ಭಾರತ-ಅಮೆರಿಕ ನಡುವೆ ತಂತ್ರಜ್ಞಾನ, ಶಿಕ್ಷಣ, ನಾವೀನ್ಯತೆ, ಸಂಶೋಧನೆ, ಹೂಡಿಕೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಗಾಢ ಸಹಯೋಗ ಅಗತ್ಯವಿದೆ. ಎಐ ಸೇರಿದಂತೆ ಪ್ರಮುಖ ವಲಯಗಳಲ್ಲಿ ಸಹಕಾರ ವಿಸ್ತರಿಸಲು ನಮ್ಮ ರಾಜ್ಯ ಉತ್ಸುಕವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು : ಭಾರತ-ಅಮೆರಿಕ ನಡುವೆ ತಂತ್ರಜ್ಞಾನ, ಶಿಕ್ಷಣ, ನಾವೀನ್ಯತೆ, ಸಂಶೋಧನೆ, ಹೂಡಿಕೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಗಾಢ ಸಹಯೋಗ ಅಗತ್ಯವಿದೆ. ಎಐ ಸೇರಿದಂತೆ ಪ್ರಮುಖ ವಲಯಗಳಲ್ಲಿ ಸಹಕಾರ ವಿಸ್ತರಿಸಲು ನಮ್ಮ ರಾಜ್ಯ ಉತ್ಸುಕವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅಮೆರಿಕದ ಸ್ವಾತಂತ್ರ್ಯದ 250ನೇ ವಾರ್ಷಿಕೋತ್ಸವದ ನೆನಪಿನಲ್ಲಿ ನಡೆದ ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಅವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ಮಾತನಾಡಿದರು.

ಬೆಂಗಳೂರು ಮತ್ತು ಸಿಲಿಕಾನ್ ವ್ಯಾಲಿ ಪಾಲುದಾರಿಕೆ

ಬೆಂಗಳೂರು ಮತ್ತು ಸಿಲಿಕಾನ್ ವ್ಯಾಲಿ ಪಾಲುದಾರಿಕೆ ಎರಡು ದೇಶಗಳ ನಡುವಿನ ಒಡನಾಟಕ್ಕೆ ಪ್ರಬಲ ತಾಂತ್ರಿಕ ಆಯಾಮ ನೀಡಲಿದೆ. ಇದರಲ್ಲಿ ವಿಶ್ವವಿದ್ಯಾಲಯ, ವಿಜ್ಞಾನಿಗಳು, ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳು ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿವೆ.

ಕೃತಕ ಬುದ್ಧಿಮತ್ತೆ (ಎಐ), ಸೆಮಿಕಂಡಕ್ಟರ್‌, ಬಾಹ್ಯಾಕಾಶ (ಏರೋಸ್ಪೇಸ್), ಸುಧಾರಿತ ಉತ್ಪಾದನೆ, ಡಿಜಿಟಲ್ ತಂತ್ರಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಕರ್ನಾಟಕವು ಅಮೆರಿಕದೊಂದಿಗೆ ನಿಕಟವಾಗಿ ಕೆಲಸ ಮಾಡಲು ಉತ್ಸುಕವಾಗಿದೆ. ರಾಜ್ಯದಲ್ಲಿ 1,000 ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಇದು ಭಾರತದಲ್ಲಿನ ಒಟ್ಟು ಅಮೆರಿಕನ್ ಕಾರ್ಪೊರೇಟ್ ಉಪಸ್ಥಿತಿಯ ಸುಮಾರು ಅರ್ಧದಷ್ಟು ಭಾಗವನ್ನು ಹೊಂದಿದೆ. 80,000 ಕ್ಕೂ ಹೆಚ್ಚು ಅಮೆರಿಕನ್ ನಾಗರಿಕರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂದು ವಿವರಿಸಿದರು.

ತಂತ್ರಜ್ಞಾನಕ್ಕೆ ಸೂಕ್ತ ಪರಿಸರ ವ್ಯವಸ್ಥೆ

ಮುಂದಿನ ಪೀಳಿಗೆಯ ತಂತ್ರಜ್ಞಾನಕ್ಕೆ ಸೂಕ್ತ ಪರಿಸರ ವ್ಯವಸ್ಥೆ ನಿರ್ಮಿಸುತ್ತಿದ್ದೇವೆ. ಕ್ವಿನ್ ಸಿಟಿ ಮತ್ತು ಸೆಮಿಕಂಡಕ್ಟರ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಎಐ ಹಬ್ ಮತ್ತು ಭಾರತದ ಮೊದಲ ಸಾರ್ವಜನಿಕ ವಲಯದ ಎಐ ವಿಶ್ವವಿದ್ಯಾಲಯವನ್ನು ಒಳಗೊಂಡಂತೆ ಎಐ ಟೆಕ್ ಪಾರ್ಕ್ ನಿರ್ಮಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಅಮೆರಿಕದ ಸ್ವಾತಂತ್ರ್ಯದ 250 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಮೆರಿಕದ ಜನರಿಗೆ ಅಭಿನಂದನೆ ಸಲ್ಲಿಸಿದ ಶಿವಕುಮಾರ್, ಭಾರತ, ಅಮೆರಿಕ ಮತ್ತು ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ತಮ್ಮ ಸಾಮರ್ಥ್ಯಗಳನ್ನು ಸಂಯೋಜಿಸಿ ಹೆಚ್ಚು ಸಮೃದ್ಧ ಭವಿಷ್ಯವನ್ನು ನಿರ್ಮಿಸಬಹುದು ಎಂದು ತಿಳಿಸಿದರು.

ವಿಧಾನಪರಿಷತ್‌ ಸಭಾಪತಿ ಸಲೀಂ ಅಹ್ಮದ್‌, ಸಚಿವರಾದ ಶರಣ್‌ ಪ್ರಕಾಶ್ ಪಾಟೀಲ್, ವಿಧಾನಪರಿಷತ್ ಸದಸ್ಯರಾದ ಆರತಿ ಕೃಷ್ಣ, ಅಮೆರಿಕ ರಾಯಭಾರಿ ಕಚೇರಿ ಅಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.