ನಗರದ ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ಜಮೀನು ವಶಕ್ಕೆ ತೆಗೆದುಕೊಂಡಿರುವ ರಾಜ್ಯ ಸರ್ಕಾರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು : ನಗರದ ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ಜಮೀನು ವಶಕ್ಕೆ ತೆಗೆದುಕೊಂಡಿರುವ ರಾಜ್ಯ ಸರ್ಕಾರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರದ ನಡೆಗೆ ಕಿಡಿಕಾರಿದರು. ಸರ್ಕಾರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಇದರಲ್ಲಿ ಸರ್ಕಾರಕ್ಕೆ ಹಿನ್ನೆಡೆಯಾಗುವುದು ಖಚಿತ ಎಂದು ಹೇಳಿದರು.

ಶ್ರೀನಿವಾಸಪುರದಲ್ಲಿ ಮಾಜಿ ಸಭಾಧ್ಯಕ್ಷರೊಬ್ಬರು ನೂರಾರು ಎಕರೆ ಅರಣ್ಯ ಭೂಮಿ ಲೂಟಿ ಹೊಡೆದಿದ್ದಾರಲ್ಲ, ಮೊದಲು ಅದರ ಬಗ್ಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಗಮನಹರಿಸಬೇಕು. ಇದರ ಬಗ್ಗೆ ನ್ಯಾಯಾಲಯ ಕೊಟ್ಟಿರುವ ತೀರ್ಪನ್ನೇ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ. ಮೊದಲು ಅದನ್ನು ನೋಡಲಿ, ಎಷ್ಟು ಎಕರೆ ಲೂಟಿಯಾಗಿದೆ ಎಂಬುದು ಗಮನಿಸಲಿ ಎಂದು ಕಿಡಿಕಾರಿದರು.

ಸರ್ಕಾರವು ಐದು ಎಕರೆಗೆ ಬಲವಂತವಾಗಿ ಹೋಗಿ ಫೆನ್ಸಿಂಗ್ ಹಾಕಿದೆ. ನ್ಯಾಯಾಲಯದ ಆದೇಶಗಳಿಗೆ ಯಾರೇ ಆಗಲಿ ತಲೆ ಬಾಗಬೇಕಾಗುತ್ತದೆ ಎಂದರು.

ಎಚ್‌ಎಂಟಿಗೆ ನೀಡಿದ್ದ ಅರಣ್ಯ ಜಾಗ ಮಾತ್ರ ವಶಕ್ಕೆ: ಖಂಡ್ರೆ

ಬೀದರ್‌ : ಎಚ್ಎಂಟಿ ಕಂಪನಿಗೆ ನೀಡಿದ್ದ ಅರಣ್ಯ ಭೂಮಿ ವಾಪಸ್ ಪಡೆದಿರುವ ವಿಚಾರವಾಗಿ ಕಾಂಗ್ರೆಸ್‌ ಹೈಜಾಕ್‌ ರಾಜಕೀಯ ಮಾಡುತ್ತಿದೆ ಎಂಬ ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ತೀವ್ರ ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಹೇಳಿಕೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರು ಕೇವಲ ಹಿಟ್‌ ಆ್ಯಂಡ್ ರನ್ ಮಾಡುತ್ತಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರ ಹಿಂಪಡೆದದ್ದು ಎಚ್ಎಂಟಿ ಭೂಮಿ ಅಲ್ಲ, ಕಂಪನಿಯ ಭೂಮಿ ಎಂಬುದಕ್ಕೆ ಅವರ ಬಳಿ ಏನಾದರೂ ದಾಖಲೆ ಇದೆಯಾ? ಎಚ್ಎಂಟಿ ಅವರಿಗೆ ರಿಯಲ್ ಎಸ್ಟೇಟ್‌, ಭೂಮಿ ವ್ಯಾಪಾರ ಮಾಡಲು ನಮ್ಮ ಭೂಮಿ ಕೊಡಬೇಕಾ? ಎಚ್ಎಂಟಿಗೆ ನೀಡಿದ್ದ ಅರಣ್ಯ ಭೂಮಿ ವಾಪಸ್ ಪಡೆದಿದ್ದೇವೆ ಅಷ್ಟೆ ಎಂದರು.

ಅರಣ್ಯ ಭೂಮಿ ಪರಭಾರೆ‌‌ ಮಾಡಲು ಆಗಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಕಾಯ್ದೆ ಪ್ರಕಾರ‌ ನಮ್ಮ ಇಲಾಖೆಯವರು ಕ್ರಮ‌ ತೆಗೆದುಕೊಳ್ಳುತ್ತಿದ್ದಾರೆ. ಬೆಂಗಳೂರಲ್ಲಿ‌ ಒಂದು‌ ಕೋಟಿಗೂ ಅಧಿಕ ಜನರಿದ್ದಾರೆ, ಮೂಲ ಸೌಕರ್ಯ ಹಾಳಾಗಿ ಹೋಗಿದೆ. ಲಂಗ್ ಸ್ಪೇಸ್‌ ಮಾಡುವ ಅವಶ್ಯಕತೆ ಇದ್ದು, ಅದನ್ನು ಮಾಡೇ ಮಾಡುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.