ಕರ್ನಾಟಕ ಬಜೆಟ್ 2025 : ಬಡವರ ಮನೆ ಸಾಲ ತಗ್ಗಿಸಲು ಬಡ್ಡಿ ಕಡಿತ - ಬಡವರಿಗಾಗಿ ಮನೆ ನಿರ್ಮಾಣ

| N/A | Published : Mar 08 2025, 09:35 AM IST

Karnataka budget

ಸಾರಾಂಶ

ಬಡವರ ಮನೆಗಳ ಸಾಲದ ಮೇಲಿನ ಬಡ್ಡಿ ಕಡಿತ, ಸರ್ಕಾರದ ಜಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಡವರ ಮನೆಗಳ ನಿರ್ಮಾಣ, ಬೆಂಗಳೂರಿನಲ್ಲಿ ಕೆಎಚ್‌ಬಿಯ ಸೂರ್ಯ ನಗರ 4 ಹಂತದ ಯೋಜನೆಯಡಿ ನಿವೇಶನಗಳ ಹಂಚಿಕೆ ಸೇರಿದಂತೆ ವಸತಿ ಇಲಾಖೆಗೆ ಬಜೆಟ್‌ನಲ್ಲಿ ವಿಶೇಷ ಆದ್ಯತೆಗಳನ್ನು ನೀಡಲಾಗಿದೆ.

 ಬೆಂಗಳೂರು :  ಬಡವರ ಮನೆಗಳ ಸಾಲದ ಮೇಲಿನ ಬಡ್ಡಿ ಕಡಿತ, ಸರ್ಕಾರದ ಜಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಡವರ ಮನೆಗಳ ನಿರ್ಮಾಣ, ಬೆಂಗಳೂರಿನಲ್ಲಿ ಕೆಎಚ್‌ಬಿಯ ಸೂರ್ಯ ನಗರ 4 ಹಂತದ ಯೋಜನೆಯಡಿ ನಿವೇಶನಗಳ ಹಂಚಿಕೆ ಸೇರಿದಂತೆ ವಸತಿ ಇಲಾಖೆಗೆ ಬಜೆಟ್‌ನಲ್ಲಿ ವಿಶೇಷ ಆದ್ಯತೆಗಳನ್ನು ನೀಡಲಾಗಿದೆ.

ರಾಜೀವ್‌ಗಾಂಧಿ ವಸತಿ ನಿಗಮದಿಂದ ‘ಪಾಲುದಾರಿಕೆಯಲ್ಲಿ ಕೈಗೆಟುಕುವ ದರದ ಮನೆಗಳು’ (ಎಎಚ್‌ಪಿ) ಯೋಜನೆಯಡಿ ಮನೆ ನಿರ್ಮಿಸುವ ಫಲಾನುಭವಿಗಳು ಸಾಲ ಪಡೆದಾಗ, ಅದರ ಬಡ್ಡಿ ಹೊರೆಯನ್ನು ಕಡಿಮೆ ಮಾಡಲು ‘ಬಡ್ಡಿ ಕಡಿತ ಯೋಜನೆ’ಯನ್ನು (ಇಂಟರೆಸ್ಟ್ ಸಬ್‌ವೆನ್ಷನ್) ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಒಟ್ಟಾರೆ 1,80,253 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಯೋಜನೆಯ ಫಲಾನುಭವಿಗಳ ವಂತಿಕೆಯನ್ನು ಒಂದು ಲಕ್ಷ ರು. ಇಳಿಕೆ ಮಾಡಲಾಗಿದ್ದು, ಫಲಾನುಭವಿಗಳ ಪರವಾಗಿ ಸರ್ಕಾರವೇ 5 ಲಕ್ಷ ರು. ಭರಿಸುತ್ತಿದೆ. ಈಗಾಗಲೇ, 86,651 ಮನೆಗಳು ಪೂರ್ಣಗೊಂಡಿವೆ. ಉಳಿದ ಮನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಖಾಸಗಿ ಸಹಭಾಗಿತ್ವ

ಸರ್ಕಾರದ ಭೂಮಿಯನ್ನು ಬಳಸಿಕೊಂಡು ಖಾಸಗಿ ಸಹಭಾಗಿತ್ವದಲ್ಲಿ ವಸತಿ ಘಟಕಗಳನ್ನು ನಿರ್ಮಿಸಿ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಹಂಚಿಕೆ ಮಾಡಲು ಯೋಜನೆಯನ್ನು ರೂಪಿಸಲಾಗುತ್ತದೆ.

ಕರ್ನಾಟಕ ಗೃಹ ಮಂಡಳಿಯಿಂದ ಆನೇಕಲ್‌ ತಾಲೂಕಿನ ಸೂರ್ಯ ನಗರದ 4ನೇ ಹಂತದ ಯೋಜನೆಯಡಿ 16,140 ನಿವೇಶನಗಳನ್ನು 2025-26ನೇ ಸಾಲಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 50:50 ಅನುಪಾತದಡಿ ಭೂ ಮಾಲೀಕರ ಪಾಲಿನ ನಿವೇಶನಗಳನ್ನು ನೀಡಿ, ಉಳಿದ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು.

ಬಹುಮಹಡಿ ಯೋಜನೆಯಡಿ ಮನೆ ವಿತರಣೆ

ರಾಜೀವ್‌ಗಾಂಧಿ ವಸತಿ ನಿಗಮದಿಂದ ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸುತ್ತಿರುವ ‘ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ಯೋಜನೆ’ಯಡಿ, ಈಗಾಗಲೇ ಠೇವಣಿ ಮೊತ್ತವನ್ನು ಪಾವತಿಸಿರುವ 12,153 ಫಲಾನುಭವಿಗಳಿಗೆ ಅವರು ಪಾವತಿಸಬೇಕಾದ ಮೊತ್ತದಲ್ಲಿ 1 ಲಕ್ಷ ರು. ಕಡಿತಗೊಳಿಸಿ ರಾಜ್ಯ ಸರ್ಕಾರದಿಂದ 121 ಕೋಟಿ ರು. ಭರಿಸಿ ಸ್ವಂತ ಮನೆಯ ಕನಸು ನನಸು ಮಾಡಲಾಗುತ್ತಿದೆ.

- ಎಎಚ್‌ಪಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಪಡೆಯುವ ಸಾಲದ ಮೇಲಿನ ಬಡ್ಡಿ ಕಡಿತ

- ಸರ್ಕಾರದ ಜಾಗದಲ್ಲಿ ಖಾಸಗಿ ಪಾಲುದಾರಿಕೆಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮನೆ ನಿರ್ಮಾಣ

- ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪಿಎಂ ಆವಾಸ್‌ ಯೋಜನೆಯಡಿ ನಿರ್ಮಾಣವಾಗುವ ಮನೆಗಳ ಶುಲ್ಕದಲ್ಲಿ 1 ಲಕ್ಷ ರು. ಕಡಿತ

- ಸೂರ್ಯ ನಗರದ 4ನೇ ಹಂತದ ಯೋಜನೆಯಡಿ 16,140 ನಿವೇಶನಗಳನ್ನು 2025-26ನೇ ಸಾಲಿನಲ್ಲಿ ಅಭಿವೃದ್ಧಿಪಡಿಸಿ ಹಂಚಿಕೆ

ಪಿಪಿಪಿ ಮಾದರಿ ಮನೆ ಒಳ್ಳೇದು

ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಪಿಪಿಪಿ ಮಾದರಿಯಲ್ಲಿ ಮನೆಗಳ ನಿರ್ಮಾಣ, ಬಡವರು ಮನೆ ಕಟ್ಟಿಸಿಕೊಳ್ಳಲು ಸಾಲದ ಮೇಲಿನ ಬಡ್ಡಿ ಕಡಿತ ಯೋಜನೆ ಹಾಗೂ ಕೊಳೆಗೇರಿ ಪ್ರದೇಶಗಳ ಜನರಿಗೆ ಮನೆ ಕಟ್ಟಿಸಿಕೊಡುವ ಯೋಜನೆಗಳು ಸ್ವಾಗತಾರ್ಹ. ಅದೇ ರೀತಿ ಬೆಂಗಳೂರು ಹೊರವಲಯದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಉದ್ಯೋಗಿಗಳು, ಕಾರ್ಮಿಕರಿಗೆ ಮನೆಗಳ ನಿರ್ಮಾಣ, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಬೇಕು. ಅದಕ್ಕಾಗಿ ಖಾಸಗಿ ಪಾಲುದಾರಿಕೆಯ ಸಾಧ್ಯತೆ ಬಗ್ಗೆ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಬಜೆಟ್‌ನಲ್ಲಿ ಅದರ ಉಲ್ಲೇಖವಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಚಿಂತಿಸಬಹುದು ಎಂಬ ನಿರೀಕ್ಷೆ ಇದೆ.

- ಆರ್. ಶಿವಕುಮಾರ್, ಅಧ್ಯಕ್ಷರು, ಪೀಣ್ಯ ಕೈಗಾರಿಕಾ ಸಂಘ