ಸಾರಾಂಶ
ಕೊಪ್ಪಳ:
ಉನ್ನತ ಶಿಕ್ಷಣ ಜತೆಗೆ ಬದುಕು ಅರಳಿಸುವ ಕೌಶಾಲ್ಯಾಧಾರಿತ ಶಿಕ್ಷಣ ಅವಶ್ಯ ಎಂದು ಹಿರಿಯ ಸಾಹಿತಿ ಹಾಗೂ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಹೇಳಿದರು.ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಕೊಪ್ಪಳ ವಿಶ್ವವಿದ್ಯಾಲಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು. ಸ್ಥಳೀಯರಿಗೆ ಸುಲಭವಾಗಿ ಶಿಕ್ಷಣ ಸಿಗಬೇಕಾದರೆ ವಿಶ್ವವಿದ್ಯಾಲಯಗಳು ಬೇಕು ಎಂದರು.
ವಿಶ್ವವಿದ್ಯಾಲಯಗಳು ತಂತ್ರಜ್ಞಾನ ಯುಗದಲ್ಲಿ ಸ್ಪರ್ಧೆ, ಪೈಪೋಟಿ ಜತೆಗೆ ವಿದ್ಯಾರ್ಥಿಗಳ ಬದುಕು ಅರಳಿಸುವ ಶಿಕ್ಷಣ ಕೊಡಬೇಕು ಎಂದ ಅವರು, ರಾಜಕೀಯ ಇರುವುದು ಸೇವೆಗಾಗಿ. ಆದರೆ, ಇಂದು ಅದು ಹಿಂದೆ ಸರಿದು ಅಧಿಕಾರ ಮುಂದೆ ಬಂದಿದೆ. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಆಗಬಾರದು. ಒಂದು ದೇಶದ ಅಭಿವೃದ್ಧಿ ಅಲ್ಲಿಯ ಶಿಕ್ಷಣದ ಮೇಲೆ ನಿಂತಿರುತ್ತದೆ ಎಂದು ಹೇಳಿದರು.ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ಹೊಸ ವಿವಿ ನಡೆಸಿಕೊಂಡು ಹೋಗುವುದು ಸಾಮಾನ್ಯ ಕೆಲಸವಲ್ಲ. ಕಳೆದ 2 ವರ್ಷಗಳಿಂದ ಪ್ರೊ. ಬಿ.ಕೆ. ರವಿ ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಅವರ ಕಾಳಜಿ ತೋರಿಸುತ್ತದೆ ಎಂದರು.
ಬೆಂಗಳೂರು ವಿವಿ ಕುಲಪತಿ ಪ್ರೊ. ಜಯಕರ ಎಸ್.ಎಂ. ಮಾತನಾಡಿ, ಈ ಭಾಗದ ಬೆಳವಣಿಗೆ ಹಾಗೂ ಪರಿವರ್ತನೆಗೆ ವಿಶ್ವವಿದ್ಯಾಲಯದ ಪಾತ್ರ ಬಹಳ ಮುಖ್ಯವಾಗಿದೆ. ಯುವಕರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ಅವರು ಒಂದು ಉದ್ಯೋಗ ಸೃಷ್ಟಿಸುತ್ತಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ, ವಿವಿ ಆರಂಭವಾದ ನಂತರ ಹೆಣ್ಣು ಮಕ್ಕಳ ಕಲಿಕೆ ಹೆಚ್ಚಾಗಿದೆ. ಶಿಕ್ಷಣ ಬಲಪಡಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಬೇಕಿದೆ. ಓದುವ ವಿಷಯದಲ್ಲಿ ಆಳವಾದ ಜ್ಞಾನ ಇದ್ದರೆ ನೇಮಕಾತಿ ಆದೇಶ ಪತ್ರ ನಿಮ್ಮ ಮನೆಬಾಗಿಲಿಗೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿವಿಯಲ್ಲಿ ಹೊಸ ಕೋರ್ಸ್ ಆರಂಭಿಸುತ್ತಿದ್ದು ಸಂಶೋಧನೆಗೂ ಒತ್ತು ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ವಿವಿ ಬೆಳೆಯಲು ಜಿಲ್ಲೆಯ ಜನರ ಬೆಂಬಲ ಸಹಕಾರ ಅತ್ಯಗತ್ಯ ಎಂದರು.ಈ ವೇಳೆ ಪದ್ಮಶ್ರೀ ಪುರಸ್ಕೃತ ಭೀಮವ್ವ ಶಿಳ್ಳೆಕ್ಯಾತರ ಅವರನ್ನು ಸನ್ಮಾನಿಸಲಾಯಿತು. ಪತ್ರಿಕೋದ್ಯಮ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ಕಲ್ಯಾಣ ವಾಣಿ ಪತ್ರಿಕೆಯ ವಿಶೇಷ ಸಂಚಿಕೆ ಹಾಗೂ ಕೆಯುಕೆ ನ್ಯೂಸ್ ಲೋಗೊ ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಈ ವೇಳೆ ವಿವಿಧ ವಿವಿಗಳ ಕುಲಪತಿಗಳಾದ ಪ್ರೊ. ನಿರಂಜನ ವಾನಳ್ಳಿ, ಪ್ರೊ. ನಾಗೇಶ ವಿ. ಬೆಟ್ಟಕೋಟೆ, ಪ್ರೊ. ಮುನಿರಾಜು ಎಂ, ಪ್ರೊ. ಸುರೇಶ ವಿ. ನಾಡಗೌಡರ, ಪ್ರೊ. ಕೆ.ವೈ. ನಾರಾಯಣ ಸ್ವಾಮಿ, ಕುಲಸಚಿವರಾದ ಎಸ್.ಎನ್. ರುದ್ರೇಶ, ಪ್ರೊ. ಎನ್.ಎಂ. ಸಾಲಿ, ಪ್ರೊ. ಕೆ.ವಿ. ಪ್ರಸಾದ ಸೇರಿದಂತೆ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಿದ್ದರು.