ಸಂಚಾರ ದಟ್ಟಣೆಗೆ ನಿವಾರಿಸಲು ಹಲವು ಯೋಜನೆ ಜಾರಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

| N/A | Published : Mar 14 2025, 10:30 AM IST

Dk Shivakumar

ಸಾರಾಂಶ

 ಸಂಚಾರ ದಟ್ಟಣೆ   ನಿವಾರಿಸಲು ರಾಜ್ಯ ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಬಫರ್ ರೋಡ್, ಎಲಿವೇಟೆಡ್ ಕಾರಿಡಾರ್, ಬೆಂಗಳೂರು ಬಿಸಿನೆಸ್ ಕಾರಿಡಾರ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿ ತರಲಾಗುವುದು ಎಂದು   ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನ ಪರಿಷತ್‌ : ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ರಾಜ್ಯ ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಬಫರ್ ರೋಡ್, ಎಲಿವೇಟೆಡ್ ಕಾರಿಡಾರ್, ಬೆಂಗಳೂರು ಬಿಸಿನೆಸ್ ಕಾರಿಡಾರ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿ ತರಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕಾಂಗ್ರೆಸ್‌ ಸದಸ್ಯ ಸುಧಾಮದಾಸ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪಿಆರ್‌ಆರ್ ಯೋಜನೆ ಮಾಡಲು 2006ರಲ್ಲಿ ಅಧಿಸೂಚನೆ ಹೊರಡಿಸಿದ್ದರೂ ನಂತರ ಅದು ಮುಂದಕ್ಕೆ ಸಾಗಲಿಲ್ಲ. ಆಗಲೇ ಮಾಡಿದ್ದರೆ ₹2-3 ಸಾವಿರ ಕೋಟಿಯಲ್ಲಿ ಯೋಜನೆ ಪೂರ್ಣಗೊಳ್ಳುತ್ತಿತ್ತು. ಈಗ ಪಿಆರ್‌ಆರ್ ಯೋಜನೆಗೆ ಹುಡ್ಕೋ ಮೂಲಕ ₹26 ಸಾವಿರ ಕೋಟಿ ಸಾಲ ಪಡೆದು ಬೆಂಗಳೂರು ಬಿಸಿನೆಸ್ ಕಾರಿಡಾರ್ ಮಾಡಲು ನಿರ್ಧರಿಸಲಾಗಿದೆ ಎಂದರು.

ಪ್ರಸ್ತುತ ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ದಾಟಿದೆ. ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ರಸ್ತೆ ಅಗಲೀಕರಣ ಮಾಡಬಹುದೆ ಅಥವಾ ಬೇರೆ ಅವಕಾಶಗಳಿವೆಯೇ ಎಂದು ಆಲೋಚನೆ ಮಾಡಿದ್ದೇವೆ. ಹಿಂದೆ ಕೆ.ಜೆ. ಜಾರ್ಜ್ ಅವರು ಸಚಿವರಾಗಿದ್ದಾಗ ಸ್ಟೀಲ್ ಬ್ರಿಡ್ಜ್ ಮಾಡಲು ಹೋದಾಗ ಗಲಾಟೆ ಮಾಡಿ ಅದನ್ನು ನಿಲ್ಲಿಸಿದರು. ಈಗ ಅದರ ತೊಂದರೆ ಅನುಭವಿಸುತ್ತಿದ್ದೇವೆ. ಈಗ ಈ ಸಮಸ್ಯೆಗೆ ಪರಿಹರಿಸಲು ಬೆಂಗಳೂರು ನಗರದ ಪೂರ್ವದಿಂದ ಪಶ್ಚಿಮಕ್ಕೆ (17 ಕಿ.ಮೀ), ದಕ್ಷಿಣದಿಂದ ಉತ್ತರಕ್ಕೆ (23 ಕಿ.ಮೀ) 40 ಕಿ.ಮೀ ಉದ್ದದ ಸುರಂಗ ರಸ್ತೆ ಮಾಡಲು ಹೊರಟಿದ್ದೇವೆ. ಮೊದಲ ಹಂತದ ಯೋಜನೆಗೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತಿದೆ. ಅತಿಲೋಕ್ ಇಂಜಿನಿಯರಿಂಗ್ ಸಂಸ್ಥೆ ಸಿದ್ಧಪಡಿಸಿರುವ ಡಿಪಿಆರ್‌ಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಐಟಿಪಿಎಲ್, ಥಣಿಸಂಧ್ರ, ಆರ್ ಆರ್ ನಗರ ಸೇರಿದಂತೆ ಇತರೆ ಭಾಗಗಳಲ್ಲಿ ಟಿಡಿಆರ್ ನೀಡಿ ರಸ್ತೆ ನಿರ್ಮಾಣ ಮಾಡಲಾಗುವುದು. ಹೆಬ್ಬಾಳದಿಂದ ಹೆಣ್ಣೂರು ಮಾರ್ಗದಲ್ಲಿ 7.8 ಕಿ.ಮೀ ರಸ್ತೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಆ ಮೂಲಕ ಬೆಂಗಳೂರಿನಲ್ಲಿ 320 ಕಿ.ಮೀ ಹೊಸ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

44.3 ಕಿ.ಮೀ ಉದ್ಧದ ಡಬಲ್ ಡೆಕ್ಕರ್ ಪ್ಲಾನ್‌

44.3 ಕಿ.ಮೀ ಉದ್ಧದ ಡಬಲ್ ಡೆಕ್ಕರ್ ಯೋಜನೆ ಮೂಲಕ ಮೇಲ್ಸೆತುವೆ ಹಾಗೂ ಮೆಟ್ರೋ ಮಾರ್ಗ ಮಾಡಲಾಗುತ್ತಿದೆ. ಈ ಯೋಜನೆಗೆ ಪಾಲಿಕೆ ಹಾಗೂ ಬಿಎಂಆರ್ ಸಿಎಲ್ 50:50 ಅನುಪಾತದಲ್ಲಿ ವೆಚ್ಚ ಭರಿಸಲಿವೆ. ಪ್ರತಿ ಕಿ.ಮೀಗೆ ₹120 ಕೋಟಿ ವೆಚ್ಚವಾಗಲಿದ್ದು, ಈ ಯೋಜನೆಗೆ ಒಟ್ಟು ₹9 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಸಿಗ್ನಲ್ ಮುಕ್ತ ಎಲಿವೇಟೆಡ್ ಕಾರಿಡಾರ್ ಮೂಲಕ ವಾಹನ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ಗಾಳಿ ಆಂಜನೇಯಸ್ವಾಮಿ ದೇವಾಲಯದ ಬಳಿ ರಾಜಕಾಲುವೆ ಮೇಲೆ ರಸ್ತೆ ಮಾಡಿರುವ ರೀತಿ ರಸ್ತೆ ಮಾಡಲು ಎನ್ ಜಿಟಿಯಿಂದ ಅನುಮತಿ ಸಿಗುತ್ತಿಲ್ಲ. ಹೀಗಾಗಿ ರಾಜಕಾಲುವೆ ಅಕ್ಕಪಕ್ಕದ ಬಫರ್ ಪ್ರದೇಶದಲ್ಲಿ 50 ಅಡಿಯ 300 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದಕ್ಕಾಗಿ ₹3 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.

ವೈಟ್ ಟಾಪಿಂಗ್‌ಗೆ ₹9000 ಕೋಟಿ

1682 ಕಿ.ಮೀ ಉದ್ದದಷ್ಟು ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲಾಗುತ್ತಿದ್ದು, ಈ ಯೋಜನೆಗಳಿಗೆ ₹9 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಇನ್ನು 850 ಕಿ.ಮೀ ಉದ್ದದ ಮಳೆನೀರುಗಾಲುವೆಗಾಗಿ ವಿಶ್ವಬ್ಯಾಂಕ್ ನಿಂದ ₹2 ಸಾವಿರ ಕೋಟಿ ಹಣ ಪಡೆಯಲಾಗಿದೆ. ಈ ಪೈಕಿ 480 ಕಿ.ಮೀ ಪೂರ್ಣಗೊಂಡಿದ್ದು, 175 ಕಿ.ಮೀ ಉದ್ದದ ಕಾಮಗಾರಿ ನಡೆಯುತ್ತಿದೆ. ಉಳಿದ 173 ಕಿ.ಮೀ ಉದ್ದದ ಕಾಮಗಾರಿ ಮುಂದೆ ಕೈಗೆತ್ತಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.