದಲ ಹಂತದಲ್ಲಿ ಬೆದರಿಕೆ ಡ್ರೋನ್ ಮೇಲೆ ಕ್ಷಿಪಣಿ ದಾಳಿ ಮಾಡಿ ಹೊಡೆದುರುಳಿಸುತ್ತದೆ. ಒಂದು ವೇಳೆ ಮೊದಲ ಹಂತದ ಕ್ಷಿಪಣಿ ವಿಫಲವಾದರೆ 2ನೇ ಹಂತದಲ್ಲಿ ಬೆದರಿಕೆ ಡ್ರೋನ್‌ನ ಎಲೆಕ್ಟ್ರಾನಿಕ್ಸ್ ಅನ್ನು ದುರ್ಬಲಗೊಳಿಸಲು ‘ಹೈ ಪರ್ಫಾಮೆನ್ಸ್ ಮೈಕ್ರೋವೇವ್ ರೇಡಿಯೇಷನ್ ಲೇಸರ್ ಬೀಮ್’ ಅನ್ನು ಶೂಟ್ ಮಾಡಲಾಗುತ್ತದೆ. ಇದರಿಂದ ಡ್ರೋನ್ ವ್ಯವಸ್ಥೆ ಮತ್ತು ವೇಗ ದುರ್ಬಲವಾಗುತ್ತದೆ. ಆಗ ವೇಗ ನಿಧಾನಗೊಂಡ ಡ್ರೋನ್ ಮೇಲೆ ಮೂರನೇ ಹಂತದಲ್ಲಿ ಅಟ್ಯಾಕ್ ಗನ್ ಮೂಲಕ ಶೂಟ್ ಮಾಡಲಾಗುತ್ತದೆ.
ಅಟ್ಯಾಕ್ ಗನ್ ಕೂಡ ವಿಫಲವಾದರೆ ಮತ್ತೊಂದು ಸುತ್ತಿನಲ್ಲಿ ಬಲವಾದ ಲೇಸರ್ ಬೀಮ್ ಅನ್ನು ಡ್ರೋನ್ ಮೇಲೆ ಶೂಟ್ ಮಾಡಲಾಗುತ್ತದೆ. ಮಿಲಿಟರಿ ಬಳಕೆಯ ಬಲವಾದ ಲೇಸರ್ ಬೀಮ್‌ನ ಶಾಖಕ್ಕೆ ಡ್ರೋನ್ ಆಕಾಶದಲ್ಲೇ ಸುಟ್ಟು ಹೋಗುವಂತೆ ರಕ್ಷಕ್ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಕೆಲವೇ ಸೆಕೆಂಡುಗಳಲ್ಲಿ ಮುಗಿದು ಹೋಗುತ್ತವೆ.
‘ವಾಯು ನಿಗಾ ವ್ಯವಸ್ಥೆಯ ಅಭಿವೃದ್ಧಿ ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ, ರಕ್ಷಕ್ ವ್ಯವಸ್ಥೆಯನ್ನು 2 ವರ್ಷಗಳಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಈ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ನಿಯೋಜನೆ ಮಾಡಲಾಗುತ್ತದೆ. ನಿರಂತರವಾಗಿ ಈ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ’ ಎಂದು ಡಿಆರ್‌ಡಿಒ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮಹಾನಿರ್ದೇಶಕ ಡಾ.ಬಿ.ಕೆ. ದಾಸ್ ತಿಳಿಸಿದರು.