ಸಾರಾಂಶ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ‘ನೀಲಿ ಬಣ್ಣದ ಬಾಲ್ ಪೆನ್’ ಬಳಕೆಯನ್ನು ಕೆಪಿಎಸ್‌ಸಿ ಕಡ್ಡಾಯಗೊಳಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) 24 ಹುದ್ದೆಗಳ ನೇಮಕಾತಿಯಲ್ಲಿನ ‘ಅಕ್ರಮ ಆರೋಪ’ ಕಾರಣ ಎನ್ನುವುದು ಬೆಳಕಿಗೆ ಬಂದಿದೆ.
ಬೆಂಗಳೂರು : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ‘ನೀಲಿ ಬಣ್ಣದ ಬಾಲ್ ಪೆನ್’ ಬಳಕೆಯನ್ನು ಕೆಪಿಎಸ್‌ಸಿ ಕಡ್ಡಾಯಗೊಳಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) 24 ಹುದ್ದೆಗಳ ನೇಮಕಾತಿಯಲ್ಲಿನ ‘ಅಕ್ರಮ ಆರೋಪ’ ಕಾರಣ ಎನ್ನುವುದು ಬೆಳಕಿಗೆ ಬಂದಿದೆ.
24 ಎಇಇ ಹುದ್ದೆಗಳ ನೇಮಕಾತಿಗೆ 2022ರಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ 10 ಅಭ್ಯರ್ಥಿಗಳು ಒಎಂಆರ್ ಶೀಟ್ ತಿದ್ದಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿರುವ ಕೆಪಿಎಸ್‌ಸಿಯ ಐವರು ಸದಸ್ಯರ ಉಪ ಸಮಿತಿ, 15 ದಿನಗಳ ಹಿಂದೆ ಕೆಪಿಎಸ್‌ಸಿಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದೆ.
ಅಕ್ರಮ ಪತ್ತೆಯಾಗಿದ್ದು ಹೇಗೆ?:
ಎಇಇ ಆಗಿ ಆಯ್ಕೆಯಾಗಿರುವ 24 ಅಭ್ಯರ್ಥಿಗಳ ಪೈಕಿ ಕೆಲ ಅಭ್ಯರ್ಥಿಗಳು ಈ ಹಿಂದೆ ನಡೆದಿರುವ ಬೇರೆ ಬೇರೆ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಪಡೆದಿದ್ದಾರೆ. ಆದರೆ, ಎಇಇ ಪರೀಕ್ಷೆಯಲ್ಲಿ ಏಕಾಏಕಿ ಹೆಚ್ಚು ಅಂಕ ಪಡೆದು ಆಯ್ಕೆಯಾಗಿದ್ದಾರೆ. ಇದರಲ್ಲಿ ಅಕ್ರಮ ನಡೆದಿದೆ ಎಂದು ಕೆಲ ಅಭ್ಯರ್ಥಿಗಳು ಕೆಪಿಎಸ್‌ಸಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಚನೆಯಾದ ಸಮಿತಿ ಅಕ್ರಮ ಪತ್ತೆ ಮಾಡಲು ಅಭ್ಯರ್ಥಿಗಳ ಒಎಂಆರ್ ಮೂಲ ಪ್ರತಿ, ವಿದ್ಯಾರ್ಥಿಗೆ ನೀಡುವ ಕಾರ್ಬನ್ ಪ್ರತಿ ಮತ್ತು ಪರೀಕ್ಷಾ ಕೇಂದ್ರದಲ್ಲಿನ ಸಿಸಿ ಕ್ಯಾಮೆರಾ ವಿಡಿಯೋಗಳ ಪರಿಶೀಲನೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು.
ಒಎಂಆರ್ ಆಕಾರದಲ್ಲಿ ವ್ಯತ್ಯಾಸ: ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲೇ ಅಕ್ರಮ ಎಸಗಿದ್ದಾರಾ ಎನ್ನುವುದು ಸಿಸಿ ಕ್ಯಾಮೆರಾ ವಿಡಿಯೋದಿಂದ ಗೊತ್ತಾಗಲಿಲ್ಲ. ಇನ್ನು ಒಎಂಆರ್ ಮೂಲ ಪ್ರತಿಯಲ್ಲಿ ಕಪ್ಪು ಬಣ್ಣದ ಪೆನ್ ಬಳಸಿ ಉತ್ತರಗಳನ್ನು ಟಿಕ್ ಮಾಡಿದ್ದ ಕಾರಣ ಅದರಲ್ಲೂ ಅಕ್ರಮದ ಕುರಿತಾದ ಗಮನಾರ್ಹ ವ್ಯತ್ಯಾಸಗಳು ಕಂಡು ಬರಲಿಲ್ಲ.
ಆದರೆ, ‘ಮೂಲ ಪ್ರತಿ ಮತ್ತು ಕಾರ್ಬನ್ ಪ್ರತಿ’ಯಲ್ಲಿ ಟಿಕ್ ಮಾಡಿರುವ ಆಕಾರಗಳಲ್ಲಿ (ಶೇಪ್) ವ್ಯತ್ಯಾಸ ಕಂಡು ಬಂದಿತ್ತು. ಹೀಗಾಗಿ, ಒಎಂಆರ್ ತಿದ್ದಿ ಅಕ್ರಮ ಎಸಗಿರುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಹೆಚ್ಚಿನ ತನಿಖೆ ಆಗಬೇಕು ಎಂದು ಸಮಿತಿ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ನೀಲಿ ಪೆನ್ ಬಳಕೆಗೆ ನೀಡಿದ ಕಾರಣಗಳು
- ಬಿಳಿ ಹಾಳೆಯಲ್ಲಿನ ಕಪ್ಪು ಬಣ್ಣದ ಗೆರೆಗಳು, ಅಕ್ಷರಗಳ ನಡುವೆ ನೀಲಿ ಬಣ್ಣ ಎದ್ದು ಕಾಣುತ್ತದೆ. ಅದೇ ಕಪ್ಪು ಬಣ್ಣವಾದರೆ ಹೆಚ್ಚು ವ್ಯತ್ಯಾಸ ಕಾಣಿಸುವುದಿಲ್ಲ.
- ನೀಲಿ ಬಣ್ಣವು ಹೆಚ್ಚು ಪ್ರತಿಫಲನ ಗುಣ ಹೊಂದಿರುವುದರಿಂದ ಒಎಂಆರ್ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಅನುಕೂಲವಾಗುತ್ತದೆ. ಅಲ್ಲದೆ ಹೆಚ್ಚಿನ ಅವಧಿಗೆ ಗಾಢವಾಗಿಯೇ ಉಳಿಯುತ್ತದೆ.
- ತಿದ್ದುವುದು, ತಿರುಚುವ ಪ್ರಸಂಗಗಳನ್ನು ಕಪ್ಪು ಬಣ್ಣಕ್ಕಿಂತ ನೀಲಿ ಬಣ್ಣದಲ್ಲಿದ್ದಾಗ ಬರಿಗಣ್ಣಿನಲ್ಲಿ ಪತ್ತೆ ಹಚ್ಚಲು ಹೆಚ್ಚು ಅನುಕೂಲವಾಗುತ್ತದೆ.
ಕಳಂಕಿತ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದುಗೊಳಿಸುವ ಜೊತೆಗೆ ಪೊಲೀಸ್ ಠಾಣೆಗೆ ದೂರು ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ತಡೆಯಲು ಮತ್ತು ಅಗತ್ಯ ಬಿದ್ದಾಗ ತನಿಖೆ ನಡೆಸಲು ಅನುಕೂಲವಾಗುವಂತೆ ಪರೀಕ್ಷೆಗಳಲ್ಲಿ ನೀಲಿ ಬಣ್ಣದ ಪೆನ್ ಬಳಕೆ ಕಡ್ಡಾಯಗೊಳಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿಚಾರಣಾ ವರದಿಯಲ್ಲಿನ ಪ್ರಮುಖ ಶಿಫಾರಸು
- ನೇಮಕದ ಸತ್ಯಾಸತ್ಯತೆ ತಿಳಿಯಲು ಪೊಲೀಸ್ ಠಾಣೆಗೆ ದೂರು ನೀಡಬೇಕು ಮತ್ತು ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಬೇಕು.
- ಒಎಂಆರ್ ಅಕ್ರಮ ತಡೆಯಲು ನೀಲಿ ಬಣ್ಣದ ಬಾಲ್ ಪೆನ್ ಬಳಕೆ ಕಡ್ಡಾಯಗೊಳಿಸಬೇಕು.
- ಒಎಂಆರ್‌ನಲ್ಲಿ ನಾಲ್ಕು ಆಯ್ಕೆಗಳ ಜೊತೆಗೆ ‘ಉತ್ತರ ಗೊತ್ತಿಲ್ಲ’ ಎನ್ನುವ 5ನೇ ಆಯ್ಕೆ ನೀಡಬೇಕು.
- ಸರಿ ಉತ್ತರಗಳನ್ನು ಟಿಕ್ ಮಾಡಲು ಒಎಂಆರ್ ಮೂಲ ಪ್ರತಿ ಜೊತೆಗೆ 2 ಕಾರ್ಬನ್ ಪ್ರತಿಗಳು ಇರಬೇಕು. ಒಂದು ಕಾರ್ಬನ್ ಪ್ರತಿ ವಿದ್ಯಾರ್ಥಿಗೆ ಮತ್ತೊಂದು ಪ್ರತಿಯನ್ನು ಆಕ್ಷೇಪಣೆಗಳು ಬಂದಾಗ ಪರಿಶೀಲಿಸಲು ಸ್ಟ್ರಾಂಗ್ ರೂಮಿನಲ್ಲಿರಿಸಬೇಕು.
- ಪರೀಕ್ಷಾ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಕೆ, ಎಲ್ಲಾ ಅಭ್ಯರ್ಥಿಗಳ ತಪಾಸಣೆ ಮಾಡಬೇಕು.
-ಕೋಟ್-
ಸಮಿತಿ ಸಲ್ಲಿಸಿರುವ ವರದಿ ಕುರಿತು ಕೆಪಿಎಸ್ಸಿ ನಿಯಮಗಳು ಮತ್ತು ಕಾನೂನು ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ
- ರಮಣದೀಪ್ ಚೌಧರಿ, ಕಾರ್ಯದರ್ಶಿ, ಕೆಪಿಎಸ್‌ಸಿ