ರಾಜ್ಯದಲ್ಲಿ ಇನ್ನೂ 1 ವಾರ ಸಾಧಾರಣ ಮಳೆ ಸಾಧ್ಯತೆ - 17, 18ಕ್ಕೆ ಹೆಚ್ಚಿನ ಮಳೆ ಆಗುವ ನಿರೀಕ್ಷೆ

| N/A | Published : Apr 13 2025, 11:06 AM IST

kolkata Rain

ಸಾರಾಂಶ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ಇನ್ನೂ ವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ಇನ್ನೂ ವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ. ಅದರಲ್ಲೂ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ಸೋಮವಾರದಿಂದ ಸ್ವಲ್ಪಮಟ್ಟಿಗೆ ಮಳೆ ಪ್ರಮಾಣ ಕಡಿಮೆಯಾಗಲಿದೆ. ಗುರುವಾರದಿಂದ ಶನಿವಾರವರೆಗೆ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ.

ಮೇನಲ್ಲಿ ಮಳೆ ಬಂದರೆ  ಮುಂಗಾರಿಗೆ ತೊಂದರೆ

ಏಪ್ರಿಲ್‌ ಅವಧಿಯಲ್ಲಿ ಮಳೆ ಬಂದರೆ ಮುಂಗಾರು ಅವಧಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮೇ ಕೊನೇ ವಾರದಲ್ಲಿ ಚಂಡಮಾರುತ, ವಾಯುಭಾರ ಕುಸಿತದಂಥ ಸ್ಥಿತಿ ಉಂಟಾದರೆ ಮುಂಗಾರು ಆರಂಭಕ್ಕೆ ಸಮಸ್ಯೆಯಾಗಲಿದೆ. ಉಳಿದಂತೆ ಮುಂಗಾರು ಅವಧಿಯಲ್ಲಿ ಈ ಬಾರಿಯೂ ರಾಜ್ಯದಲ್ಲಿ ವಾಡಿಕೆ ಮಳೆಯಾಗುವ ಲಕ್ಷಣ ಕಂಡು ಬಂದಿವೆ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ವರದಿ ಪ್ರಕಾರ, ಮಂಗಳೂರಿನಲ್ಲಿ ಅತಿ ಹೆಚ್ಚು 4 ಸೆಂ.ಮೀ. ಮಳೆಯಾಗಿದೆ. ಯಾದಗಿರಿಯ ಕಕ್ಕೇರಿ, ಸೈದಾಪುರ ಹಾಗೂ ಶೋರಾಪುರ, ಬೀದರ್‌, ರಾಯಚೂರಿನ ಜಾಲಹಳ್ಳಿ ಹಾಗೂ ಗಬ್ಬೂರಿನಲ್ಲಿ ತಲಾ 3, ಬೆಂಗಳೂರಿನ ಟಿ.ಜೆ.ಹಳ್ಳಿ, ಕೋಟಾ, ಕೆಂಭಾವಿ, ಮುದ್ದೇಬಿಹಾಳ, ಗಂಗಾವತಿ, ಸೋಮವಾರಪೇಟೆಯಲ್ಲಿ ತಲಾ 2, ಪಣಂಬೂರು, ಹುಣಸಗಿ, ಶಹಾಪುರ, ಕೊಪ್ಪಳ, ಬಾಗೇವಾಡಿ, ನಾಗಮಂಗಲದಲ್ಲಿ ತಲಾ 1 ಸೆಂ.ಮೀ. ಮಳೆಯಾದ ವರದಿಯಾಗಿದೆ.