ಸಾರಾಂಶ
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿ ಮುಕ್ತಾಯಕ್ಕೆ ಐದು ದಿನಗಳಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾಗಲಿರುವ ಹುದ್ದೆಗೆ ಸಿಐಡಿ ಡಿಜಿಪಿ ಡಾ.ಎಂ.ಸಲೀಂ ಅವರು ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಬೆಂಗಳೂರು : ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿ ಮುಕ್ತಾಯಕ್ಕೆ ಐದು ದಿನಗಳಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾಗಲಿರುವ ಹುದ್ದೆಗೆ ಸಿಐಡಿ ಡಿಜಿಪಿ ಡಾ.ಎಂ.ಸಲೀಂ ಅವರು ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಸೇವಾ ಹಿರಿತನ ಆಧಾರದ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಸಿಐಡಿ ಡಿಜಿಪಿ ಸಲೀಂ, ಸೈಬರ್ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಸೇರಿ ಎಂಟು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿದ್ದಾರೆ. ಆದರೆ ಹಿರಿತನದ ಮಾನದಂಡದಲ್ಲಿ ಡಿಜಿಪಿ ಹುದ್ದೆಗೆ ಸಲೀಂ ಹಾಗೂ ಪ್ರಶಾಂತ್ ಹೆಸರು ಮುಂಚೂಣಿಯಲ್ಲಿದೆ.
ಈಗಾಗಲೇ ನೂತನ ಡಿಜಿ-ಐಜಿಪಿ ಆಯ್ಕೆ ಸಂಬಂಧ ಎಂಟು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಸರ್ಕಾರ ಶಿಫಾರಸು ಮಾಡಿದೆ. ಆದರೆ ಯುಪಿಎಸ್‌ಸಿಯಿಂದ ಒಪ್ಪಿಗೆ ಸಿಗದ ಕಾರಣಕ್ಕೆ ಮೊದಲ ಮೂರು ತಿಂಗಳು ಪ್ರಭಾರ ಡಿಜಿಪಿ ನೇಮಕವಾಗಲಿದೆ. ಯುಪಿಎಸ್‌ಸಿಯಿಂದ ಸಮ್ಮತಿ ಸಿಕ್ಕ ಬಳಿಕ ಅಧಿಕೃತವಾಗಿ ಡಿಜಿಪಿ ನೇಮಕ ಆಗಲಿದೆ ಎಂದು ಮೂಲಗಳು ಹೇಳಿವೆ.
ಏ.30 ರಂದು ಅಲೋಕ್ ಮೋಹನ್ ಅವರು ನಿವೃತ್ತಿಯಾಗಬೇಕಿತ್ತು. ಆದರೆ ಮೇ 21 ವರೆಗೆ ಡಿಜಿಪಿ ಅವರ ಸೇವಾವಧಿ ವಿಸ್ತರಿಸಿದ್ದ ಸರ್ಕಾರ, ಮುಂದಿನ ಡಿಜಿಪಿ ಹುದ್ದೆಗೆ ಸಂಭವನೀಯ ಅಧಿಕಾರಿಗಳ ಹೆಸರಿನ ಪಟ್ಟಿಯನ್ನು ಯುಪಿಎಸ್‌ಸಿಗೆ ಕಳುಹಿಸಿತ್ತು. ಹೀಗಾಗಿ ಎರಡು ವರ್ಷಗಳ ಆಡಳಿತ ನಡೆಸಿದ ಹಾಲಿ ಡಿಜಿಪಿ ಅಲೋಕ್ ಮೋಹನ್ ಅವರ ಸೇವಾವಧಿ ಪೂರ್ವ ನಿಗದಿಯಂತೆ ಮೇ.21 ರಂದು ಮುಕ್ತಾಯವಾಗಲಿದ್ದು, ಅಂದು ಸಂಜೆ ಅರಕ್ಷಕ ಪಡೆಯ ಹೊಸ ದಂಡನಾಯಕ ಆಯ್ಕೆ ನಡೆಯಬೇಕಿದೆ.