ಸಾರಾಂಶ
ಜಿಬಿಎ ಅಡಿಯಲ್ಲಿ ಬರುವ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಮುಗಿಯುವವರೆಗೂ ನಗರದಲ್ಲಿ ಪ್ರಸ್ತಾವಿತ ಮತದಾರರ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಅಡಿಯಲ್ಲಿ ಬರುವ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಮುಗಿಯುವವರೆಗೂ ನಗರದಲ್ಲಿ ಪ್ರಸ್ತಾವಿತ ಮತದಾರರ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಅಡಿಯಲ್ಲಿ ಹೊಸದಾಗಿ ರಚಿಸಲಾದ ಐದು ಮಹಾನಗರ ಪಾಲಿಕೆಗಳ ಡಿಲಿಮಿಟೇಶನ್ ಪ್ರಕ್ರಿಯೆಯನ್ನು 2025ರ ನ.1ರೊಳಗೆ ಪೂರ್ಣಗೊಳಿಸಲು ಮತ್ತು ನ.30ರೊಳಗೆ ಮೀಸಲಾತಿ ಪಟ್ಟಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಂತೆಯೇ ನ.1ರೊಳಗೆ ಮತದಾರರ ಪಟ್ಟಿ ತಯಾರಿಕೆಯ ಕೆಲಸ ಪುನಾರಂಭಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೂ ನಿರ್ದೇಶಿಸಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಪತ್ರದಲ್ಲಿ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ಮತ್ತು ಗ್ರೇಟರ್ ಬೆಂಗಳೂರು ಆಡಳಿತ(ಮತದಾರರ ನೋಂದಣಿ) ನಿಯಮಗಳು 2025ರ ಅಡಿಯಲ್ಲಿ ರಾಜ್ಯ ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿ ಅಳವಡಿಸಿಕೊಳ್ಳುವ ಮುಖಾಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಬರುವ ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ತಯಾರಿಸುವ ಮತ್ತು ಅಂತಿಮಗೊಳಿಸುವ ಅಧಿಕಾರ ಹೊಂದಿದೆ. ಈ ನಿಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ, ಮಾರ್ಪಾಡು, ರದ್ದು ಹಾಗೂ ಸೇರ್ಪಡೆ ಕಾರ್ಯಕ್ಕೆ ರಾಜ್ಯ ಸರ್ಕಾರವು ಮಾನವಶಕ್ತಿ ಒದಗಿಸಲಿದೆ.
ಈ ನಡುವೆ ಕೇಂದ್ರ ಚುನಾವಣಾ ಆಯೋಗವು ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬೆಂಗಳೂರು ನಗರದಲ್ಲಿ ಪ್ರಸ್ತಾವಿತ ಮತದಾರರ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ನಡೆಸಿದರೆ, ಮಾನವಶಕ್ತಿ ಬಳಕೆಯಲ್ಲಿ ಸಮಸ್ಯೆಯಾಗಲಿದೆ. ರಾಜ್ಯ ಚುನಾವಣಾ ಆಯೋಗವು ವಾರ್ಡ್‌ವಾರು ಮತ್ತು ಮನೆ-ಮನೆ ಪರಿಶೀಲನೆ ಮೂಲಕ ಮತದಾರರ ಪಟ್ಟಿಯಲ್ಲಿ ಮತದಾರರ ಪರಿಷ್ಕರಣೆ, ಮಾರ್ಪಾಡು, ರದ್ದು ಹಾಗೂ ಸೇರ್ಪಡೆ ಮುಖಾಂತರ ಮತದಾರರ ಪಟ್ಟಿ ಸಿದ್ಧಪಡಿಸಲು ಮತ್ತು ಅಂತಿಮಗೊಳಿಸಲು ಮತ್ತೆ ಅದೇ ಮಾನವಶಕ್ತಿಯನ್ನು ನಿಯೋಜಿಸುವುದು ಕಷ್ಟವಾಗುತ್ತದೆ. ಈ ಐದು ಮಹಾನಗರ ಪಾಲಿಕೆಗಳ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲಿಸುವುದು ರಾಜ್ಯ ಚುನಾವಣಾ ಆಯೋಗಕ್ಕೆ ಕಷ್ಟವಾಗಲಿದೆ.
ಹಾಗಾಗಿ ಈ ಎಲ್ಲಾ ಕಾರಣಗಳು ಹಾಗೂ ವಾಸ್ತವಾಂಶಗಳನ್ನು ಗಮನದಲ್ಲಿಟ್ಟಿಕೊಂಡು ಜಿಬಿಎ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆಗಳು ಮುಗಿವವರೆಗೂ ನಗರದಲ್ಲಿ ಪ್ರಸ್ತಾವಿತ ಎಸ್‌ಐಆರ್ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಮನವಿ ಮಾಡಿದ್ದಾರೆ.
ಜಿಬಿಎ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಮಾಡಬೇಕು. ಈ ಸಂಬಂಧ ನ.1ರಿಂದ ಕೆಲಸ ಶುರು ಮಾಡಬೇಕು. ಈ ಸಮಯದಲ್ಲಿ ನೀವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ಸರಿಯಲ್ಲ. ನಾವು ಮತದಾರರ ಪಟ್ಟಿ ಸಿದ್ಧಪಡಿಸುತ್ತೇವೆ. ಈ ಸಂಬಂಧ ನ.3ರಂದು ಸುಪ್ರೀಂ ಕೋರ್ಟ್‌ಗೆ ಸಮಗ್ರ ಅಫಿಡವಿಟ್ ಸಲ್ಲಿಸಲಿದ್ದೇವೆ
-ಜಿ.ಎಸ್.ಸಂಗ್ರೇಶಿ, ಆಯುಕ್ತರು, ರಾಜ್ಯ ಚುನಾವಣಾ ಆಯೋಗ