ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ

| N/A | Published : Aug 05 2025, 11:37 AM IST

KPSC New 01

ಸಾರಾಂಶ

ಕಳೆದ 2024ನೇ ಸಾಲಿನ 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಅನುಮತಿಸಿರುವ ಹೈಕೋರ್ಟ್, ತನ್ನ ಪೂರ್ವಾನುಮತಿಯಿಲ್ಲದೆ ಆಯ್ಕೆ ಪ್ರಕ್ರಿಯೆಯ ಅಂತಿಮ ಫಲಿತಾಂಶ ಪ್ರಕಟಿಸಬಾರದು ಎಂಬ ಷರತ್ತು ವಿಧಿಸಿದೆ.

ಬೆಂಗಳೂರು : ಕಳೆದ 2024ನೇ ಸಾಲಿನ 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಅನುಮತಿಸಿರುವ ಹೈಕೋರ್ಟ್, ತನ್ನ ಪೂರ್ವಾನುಮತಿಯಿಲ್ಲದೆ ಆಯ್ಕೆ ಪ್ರಕ್ರಿಯೆಯ ಅಂತಿಮ ಫಲಿತಾಂಶ ಪ್ರಕಟಿಸಬಾರದು ಎಂಬ ಷರತ್ತು ವಿಧಿಸಿದೆ.

ಮೀಸಲು ಜಾರಿ ಸಂಬಂಧ ನಿಯಮ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇರ ನೇಮಕಾತಿಗೆ 2024ರ ಫೆ.26ರಂದು ಕೆಪಿಎಸ್‌ಸಿ ಹೊರಡಿಸಿದ ಅಧಿಸೂಚನೆ ರದ್ದುಪಡಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ (ಕೆಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಕರಾರು ಅರ್ಜಿ(ಮೇಲ್ಮನವಿ) ಸಲ್ಲಿಸಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ಮತ್ತು ನ್ಯಾಯಮೂರ್ತಿ ವೆಂಕಟೇಶ್‌ ಟಿ.ನಾಯಕ್‌ ಅವರಿದ್ದ ವಿಭಾಗೀಯ ಪೀಠ, ಆದೇಶ ಮಾಡಿ ವಿಚಾರಣೆ ಮುಂದೂಡಿದೆ.

ಅಲ್ಲದೆ, ಪ್ರಕರಣ ಸಂಬಂಧ ಮೂಲ ಅರ್ಜಿದಾರರಾದ ಬಿ.ಎನ್‌.ಮಧು (ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದವರು), ಕೆಪಿಎಸ್ಸಿಗೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ ಸರ್ಕಾರಕ್ಕೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿತು. ಕೆಪಿಎಸ್‌ಸಿ ಹಾಗೂ ಇತರೆ ಪ್ರತಿವಾದಿಗಳು ಸರ್ಕಾರದ ಅರ್ಜಿಗೆ ಮೂರು ವಾರದಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಅದಾದ ಎರಡು ವಾರಗಳಲ್ಲಿ ಪ್ರತಿವಾದಿಗಳ ಆಕ್ಷೇಪಣೆಗೆ ಸರ್ಕಾರ ಪ್ರತಿ ಆಕ್ಷೇಪಣೆಗಳಿದ್ದರೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ಐದು ವಾರಗಳ ನಂತರಕ್ಕೆ ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:

ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2022ರಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಸೀಟು ಹಂಚಿಕೆ ಮೀಸಲು ಮತ್ತು ರಾಜ್ಯ ಸೇವೆಯಲ್ಲಿ ನೇಮಕ ಹುದ್ದೆಗಳಿಗೆ ಮೀಸಲು) ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಅದರಲ್ಲಿ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಶೇ.18ರಿಂದ ಶೇ.24ಕ್ಕೆ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು. ಅದನ್ನು ಆಧರಿಸಿ ಕರ್ನಾಟಕ ಸರ್ಕಾರಿ ಸೇವೆಯಲ್ಲಿ ರೋಸ್ಟರ್‌ ಮೀಸಲು ನಿಗದಿಪಡಿಸಿತ್ತು. ನಂತರ ಇದನ್ನು ಆಧರಿಸಿ ಕೆಪಿಎಸ್‌ಸಿ 384 ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿ ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಿ.ಎನ್‌.ಮಧು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ಕೆಎಟಿ ವಿಭಾಗೀಯ ಪೀಠ, ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣ ಶೇ.50ರಿಂದ ಶೇ.56ಕ್ಕೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ಆದೇಶದ ಆಧಾರದ ಮೇಲೆ 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಮಕಾತಿಗೆ ಕೆಪಿಎಸ್‌ಸಿ ಹೊರಡಿಸಿದ್ದ ಅಧಿಸೂಚನೆಯನ್ನು ಮೇ 28ರಂದು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Read more Articles on