ಸಾರಾಂಶ
ಧರ್ಮಸ್ಥಳ ವಿರುದ್ಧ ಅಪಪ್ರಚಾರ, ಷಡ್ಯಂತ್ರ ನಡೆಯುತ್ತಿದೆ ಹಾಗೂ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಜೆಡಿಎಸ್ ಪಕ್ಷ ಆ.31ರ ಭಾನುವಾರ ‘ಧರ್ಮಸ್ಥಳ ಸತ್ಯ ಯಾತ್ರೆ’ ಹಮ್ಮಿಕೊಂಡಿದೆ.
ಬೆಂಗಳೂರು : ಧರ್ಮಸ್ಥಳ ವಿರುದ್ಧ ಅಪಪ್ರಚಾರ, ಷಡ್ಯಂತ್ರ ನಡೆಯುತ್ತಿದೆ ಹಾಗೂ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಜೆಡಿಎಸ್ ಪಕ್ಷ ಆ.31ರ ಭಾನುವಾರ ‘ಧರ್ಮಸ್ಥಳ ಸತ್ಯ ಯಾತ್ರೆ’ ಹಮ್ಮಿಕೊಂಡಿದೆ.
ಮಿತ್ರ ಪಕ್ಷ ಬಿಜೆಪಿ ಸೆ.1ರಂದು ಸೋಮವಾರ ‘ಧರ್ಮಸ್ಥಳ ಚಲೋ’ ಕಾರ್ಯಕ್ರಮ ಹಮ್ಮಿಕೊಂಡ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿರುವ ಜೆಡಿಎಸ್ ಪಕ್ಷ, ಬಿಜೆಪಿಗಿಂತ ಒಂದು ದಿನ ಮುಂಚಿತವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿದೆ.
ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ, ಧರ್ಮಸ್ಥಳಕ್ಕೆ ಅಪಮಾನ ಆಗುವ ರೀತಿ ಕೆಲವೊಂದು ಹೆಜ್ಜೆಗಳನ್ನು ಈ ಸರ್ಕಾರ ಇಟ್ಟಿದೆ. ನಾನು ಒಬ್ಬ ಭಕ್ತನಾಗಿ ಹಾಗೂ ನಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಭಾನುವಾರ ಧರ್ಮಸ್ಥಳ ಸತ್ಯ ಯಾತ್ರೆ ಕೈಗೊಂಡು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.
ಯಾತ್ರೆಗೆ ಹಾಸನವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿದ್ದೇವೆ. ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರು ಹಾಸನಕ್ಕೆ ಆಗಮಿಸಲಿದ್ದಾರೆ. ಅಲ್ಲಿ ತಿಂಡಿ ವ್ಯವಸ್ಥೆ ಮಾಡಲಾಗಿದೆ. ನಂತರ ದರ್ಮಸ್ಥಳ ನೇತ್ರಾವತಿಗೆ ತೆರಳುತ್ತೇವೆ. ಬಳಿಕ ಅಲ್ಲಿಂದ ಮಂಜುನಾಥಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ವಿವರಿಸಿದರು.
ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ತನಿಖೆ ಯಾವ ರೀತಿ ಮಾಡಿದ್ದಾರೆ? ಪಾರದರ್ಶಕವಾಗಿ ತನಿಖೆ ನಡೆದಿದೆಯೇ? ಇದರ ಹಿಂದೆ ಯಾರಿದ್ದಾರೆ? ಈ ಎಪಿಸೋಡ್ ಹಿಂದೆ ಇರುವ ಕಥೆ, ಚಿತ್ರಕಥೆ ಯಾರದ್ದು? ನಿರ್ಮಾಪಕ ಯಾರು ಎಂದು ಪತ್ತೆ ಮಾಡಬೇಕು. ಹೀಗಾಗಿ ಎನ್ಐಎ ತನಿಖೆ ನಡೆಯಬೇಕು ಎಂದು ನಿಖಿಲ್ ಆಗ್ರಹಿಸಿದರು.
ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಟಿ.ಎ. ಶರವಣ, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ರಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.