ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ

| N/A | Published : Aug 05 2025, 10:07 AM IST

Dinesh Gundurao
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ
Share this Article
  • FB
  • TW
  • Linkdin
  • Email

ಸಾರಾಂಶ

ಕಡಿಮೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಕೇವಲ ಎರಡು ದಿನಗಳಲ್ಲಿ ಹಿಂಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

  ಬೆಂಗಳೂರು :  ಕಡಿಮೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಕೇವಲ ಎರಡು ದಿನಗಳಲ್ಲಿ ಹಿಂಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಕಡಿಮೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಕನಿಷ್ಠ 30 ದಿನ ಆಗುತ್ತಿತ್ತು. ಈಗ ಆ ವ್ಯವಸ್ಥೆ ಬದಲಾಗಿದೆ ಎಂದರು.

ಪ್ರಯೋಗಾಲಯದಲ್ಲಿ ಕಡಿಮೆ ಗುಣಮಟ್ಟದ ಔಷಧಿಗಳ ಬಗ್ಗೆ ವರದಿ ಬಂದ ತಕ್ಷಣ ಇ-ಸಹಿ ಮಾಡಿ ಆ್ಯಪ್‌ನಲ್ಲಿ ವರದಿ ಹಾಕಲಾಗುತ್ತದೆ. ಬಳಿಕ ಜಿಲ್ಲಾ ಸಹಾಯಕ ಔಷಧ ನಿಯಂತ್ರಕ(ಎಡಿಸಿ) ಆ ವರದಿಯನ್ನು ಔಷಧ ವಿತರಕರಿಗೆ ರವಾನಿಸುತ್ತಾರೆ. ಇದರಿಂದ ಕಡಿಮೆ ಗುಣಮಟ್ಟದ ಔಷಧಿಗಳನ್ನು ಕೇವಲ ಎರಡು ದಿನಗಳಲ್ಲಿ ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

59 ಔಷಧಿ ಕಡಿಮೆ ಗುಣಮಟ್ಟ:

ಕಳೆದ ಜುಲೈ ತಿಂಗಳಲ್ಲಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಬಳ್ಳಾರಿ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಒಟ್ಟು 1,433 ಔಷಧಿ ಮಾದರಿಗಳನ್ನು ವಿಶ್ಲೇಷಿಸಲಾಗಿದೆ. ಈ ಪೈಕಿ 59 ಔಷಧಿಗಳಲ್ಲಿ ಕಡಿಮೆ ಗುಣಮಟ್ಟ ಕಂಡು ಬಂದಿದೆ. ಹೀಗಾಗಿ ಈ ನೂತನ ವ್ಯವಸ್ಥೆ ಮುಖಾಂತರ 40.48 ಲಕ್ಷ ರು. ಮೌಲ್ಯದ ನಿರ್ದಿಷ್ಟ ಬ್ಯಾಚ್‌ನ ಕಡಿಮೆ ಗುಣಮಟ್ಟದ ಔಷಧಿಗಳನ್ನು ಕೇವಲ ಎರಡು ದಿನಗಳಲ್ಲಿ ಮಾರುಕಟ್ಟೆಯಿಂದ ಹಿಂಪಡೆದು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

231 ಔಷಧಿ ಮಳಿಗೆಗಳಿಗೆ ನೋಟಿಸ್‌:

ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಕಳೆದ ಜೂ.24, 25ರಂದು ಮಾದಕವಸ್ತುಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ 279 ಔಷಧಿ ಮಳಿಗೆಗಳನ್ನು ತಪಾಸಣೆ ನಡೆಸಿದ್ದಾರೆ. ಈ ಪೈಕಿ ನಿಯಮ ಉಲ್ಲಂಘಿಸಿದ 231 ಔಷಧಿ ಮಳಿಗೆಗಳಿಗೆ ಶೋಕಾಸ್‌ ನೋಟಿಸ್ ಜಾರಿಗೊಳಿಸಿದ್ದಾರೆ. ಅಂತೆಯೇ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ ಉಲ್ಲಂಘಿಸಿದ ಔಷಧಿ ಅಂಗಡಿಗಳ ವಿರುದ್ಧ 29 ಪ್ರಕರಣ ದಾಖಲಿಸಿದ್ದಾರೆ ಎಂದು ಸಚಿವರು ವಿವರಿಸಿದರು.

ರಕ್ತನಿಧಿ ಕೇಂದ್ರಗಳಿಗೆ ಆನ್‌ಲೈನ್‌ ಪರವಾನಗಿ:

ಇಲಾಖೆಯಿಂದ ನೀಡಲಾಗುತ್ತಿದ್ದ ಆನ್‌ಲೈನ್‌ ಸೇವೆಯನ್ನು ಕಳೆದ ಜುಲೈ ತಿಂಗಳಿಂದ ಕೇಂದ್ರ ಸರ್ಕಾರದ ಒಎನ್‌ಡಿಎಲ್‌ಎಸ್‌ (ಆನ್‌ಲೈನ್‌ ನ್ಯಾಶಿನಲ್‌ ಡ್ರಗ್ಸ್‌ ಲೈಸೆನ್ಸಿಂಗ್‌ ಸಿಸ್ಟಂ) ಪೋರ್ಟಲ್‌ಗೆ ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ರಕ್ತನಿಧಿ ಕೇಂದ್ರಗಳಿಗೆ ಆನ್‌ಲೈನ್‌ ಮುಖಾಂತರ ಪರವಾನಿ ನೀಡಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.

ಅಂತೆಯೇ ರೆಕಗ್ನೈಸ್ಡ್‌ ಮೆಡಿಕಲ್‌ ಇನ್‌ಸ್ಟಿಟ್ಯೂಷನ್ಸ್‌ಗಳಲ್ಲಿ ಅಗತ್ಯ ಮಾದಕ ಔಷಧಿ ಬಳಸಲು ಇಲಾಖೆಯಿಂದ ನೀಡಲಾಗುವ ಆರ್‌ಎಂಐ ಸರ್ಟಿಫಿಕೆಟ್‌ಗಳನ್ನು ಆನ್‌ಲೈನ್‌ ಮೂಲಕವೇ ಒದಗಿಸಲು ಆನ್‌ಲೈನ್‌ ಸೆಲ್‌ ವೆಬ್‌ಸೈಟ್‌ ಅಭಿವೃದ್ಧಿಪಡಿಸಲಾಗಿದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

Read more Articles on