ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್‌ರಿಂದ ಪರೀಕ್ಷೆಗಿಂತ ಮುಂಚಿತವಾಗಿಯೇ 80 ಕೀ ಉತ್ತರ ಸಹಿತವಾದ ಪ್ರಶ್ನೆ ಪಡೆದುಕೊಂಡು ನೇರವಾಗಿ ಅಭ್ಯರ್ಥಿಗಳ ಜತೆ ಡೀಲ್​​ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

ಬೆಂಗಳೂರು : ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಬಿ.ವಿ. ಗೀತಾ ಮತ್ತು ಮಧ್ಯವರ್ತಿ ಬಸವರಾಜ್‌ ಕನ್ನಾಳೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್‌ರಿಂದ ಪರೀಕ್ಷೆಗಿಂತ ಮುಂಚಿತವಾಗಿಯೇ 80 ಕೀ ಉತ್ತರ ಸಹಿತವಾದ ಪ್ರಶ್ನೆ ಪಡೆದುಕೊಂಡು ನೇರವಾಗಿ ಅಭ್ಯರ್ಥಿಗಳ ಜತೆ ಡೀಲ್​​ ಮಾಡಿರುವುದು ಪಶುವೈದ್ಯಕೀಯ ನೇಮಕಾತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.)ದ ತನಿಖೆ ವೇಳೆ ಬಹಿರಂಗವಾಗಿದೆ.

ಈ ಕುರಿತು ಇ.ಡಿ. ಗುರುವಾರ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಆರೋಪಿಗಳು ಪ್ರಶ್ನೆಪತ್ರಿಕೆ,‌ ಕೀ ಉತ್ತರವನ್ನು ಸೋರಿಕೆ ಮಾಡಿ ಮತ್ತು 1:3 ಅನುಪಾತದ ಅರ್ಹತಾ ಪಟ್ಟಿಯನ್ನು ದುರ್ಬಳಕೆ ಮಾಡಿಕೊಂಡು ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆ. ಕೆಲವು ಅಭ್ಯರ್ಥಿಗಳಿಗೆ ಪರೀಕ್ಷೆಯ ಒಂದು ದಿನ ಮುಂಚಿತವಾಗಿ ಕೀ ಉತ್ತರ ನೀಡಲಾಗಿತ್ತು. ಇದಕ್ಕಾಗಿ ಪ್ರತಿ ಅಭ್ಯರ್ಥಿಯಿಂದ 20 ಲಕ್ಷದಿಂದ 40 ಲಕ್ಷ ರು.ಗಳವರೆಗೆ ಲಂಚ ಪಡೆಯಲಾಗಿದೆ ಎಂಬುದು ಇ.ಡಿ. ತನಿಖೆಯಿಂದ ಗೊತ್ತಾಗಿದೆ.

ಹಣಕ್ಕೆ ಕೈ ಚಾಚಿದ ಸಾಹುಕಾರ್:

ಜ್ಞಾನೇಂದ್ರ ಕುಮಾರ್ ಕಡೆಯಿಂದ ಗೀತಾ ಮೊದಲು 80 ಪ್ರಶ್ನೆಗಳ ಕೀ ಉತ್ತರಗಳನ್ನು ಪಡೆದುಕೊಂಡಿದ್ದರು. ಬಳಿಕ ಗೀತಾ ಒಬ್ಬ ಅಭ್ಯರ್ಥಿಯಿಂದ 40 ಲಕ್ಷ ರು.ಗಳಿಗೆ ಡೀಲ್ ಮಾಡಿಕೊಂಡು 20 ಲಕ್ಷ ರು. ಹಣವನ್ನು ಮುಂಗಡವಾಗಿ ನಗದು ರೂಪದಲ್ಲಿ ಪಡೆದುಕೊಂಡಿದ್ದರು. ಇನ್ನು ಶಿವಶಂಕರಪ್ಪ ಸಾಹುಕಾರ್ ಕೂಡ ಹಣಕ್ಕಾಗಿ ಕೈ ಚಾಚಿದ್ದು, ಒಬ್ಬ ಅಭ್ಯರ್ಥಿ ಜತೆ 20 ಲಕ್ಷ ರು.ಗಳಿಗೆ ಡೀಲ್ ಮಾಡಿಕೊಂಡು ಮುಂಗಡವಾಗಿ 10 ಲಕ್ಷ ರು. ನಗದು ರೂಪದಲ್ಲಿ ಪಡೆದಿದ್ದರು. ಹೀಗೆ ಒಟ್ಟು 6 ಅಭ್ಯರ್ಥಿಗಳ ಜತೆ ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾ ಡೀಲ್ ಮಾಡಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇನ್ನು ಡೀಲ್ ಆದ 6 ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಚ್ಚಿನ ಅಂಕ ಪಡೆದಿದ್ದಾರೆ. ಈ ಆಧಾರದಲ್ಲಿ ಸೆ.6 ರಂದು ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.

₹80 ಲಕ್ಷ ಮೊತ್ತದ ಖಾಲಿ ಚೆಕ್‌ ಜಪ್ತಿ:

ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ದಾಖಲೆಗಳು ಮತ್ತು ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅ.6 ರಂದು ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಯಿತು. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 14 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಳ್ಳಲಾಯಿತು. ಇದಕ್ಕೂ ಮೊದಲು, ಇ.ಡಿ. ಅಧಿಕಾರಿಗಳು ಕೆಲ ಅಭ್ಯರ್ಥಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾಗ, ಓರ್ವ ಅಭ್ಯರ್ಥಿಯಿಂದ ಸಹಿ ಮಾಡಲಾದ 80 ಲಕ್ಷ ರು. ಮೊತ್ತದ ಖಾಲಿ ಚೆಕ್‌ಗಳು ಹಾಗೂ ಸಹಿ ಮಾಡಲಾದ ಪ್ರಾಮಿಸರಿ ನೋಟ್‌ಗಳನ್ನು (ಒಪ್ಪಂದ ಪತ್ರ) ವಶಪಡಿಸಿಕೊಳ್ಳಲಾಗಿತ್ತು ಎಂದು ಇ.ಡಿ. ತಿಳಿಸಿದೆ.

ರೆಸಾರ್ಟ್‌ನಲ್ಲಿ ಕಂಠಪಾಠ ಮಾಡಿಸಿದ್ದರು:

10 ಅಭ್ಯರ್ಥಿಗಳನ್ನು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ಗೆ/ವಿಲ್ಲಾಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ 80 ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಹಿತ ಪ್ರಶ್ನೆಪತ್ರಿಕೆಯನ್ನು ನೀಡಲಾಗಿತ್ತು. ಅವುಗಳನ್ನು ಕಂಠಪಾಠ ಮಾಡುವಂತೆ ಅಭ್ಯರ್ಥಿಗಳಿಗೆ ಹೇಳಲಾಗಿತ್ತು. ಈ ಪ್ರಶ್ನೆಪತ್ರಿಕೆಯನ್ನು ಆಗಿನ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ತಮ್ಮ ಆಪ್ತನಾದ ಬಸವರಾಜ್ ಕನ್ನಾಳೆ ಅವರ ಮೂಲಕ ಸೋರಿಕೆ ಮಾಡಿದ್ದರು ಎಂದು ಹೇಳಿದೆ.

40 ರಿಂದ 50 ಲಕ್ಷಕ್ಕೆ ಡೀಲ್‌ ಮಾಡಿದ ಕನ್ನಾಳೆ:

ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವಂತೆ ಮಾಡಲಾಗುವುದು ಎಂದು ಹೇಳಿ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅಭ್ಯರ್ಥಿಗಳಿಂದ 40 ಲಕ್ಷದಿಂದ 50 ಲಕ್ಷ ರು.ಗಳವರೆಗೆ ಹಣ ಸಂಗ್ರಹಿಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಈ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಜ್ಞಾನೇಂದ್ರ ಕುಮಾರ್ ಮತ್ತು ಬಸವರಾಜ್ ಕನ್ನಾಳೆ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಇ.ಡಿ. ವಶದಲ್ಲಿದ್ದ ಸಂದರ್ಭದಲ್ಲಿ ಜ್ಞಾನೇಂದ್ರ ಕುಮಾರ್, ಕೆಪಿಎಸ್‌ಸಿಯ ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಡೆಸುವಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ಇ.ಡಿ. ವಿವರಿಸಿದೆ.

ಇದಲ್ಲದೆ, ಕೆಪಿಎಸ್‌ಸಿ ಅಧಿಕಾರಿಯೊಬ್ಬರಿಂದ ವಶಪಡಿಸಿಕೊಳ್ಳಲಾದ ಕೆಲ ದಾಖಲೆಗಳು ಹಾಗೂ ಜ್ಞಾನೇಂದ್ರ ಕುಮಾರ್ ವಿಚಾರಣೆಯಿಂದ ಕೆಲವು ಕೆಪಿಎಸ್‌ಸಿ ಸದಸ್ಯರು ಮತ್ತು ಅಧಿಕಾರಿಗಳು 1:3 ಮೆರಿಟ್ ಪಟ್ಟಿಯನ್ನು ದುರುಪಯೋಗಪಡಿಸಿಕೊಂಡು, ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಯ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವಂತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಅವರಿಂದ ಹಣ ಪಡೆದಿರುವುದು ಪತ್ತೆಯಾಗಿದೆ.

ಸಾಮಾನ್ಯವಾಗಿ 1:3 ಅನುಪಾತದ ಪಟ್ಟಿಯನ್ನು ಪ್ರಕಟಿಸುವ ಸಂದರ್ಭದಲ್ಲಿ ಕೆಪಿಎಸ್‌ಸಿಯು ಅಭ್ಯರ್ಥಿಗಳ ವೈಯಕ್ತಿಕ ಅಂಕಗಳನ್ನು ಬಹಿರಂಗಪಡಿಸುವುದಿಲ್ಲ. ಆದರೆ ಕೆಲ ಕೆಪಿಎಸ್‌ಸಿ ಸದಸ್ಯರು ಮತ್ತು ಅಧಿಕಾರಿಗಳು 1:3 ಅನುಪಾತದಲ್ಲಿರುವ ಅಭ್ಯರ್ಥಿಗಳ ಮಾಹಿತಿಯನ್ನು ಕಲೆ ಹಾಕಿ ಅವರನ್ನು ಸಂಪರ್ಕಿಸಿ 10 ರಿಂದ 50 ಲಕ್ಷದವರೆಗೂ ಹಣ ಪಡೆದಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.