8ರಿಂದ 12ನೇ ತರಗತಿ ಮಕ್ಕಳಿಗೆ ಲೈಂಗಿಕ ಶಿಕ್ಷಣ - ಈ ಸಂಬಂಧ ಪರೀಕ್ಷೆ ನಡೆಸಲೂ ನಿರ್ಧಾರ : ಸಚಿವ ಮಧು

| N/A | Published : Mar 20 2025, 10:45 AM IST

govt schools

ಸಾರಾಂಶ

ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ 2025-26ನೇ ಶೈಕ್ಷಣಿಕ ಸಾಲಿನಿಂದ ವಾರದಲ್ಲಿ ಎರಡು ಅವಧಿಯಲ್ಲಿ ನೈತಿಕ ಮೌಲ್ಯದ ಶಿಕ್ಷಣ ಬೋಧನೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ವಿಧಾನ ಪರಿಷತ್ತು : ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ 2025-26ನೇ ಶೈಕ್ಷಣಿಕ ಸಾಲಿನಿಂದ ವಾರದಲ್ಲಿ ಎರಡು ಅವಧಿಯಲ್ಲಿ ನೈತಿಕ ಮೌಲ್ಯದ ಶಿಕ್ಷಣ ಬೋಧನೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಜೊತೆಗೆ ಈ ಸಂಬಂಧ ಪರೀಕ್ಷೆಯನ್ನೂ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ಇತ್ತೀಚೆಗೆ ಸುದೀರ್ಘ ಚರ್ಚೆ ನಡೆದಿತ್ತು. ಆಡಳಿತ ಹಾಗೂ ಪ್ರತಿಪಕ್ಷಗಳ ಅನೇಕ ಸದಸ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಸರ್ಕಾರಕ್ಕೆ ನೀಡಿದ್ದರು.

ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ದುಶ್ಚಟಗಳಿಗೆ ಒಳಗಾಗುವುದು, ಅಡ್ಡದಾರಿ ಹಿಡಿಯುವುದು ಸೇರಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಈಗಾಗಲೇ ಅನೇಕ ಕ್ರಮ ಕೈಗೊಂಡಿದೆ. ಇದರ ಜೊತೆಗೆ ಈ ಹಿಂದಿನ ವರ್ಷಗಳಲ್ಲಿದ್ದಂತೆ ಬರುವ ಶೈಕ್ಷಣಿಕ ಸಾಲಿನಿಂದ ನೀತಿ ಪಾಠ ಅಥವಾ ನೈತಿಕ ಮೌಲ್ಯದ ಶಿಕ್ಷಣ ಬೋಧನೆಯನ್ನೂ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಮಕ್ಕಳಲ್ಲಿ ಸತ್ಯ ಪ್ರಾಮಾಣಿಕತೆ, ಸಂಯಮ, ತ್ಯಾಗ, ಪರೋಪಕಾರ, ಸ್ವಾವಲಂಬನೆ, ಸ್ವಾಭಿಮಾನ, ಏಕಾಗ್ರತೆ, ಪರಿಶ್ರಮ, ಪ್ರೀತಿ, ಗೌರವ ಸೇರಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇವುಗಳನ್ನು ಮಕ್ಕಳಲ್ಲಿ ಬೆಳೆಸುವ ದೃಷ್ಟಿಯಿಂದ ನೀತಿ ಪಾಠ ಬೋಧನೆ ಅತ್ಯಂತ ಅಗತ್ಯ. ಉದಾಹರಣೆಗೆ ಶ್ರವಣಕುಮಾರನ ಕಥೆ ಮೂಲಕ ಮಾತಾಪಿತೃ ಭಕ್ತಿ, ಸತ್ಯ ಹರಿಶ್ಚಂದ್ರನ ಕಥೆ ಬೋಧನೆ ಮೂಲಕ ಸತ್ಯ ಸಂಧತೆ, ಶ್ರೀರಾಮಚಂದ್ರನ ಕಥೆ ಮೂಲಕ ಪಿತೃವಾಕ್ಯ ಪರಿಪಾಲನೆ, ಅರ್ಜುನನ ಏಕಾಗ್ರತೆ, ಕರ್ಣನ ತ್ಯಾಗ, ಲಕ್ಷ್ಮಣನ ಸಹೋದರತ್ವ, ಸರ್‌.ಎಂ.ವಿಶ್ವೇಶ್ವರಯ್ಯ ಅವರಲ್ಲಿನ ಪ್ರಾಮಾಣಿಕತೆ ಹೀಗೆ ಆದರ್ಶ ವ್ಯಕ್ತಿಗಳು, ಮಹಾನ್‌ ನಾಯಕರ ಜೀವನ ಚರಿತ್ರೆ, ಸಾಧನೆಗಳನ್ನು ಮಕ್ಕಳಿಗೆ 1ರಿಂದ 10ನೇ ತರಗತಿ ವ್ಯಾಸಂಗದ ಅವಧಿಯಲ್ಲಿ ಬೋಧಿಸುವುದು, ಅದೇ ರೀತಿ ರಾಷ್ಟ್ರಪ್ರೇಮ, ದೇಶದ ಭವ್ಯ ಪರಂಪರೆ, ಕಲೆ, ಸಂಸ್ಕೃತಿ , ಸಾಹಿತ್ಯ ಮತ್ತು ಐತಿಹಾಸಿಕ ಸ್ಥಳಗಳನ್ನು ಈ ಅವಧಿಯಲ್ಲಿ ಪರಿಚಯಿಸುವ ಕೆಲಸ ಆಗಬೇಕು. ಅದನ್ನು ನೈತಿಕ ಮೌಲ್ಯದ ಶಿಕ್ಷಣ ಬೋಧನೆ ಅವಧಿಯಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಪರೀಕ್ಷೆ: ಅಲ್ಲದೆ, ಒಂದು ತಿಂಗಳಲ್ಲಿ ಬೋಧಿಸಲಾಗುವ ವಿವಿಧ ವಿಷಯಗಳಲ್ಲಿನ ನೈತಿಕ ಮೌಲ್ಯಗಳನ್ನಾಧರಿಸಿ ತಿಂಗಳಿಗೊಮ್ಮೆ ಪರೀಕ್ಷೆ ನಡೆಸಲಾಗುವುದು. ಜೊತೆಗೆ ಉತ್ತಮ ಉತ್ತರಗಳನ್ನು ಆಯ್ಕೆ ಮಾಡಿ ತರಗತಿಯಲ್ಲಿ ಓದಿಸುವ ಮೂಲಕ ಮಕ್ಕಳನ್ನು ಪ್ರೇರೇಪಿಸಲಾಗುವುದು ಎಂದು ವಿವರಿಸಿದರು.

ಇವುಗಳ ಜೊತೆಗೆ ಮಕ್ಕಳಿಗಾಗಿ ಆರೋಗ್ಯ ಶಿಕ್ಷಣ, ಕ್ರೀಡೆ ಸೇರಿ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು, ಪಾಲಕರು ಶಿಕ್ಷಕರ ಸಭೆ, ವೃತ್ತಿ ಮಾರ್ಗದರ್ಶನ ಸೇರಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ಕಡ್ಡಾಯವಾಗಿ 2 ದಿನ ಶಿಕ್ಷಣ

ನೈತಿಕ ಮೌಲ್ಯದ ಶಿಕ್ಷಣದ ಜೊತೆಗೆ ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ 8ರಿಂದ 12ನೇ ತರಗತಿ ಮಕ್ಕಳಿಗೆ ಕಡ್ಡಾಯವಾಗಿ ವಾರದಲ್ಲಿ 2 ದಿನ ಲೈಂಗಿಕ ಶಿಕ್ಷಣ ನೀಡಲಾಗುವುದು ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ಲೈಂಗಿಕ ಶಿಕ್ಷಣ ಎಂದರೆ ತಪ್ಪಾಗಿ ಭಾವಿಸುವಂತಿಲ್ಲ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು, ಸಹಜವಾಗಿ ಆಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು, ಅವುಗಳೆಲ್ಲವನ್ನೂ ಸಹಜ ರೀತಿಯಲ್ಲಿ ಸ್ವೀಕರಿಸುವ ಮತ್ತು ಸೂಕ್ತ ರೀತಿಯಲ್ಲಿ ಎದುರಿಸುವ/ನಿರ್ವಹಿಸುವ ಮನೋಭಾವ ಬೆಳೆಸುವ ಕೆಲಸ ಆಗಲಿದೆ. ಈ ವಿಚಾರಗಳಲ್ಲಿ ವೈದ್ಯರೊಂದಿಗೆ ವರ್ಷದಲ್ಲಿ ಎರಡು ಬಾರಿ ಸಮಾಲೋಚನೆ, ಸಂವಾದ, ಉಪನ್ಯಾಸ ಏರ್ಪಡಿಸುವ ಮೂಲಕ ತಿಳಿವಳಿಕೆ ನೀಡುವ ಕೆಲಸ ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಅಸಹಜ, ಅನಪೇಕ್ಷಿತ ನಡವಳಿಕೆ ಹೊಂದಿರುವ ಮಕ್ಕಳಲ್ಲಿ ಮನೋವೈದ್ಯರಿಂದ ಸಮಾಲೋಚನೆ ನೀಡಲಾಗುವುದು. ಪೋಸ್ಕೋ ಕಾಯ್ದೆ ಕುರಿತು ಸ್ಥಳೀಯ ಪೊಲೀಸ್‌ ಠಾಣೆ ಸಹಯೋಗದೊಂದಿಗೆ ಕಾರ್ಯಾಗಾರ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು. ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿಗಳ ಸಮಸ್ಯೆ ಸಲ್ಲಿಸಲು ಒಂದು ಸಲಹಾ ಪೆಟ್ಟಿಗೆ, ಮಾನಸಿಕ ತುಮುಲಗಳನ್ನು ಪರಿಹರಿಸುವುದಕ್ಕಾಗಿ ಆಪ್ತ ಸಮಾಲೋಚನಾ ಸಮಿತಿ ನೇಮಿಸಲಾಗುವುದು.

ಸಮಸ್ಯೆಗಳನ್ನು ಹೊಂದಿರುವ ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅನುವಾಗುವಂತೆ ಪ್ರತಿ ಶಾಲೆ, ಕಾಲೇಜುಗಳಲ್ಲಿ ಓರ್ವ ಮಹಿಳಾ ಶಿಕ್ಷಕ/ಉಪನ್ಯಾಸಕರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗುವುದು ಎಂದು ತಿಳಿಸಿದ್ದಾರೆ.