ಗ್ಯಾರಂಟಿಗಳಿಂದಾಗಿ ಕರ್ನಾಟಕ ಸರ್ಕಾರದಲ್ಲಿ ದುಡ್ಡಿಲ್ಲ ಎಂದಿದ್ದಕ್ಕೆ ನಿರ್ಮಲಾ ವಿರುದ್ಧ ಮುಗಿಬಿದ್ದ ರಾಜ್ಯ ಸರ್ಕಾರ

| N/A | Published : Feb 04 2025, 08:06 AM IST

Nirmala Sitharaman
ಗ್ಯಾರಂಟಿಗಳಿಂದಾಗಿ ಕರ್ನಾಟಕ ಸರ್ಕಾರದಲ್ಲಿ ದುಡ್ಡಿಲ್ಲ ಎಂದಿದ್ದಕ್ಕೆ ನಿರ್ಮಲಾ ವಿರುದ್ಧ ಮುಗಿಬಿದ್ದ ರಾಜ್ಯ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

 ನಿರ್ಮಲಾ  ಅವರು ''ಕರ್ನಾಟಕ ದಿವಾಳಿಯಾಗಿದೆ'' ಎಂದು ಸುಳ್ಳು ಹೇಳುವ ಮೊದಲು ಕೇಂದ್ರ ಸರ್ಕಾರ ಎಷ್ಟು ಲಕ್ಷ ಕೋಟಿ ಸಾಲ ಮಾಡಿದೆ ಎಂಬುದನ್ನು ಅರಿಯಲಿ. ಇದಕ್ಕೂ ಮುನ್ನ ಬಜೆಟ್‌ನಲ್ಲಿ ರಾಜ್ಯಕ್ಕೆ ನೀಡಿರುವ ಕೊಡುಗೆಯ ಪಟ್ಟಿ ಕೊಡಲಿ ಎಂದು ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು ತಿರುಗೇಟು ನೀಡಿದ್ದಾರೆ.

ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ''ಕರ್ನಾಟಕ ದಿವಾಳಿಯಾಗಿದೆ'' ಎಂದು ಸುಳ್ಳು ಹೇಳುವ ಮೊದಲು ಕೇಂದ್ರ ಸರ್ಕಾರ ಎಷ್ಟು ಲಕ್ಷ ಕೋಟಿ ಸಾಲ ಮಾಡಿದೆ ಎಂಬುದನ್ನು ಅರಿಯಲಿ. ಇದಕ್ಕೂ ಮುನ್ನ ಬಜೆಟ್‌ನಲ್ಲಿ ರಾಜ್ಯಕ್ಕೆ ನೀಡಿರುವ ಕೊಡುಗೆಯ ಪಟ್ಟಿ ಕೊಡಲಿ ಎಂದು ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು ತಿರುಗೇಟು ನೀಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡಿ, ನಿರ್ಮಲಾ ಸೀತಾರಾಮನ್‌ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ಅನುದಾನ ನೀಡಲಿಲ್ಲ. ‘ನಾಲಿಗೆಯಿಂದ ಒಂದು ಮಾತು ಬಂದರೆ ಅದನ್ನು ಉಳಿಸಿಕೊಂಡು, ಅದರಂತೆ ನಡೆಯಬೇಕು. ಇದನ್ನು ನೋಡಿದರೆ ನನಗೆ ನಾಚಿಕೆಯಾಗುತ್ತದೆ. ಅವರು ಮೊದಲು ತಮ್ಮ ಮಾತು ಉಳಿಸಿಕೊಳ್ಳಲಿ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ನಮ್ಮ ಬಗ್ಗೆ ಮಾತನಾಡುವ ಮೊದಲು ಅವರ ಸಾಲ ನೋಡಿಕೊಳ್ಳಲಿ. ರಾಜ್ಯ ಸರ್ಕಾರ ಅಷ್ಟು ದೊಡ್ಡ ಪ್ರಮಾಣದ ಸಾಲ ಮಾಡಿಲ್ಲ. ನಾವು ಪಂಚ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದಾಗ ಪ್ರಧಾನಿ ಕೂಡ ನಮ್ಮ ರಾಜ್ಯ ದಿವಾಳಿಯಾಗಲಿದೆ ಎಂದಿದ್ದರು. ಇದೀಗ ಎಲ್ಲಾ ರಾಜ್ಯಗಳ ಚುನಾವಣೆಯಲ್ಲೂ ಅವರು ನಮ್ಮ ಯೋಜನೆಗಳ ನಕಲು ಮಾಡುತ್ತಿದ್ದಾರೆ. ಇದು ಏನನ್ನು ತೋರಿಸುತ್ತದೆ ಎಂದು ಪ್ರಶ್ನಿಸಿದರು.

ಜನರಿಗೆ ನೆರವಾಗಲು ಗ್ಯಾರಂಟಿ:

ನಮ್ಮ ಸರ್ಕಾರ ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಬಳಲಿದ್ದ ಜನಸಾಮಾನ್ಯರಿಗೆ ನೆರವಾಗಲು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ ಅಷ್ಟೇ ಹೊರತು ಮತಕ್ಕಾಗಿ ಅಲ್ಲ. ನಮ್ಮ ಸರ್ಕಾರದ ಆರ್ಥಿಕ ಪರಿಸ್ಥಿತಿ ಹಾಗೂ ದಿವಾಳಿ ವಿಚಾರ ಪಕ್ಕಕ್ಕಿರಲಿ, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವ ಕೊಡುಗೆ ನೀಡಿದ್ದಾರೆ ಎಂದು ಮೊದಲು ಪಟ್ಟಿ ನೀಡಲಿ ಎಂದು ನಿರ್ಮಲಾ ಸೀತಾರಾಮನ್‌ ಅವರಿಗೆ ತಿರುಗೇಟು ನೀಡಿದರು.

ರಾಜ್ಯಕ್ಕೆ ನಿಮ್ಮ ಕೊಡುಗೆ ಏನು?-ಪರಂ:

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಬಗ್ಗೆ ಆರೋಪ ಮಾಡುತ್ತಾರೆ. ಕೇಂದ್ರ ಹಣಕಾಸು ಸಚಿವರಾಗಿ ಬಜೆಟ್‌ನಲ್ಲಿ ರಾಜ್ಯಕ್ಕೆ ನಿಮ್ಮ ಕೊಡುಗೆಯೇನು? ಎಂಬುದನ್ನು ಮೊದಲು ಹೇಳಿ. ಒಂದು ವೇಳೆ ರಾಜ್ಯಕ್ಕೆ ನೀವೇನಾದರೂ ಕೊಡುಗೆ ನೀಡಿದ್ದರೆ ಪಕ್ಷಭೇದ ಮರೆತು ಹೊಗಳುತ್ತೇವೆ. ಬಜೆಟ್‌ನಲ್ಲಿ ತಮಿಳುನಾಡಿಗಿಂತ ಕಡಿಮೆ ಹಣ ನಮ್ಮ ರಾಜ್ಯಕ್ಕೆ ಕೊಟ್ಟಿದ್ದೀರಿ. ಇದರಿಂದ ನಮಗೆ ನಾಚಿಕೆ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ನೀವೇ ಹಣ ಘೋಷಣೆ ಮಾಡಿ ನೀಡಿಲ್ಲ. ಬೆಂಗಳೂರು ನಗರಾಭಿವೃದ್ಧಿ, ನೀರಾವರಿ ಸೇರಿ ಯಾವುದೇ ಯೋಜನೆಗಳಿಗೂ ಹಣ ನೀಡಿಲ್ಲ. ನಾವು ಹಳ್ಳಿಗಾಡಿನ ಬಡ ಜನರ ಸಲುವಾಗಿ ಗ್ಯಾರಂಟಿಗಳನ್ನು ತಂದಿದ್ದೇವೆ. ಅವು ಲಕ್ಷಾಂತರ ಬಡವರಿಗೆ ಉಪಯೋಗ ಆಗಿವೆ. ರಾಜ್ಯದ ಜನತೆಗಾಗಿ ನೀವು ಮಾಡಿರುವ ಕೆಲಸವಾದರೂ ಏನು ಎಂದು ನಿರ್ಮಲಾರನ್ನು ಪ್ರಶ್ನಿಸಿದರು.

ಯೋಗ್ಯತೆಯಿಲ್ಲ-ಮಧು: ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸೂಕ್ತ ಅನುದಾನ ಕೊಡದವರಿಗೆ ಕರ್ನಾಟಕ ಸರ್ಕಾರ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ. ಗ್ಯಾರಂಟಿಗಳಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿಲ್ಲ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಕೊಡಬೇಕಿರುವ ತೆರಿಗೆ ಪಾಲು, ಅನುದಾನ ಕೊಡದೆ ದಿವಾಳಿ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು.

4 ಲಕ್ಷ ಕೋಟಿ ರು.ಗೂ ಅಧಿಕ ತೆರಿಗೆ ನಮ್ಮ ರಾಜ್ಯದಿಂದ ಹೋಗುತ್ತಿದೆ. ಅದರಲ್ಲಿ ನ್ಯಾಯಯುತ ತೆರಿಗೆ ಪಾಲನ್ನು ವಾಪಸ್‌ ಕೊಡುತ್ತಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಎಲ್ಲವನ್ನೂ ಕಡಿಮೆ ಮಾಡಿಕೊಂಡು ಬರುತ್ತಿದ್ದಾರೆ. ಈ ಬಜೆಟ್‌ನಲ್ಲೂ ಅದೇ ಅನ್ಯಾಯ ಮುಂದುವರೆದಿದೆ. ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ಅನುದಾನ ನೀಡದವರಿಗೆ ಕರ್ನಾಟಕ ಸರ್ಕಾರದ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ ಎಂದು ಹೇಳಿದರು.

ಆರ್ಥಿಕ ಸಂಕಷ್ಟ ಇದ್ದಿದ್ದರೆ ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿ ಸಾಧ್ಯವಾಗುತ್ತಿತ್ತಾ? ಕರ್ನಾಟಕ ಸೇರಿ ಕೇಂದ್ರದಿಂದ ಅನ್ಯಾಯಕ್ಕೊಳಗಾಗುತ್ತಿರುವ ಎಲ್ಲ ರಾಜ್ಯಗಳು ತಮ್ಮ ಪಾಲಿನ ತೆರಿಗೆ, ಅನುದಾನ ಪಡೆಯಲು ಆಗಬೇಕಿರುವ ಹೋರಾಟ, ಪ್ರತಿಭಟನೆಗೆ ಏನು ಮಾಡಬೇಕೋ ಅದನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ಸರ್ಕಾರ ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಬಳಲಿದ್ದ ಜನಸಾಮಾನ್ಯರಿಗೆ ನೆರವಾಗಲು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ ಅಷ್ಟೇ ಹೊರತು ಮತಕ್ಕಾಗಿ ಅಲ್ಲ. ನಮ್ಮ ಸರ್ಕಾರದ ಆರ್ಥಿಕ ಪರಿಸ್ಥಿತಿ ಹಾಗೂ ದಿವಾಳಿ ವಿಚಾರ ಪಕ್ಕಕ್ಕಿರಲಿ, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವ ಕೊಡುಗೆ ನೀಡಿದ್ದಾರೆ ಎಂದು ಮೊದಲು ಪಟ್ಟಿ ನೀಡಲಿ.

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ