ಸಾರಾಂಶ
ರಾಜಧಾನಿ ಬೆಂಗಳೂರಿನ ರಸ್ತೆ, ಪಾದಚಾರಿ ಮಾರ್ಗಗಳ ಕುರಿತು ಉದ್ಯಮಿ ಮೋಹನದಾಸ್ ಪೈ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವೆ ತೀವ್ರ ಮಾತಿನ ಜಟಾಪಟಿ ಶುರುವಾಗಿದೆ.
ಬೆಂಗಳೂರು : ರಾಜಧಾನಿ ಬೆಂಗಳೂರಿನ ರಸ್ತೆ, ಪಾದಚಾರಿ ಮಾರ್ಗಗಳ ಕುರಿತು ಉದ್ಯಮಿ ಮೋಹನದಾಸ್ ಪೈ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವೆ ತೀವ್ರ ಮಾತಿನ ಜಟಾಪಟಿ ಶುರುವಾಗಿದೆ.
‘ದಯವಿಟ್ಟು ನಮಗೆ ಬೆಂಗಳೂರನ್ನು ಕನಿಷ್ಠ ಸ್ವಚ್ಛ, ನಡೆದಾಡಬಹುದಾದ ನಗರವನ್ನಾಗಿ ಮಾಡುವಂತೆ ಡಿ.ಕೆ.ಶಿವಕುಮಾರ್ ಜತೆ ಮಾತನಾಡಿ. ಕಳೆದ ಎರಡು ವರ್ಷಗಳಲ್ಲಿ ನಮ್ಮ ಜೀವನ ಶೋಚನೀಯವಾಗಿದೆ.’ ಎಂಬ ಮೋಹನ್‌ದಾಸ್ ಪೈ ಅವರ ಟೀಕೆಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ‘ನಾವು 135 ಸ್ಥಾನ ಪಡೆದ ನಂತರ ನಿಮಗೆ ಸಂಕಟ, ನೋವು ಶುರುವಾಗಿದೆ. ನಿಮ್ಮ ವಿಶ್ವಗುರು ನರೇಂದ್ರ ಮೋದಿ ಕರ್ನಾಟಕವನ್ನು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿರುವಾಗ ಏಕೆ ಸುಮ್ಮನಿದ್ದೀರಿ?’ ಎಂದು ತಿರುಗೇಟು ನೀಡಿದ್ದಾರೆ.
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬೆಂಗಳೂರು ಭಾರತದ ಅತಿ ಹೆಚ್ಚು ಫಾರ್ಚೂನ್ ಕಂಪೆನಿಗಳನ್ನು ಹೊಂದಿದೆ. ಅತಿ ಹೆಚ್ಚು ಜಿಸಿಸಿ, ಯೂನಿಕಾರ್ನ್ ಸ್ಟಾರ್ಟ್‌ಅಪ್, ದೇಶದ ಐಟಿ ರಫ್ತಿಗೆ ಅತಿ ಹೆಚ್ಚು (ಶೇ.42) ಕೊಡುಗೆ ನೀಡುತ್ತಿದೆ. ಈ ಸಾಧನೆ ಮುಂದುವರೆಯಲಿದೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಪೋಸ್ಟ್ ಮಾಡಿದ್ದ ಮೋಹನ್‌ದಾಸ್ ಪೈ, ನಮ್ಮ ಜೀವನ ಸುಧಾರಿಸಲು ನೀವು ನಮ್ಮ ಮಂತ್ರಿಯಾಗಿ ಏನು ಮಾಡಿದ್ದೀರಿ ಹೇಳಿ? ಯಾವುದೇ ರಸ್ತೆ ಗುಂಡಿಗಳಿಲ್ಲದ ಉತ್ತಮ ನಗರ ಮಾಡುವ ಬಗ್ಗೆ ಗ್ಯಾರಂಟಿ ಇದೆಯೇ? ಉತ್ತಮ ಪಾದಚಾರಿ ಮಾರ್ಗದ ಜತೆಗೆ ಬೆಂಗಳೂರು ಕ್ಲೀನ್ ಸಿಟಿಯಾಗಿ ಮಾಡಬಲ್ಲಿರೇ? ಇದು ರಾಕೆಟ್ ಸೈನ್ಸ್ ಅಲ್ಲ, ನಿರಂತರ ನಿರ್ವಹಣೆ ಕೆಲಸ. ದಯವಿಟ್ಟು ನಮಗೆ ಕನಿಷ್ಠ ಸ್ವಚ್ಛವಾದ, ನಡೆದಾಡಬಹುದಾದ ನಗರ ಮಾಡುವಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆ ಮಾತನಾಡಿ ಎಂದು ಟೀಕಿಸಿದ್ದರು.
ಖರ್ಗೆ ತಿರುಗೇಟು: ಇದಕ್ಕೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ‘ಮೋಹನ್‌ದಾಸ್ ಪೈ ಅವರೇ, ಇದು ರಾಕೆಟ್ ವಿಜ್ಞಾನವಲ್ಲದಿದ್ದರೆ ನಿಮ್ಮ ಹಿಂದಿನ ಸರ್ಕಾರಕ್ಕೆ ಏಕೆ ನೀವು ಜ್ಞಾನೋದಯ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಬೆಂಗಳೂರು ದೇಶದ ಮಹಾನಗರಗಳಲ್ಲಿ ಅತ್ಯಂತ ವೇಗವಾಗಿ ಬೆಳೆದಿದೆ ಎಂದು ನಿಮಗೆ ತಿಳಿದಿದೆ. ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ನಿಮ್ಮ ನಿರಂತರ ನಕಾರಾತ್ಮಕತೆಯನ್ನು ನಿಮ್ಮ ನಾಯಕರು ಮೆಚ್ಚಬಹುದು. ಆದರೆ ಇವು ನಿಮಗೆ ದೆಹಲಿಯಲ್ಲಿ ಅವಕಾಶ ದೊರಕಿಸುವುದಿಲ್ಲ. ನಿಮ್ಮ ನಿರಂತರ ಟೀಕೆಗಳಿಂದ ರಾಜ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದೀರಾ? ಎಂದು ಟೀಕಿಸಿದ್ದಾರೆ.
ಕೀಬೋರ್ಡ್ ವಾರಿಯರ್:
ಸುದ್ದಿಗೋಷ್ಠಿಯಲ್ಲಿ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಅವರು ಕೀಬೋರ್ಡ್ ವಾರಿಯರ್ಸ್ (ಕೀಲಿಮಣೆ ಯೋಧ). ತಮ್ಮ ನಕಾರಾತ್ಮಕ ಟೀಕೆಗಳಿಂದ ಇಲ್ಲಿನ ಹೂಡಿಕೆ ವಾತಾವರಣಕ್ಕೆ ಧಕ್ಕೆಯಾಗುತ್ತದೆ ಎಂಬುದು ಅವರಿಗೆ ಗೊತ್ತಿಲ್ಲವೇ? ಸಲಹೆಗಳನ್ನು ಕೊಡುವುದು ಬಿಟ್ಟು ಕನ್ನಡಿಗರು, ಕರ್ನಾಟಕವನ್ನು ಜಾಗತಿಕವಾಗಿ ಅವಮಾನ ಮಾಡುತ್ತಿದ್ದಾರೆ. ಹೈಕಮಾಂಡ್ ಮನವೊಲಿಸಲು ಯಾವ ತಟ್ಟೆಯಲ್ಲಿ ತಿನ್ನುತ್ತಿದ್ದರೋ ಅದರಲ್ಲೇ --- ಮಾಡುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಐಟಿ-ಬಿಟಿ ಸಚಿವರೇ ಉಪಮುಖ್ಯಮಂತ್ರಿಗಳಾಗಿದ್ದರು. ಅವರಿಗೆ ಸಲಹೆಗಳನ್ನು ನೀಡುವ ಸಮಿತಿಯಲ್ಲಿ ಇವರೇ ಇದ್ದರು. ಆಗ ಯಾಕೆ ಆ ಸರ್ಕಾರಕ್ಕೆ ಸಲಹೆ ನೀಡಿ ಕೆಲಸ ಮಾಡಿಸಲಿಲ್ಲ. ಕೇಂದ್ರದಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆದ ಅನ್ಯಾಯಗಳ ಬಗ್ಗೆ ಯಾಕೆ ತುಟಿ ಬಿಚ್ಚಿಲ್ಲ ಎಂದು ಕಿಡಿ ಕಾರಿದರು.