ರಾಜ್ಯದ ಇನ್ನೂ ನಾಲ್ಕು ನಗರಗಳಲ್ಲಿ ಮಾಕ್‌ ಡ್ರಿಲ್‌

| N/A | Published : May 09 2025, 08:45 AM IST

mock drill May 7 2025
ರಾಜ್ಯದ ಇನ್ನೂ ನಾಲ್ಕು ನಗರಗಳಲ್ಲಿ ಮಾಕ್‌ ಡ್ರಿಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಸೂಚನೆಯಂತೆ ರಾಜ್ಯದ ಇನ್ನೂ 4 ನಗರಗಳಲ್ಲಿ ಮಾಕ್‌ಡ್ರಿಲ್‌ ನಡೆಯಲಿದೆ.

  ಬೆಂಗಳೂರು : ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಸೂಚನೆಯಂತೆ ರಾಜ್ಯದ ಇನ್ನೂ 4 ನಗರಗಳಲ್ಲಿ ಮಾಕ್‌ಡ್ರಿಲ್‌ ನಡೆಯಲಿದೆ.

ಶುಕ್ರವಾರ ರಾಯಚೂರಿನಲ್ಲಿ, ಮೇ 10ಕ್ಕೆ ಮೈಸೂರು, 11ಕ್ಕೆ ಮಂಡ್ಯ, 12ಕ್ಕೆ ಕಾರವಾರಗಳಲ್ಲಿ ಮಾಕ್‌ ಡ್ರಿಲ್‌ ನಡೆಯಲಿದೆ. ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಶುಕ್ರವಾರ ಮಾಕ್ ಡ್ರಿಲ್ ನಡೆಯಲಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ.ತಿಳಿಸಿದ್ದಾರೆ.

ಇಡೀ ರಾಜ್ಯಕ್ಕೆ ಶೇ.40 ರಷ್ಟು ಕರೆಂಟ್‌ ಒದಗಿಸುವ ಪ್ರಮುಖ ವಿದ್ಯುತ್ ಶಾಖೋತ್ಪನ್ನ ಸ್ಥಾವರಗಳಾದ ರಾಯಚೂರು ಬೃಹತ್ಶಾಖೋತ್ಪನ್ನ ವಿದ್ಯುತ್ಕೇಂದ್ರ (ಆರ್ಟಿಪಿಎಸ್) ಹಾಗೂ ಯರಮರಸ್‌ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್ಸ್ಥಾವರ (ವೈಟಿಪಿಎಸ್)ಗಳು ಮುಗಿಲೆತ್ತರದ ಚಿಮಣಿಗಳು ಹೊಂದಿರುವ ಕಾರಣಕ್ಕೆ ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಮಾಕ್ ಡ್ರಿಲ್ ಮಾಡಲಾಗುತ್ತಿದೆ.

ಕಾರವಾರದಲ್ಲಿ ಮೇ 12ರಂದು ಐಎನ್‌ಎಸ್ ಕದಂಬ ನೌಕಾನೆಲೆಯ ಅಮದಳ್ಳಿ ಕಾಲನಿ, ಕೈಗಾ ಅಣು ವಿದ್ಯುತ್ ಯೋಜನಾ ಪ್ರದೇಶ, ಬಿಣಗಾದ ಗ್ರಾಸಿಂ ಇಂಡಸ್ಟ್ರಿ, ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರ, ಕಾರವಾರ ನಗರ ಹಾಗೂ ಮಲ್ಲಾಪುರದ ಕೈಗಾ ಟೌನ್ ಶಿಪ್ ನಲ್ಲಿ ಮಾಕ್‌ ಡ್ರಿಲ್‌ ನಡೆಯಲಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಎನ್‌ಡಿಆರ್‌ಎಫ್‌, ಅಗ್ನಿಶಾಮಕ, ವೈದ್ಯಕೀಯ ಸಿಬ್ಬಂದಿ, ಕಂದಾಯ, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪಹಲ್ಗಾಂನಲ್ಲಿ ಉಗ್ರರ ದಾಳಿ ಬಳಿಕ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕೆಲ ನಿರ್ದೇಶನಗಳು ಬಂದಿವೆ. ಮಾಕ್‌ಡ್ರಿಲ್‌ಗೆ ಮೂರು ಜಿಲ್ಲೆಗಳನ್ನು ಆಯ್ಕೆ‌ ಮಾಡಲಾಗಿದೆ. ಈಗ ಹೆಚ್ಚುವರಿಯಾಗಿ

ಮಾಕ್‌ ಡ್ರಿಲ್‌ಗೆ ಮೈಸೂರನ್ನೂ ಆಯ್ಕೆ ಮಾಡಲಾಗಿದ್ದು, ಮೇ 10ರಂದು ನಡೆಯಲಿದೆ ಎಂದು ಗೃಹ ಸಚಿವ ಪರಮೇಶ್ವರ್‌ ತಿಳಿಸಿದ್ದಾರೆ. ಇದೇ ವೇಳೆ, ಮೇ 11ಕ್ಕೆ ಮಂಡ್ಯದಲ್ಲಿ ಮಾಕ್‌ ಡ್ರಿಲ್ ನಡೆಯಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.