ಮುಡಾ ಸೈಟ್‌ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿರುವ ಸಮನ್ಸ್‌ ರದ್ದು ಪಡಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ

ಬೆಂಗಳೂರು : ಮುಡಾ ಸೈಟ್‌ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿರುವ ಸಮನ್ಸ್‌ ರದ್ದು ಪಡಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

ಸಮನ್ಸ್‌ ರದ್ದು ಕೋರಿ ಇಬ್ಬರೂ ಸಲ್ಲಿಸಿದ್ದ ಪ್ರತ್ಯೇಕಗಳ ಅರ್ಜಿಗಳ ಕುರಿತು ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ತೀರ್ಪು ಕಾಯ್ದಿರಿಸಿದೆ. ಜೊತೆಗೆ ತೀರ್ಪು ಪ್ರಕಟಿಸುವವರೆಗೂ ಅರ್ಜಿದಾರರ ವಿರುದ್ಧದ ಇ.ಡಿ ಸಮನ್ಸ್‌ಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆ ಮುಂದುವರಿಸಿತು.

ವಿಚಾರಣೆ ವೇಳೆ ಪಾರ್ವತಿ ಅವರ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದಿಸಿ, ಇ.ಡಿ. ಇಸಿಐಆರ್‌ ದಾಖಲಿಸಿದ್ದೇ ಸರಿಯಲ್ಲ. ಲೋಕಾಯುಕ್ತರು ಎಫ್‌ಐಆರ್‌ ದಾಖಲಿಸಿದ 4 ದಿನಗಳಲ್ಲೇ ಇ.ಡಿ ಇಸಿಐಆರ್‌ ದಾಖಲಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯನ್ನೇ ಇ.ಡಿ ಪುನರಾವರ್ತಿಸುತ್ತಿದೆ. ಇ.ಡಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ14 ನಿವೇಶನ ಅಪರಾಧದ ಸಂಪತ್ತು ಎಂದಿದೆ.

ಮುಡಾದ 1708 ನಿವೇಶನಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ. ಈಗಾಗಲೇ 160 ನಿವೇಶನಗಳನ್ನು ಇ.ಡಿ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಇ.ಡಿ ತನ್ನ ಕಾರ್ಯವ್ಯಾಪ್ತಿ ಮೀರಿ ಪರ್ಯಾಯ ತನಿಖೆ ನಡೆಸುತ್ತಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂಬುದಾಗಿ ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಅಲ್ಲದೆ, ‘ಮುಡಾದ 14 ನಿವೇಶನಗಳನ್ನು 2024ರ ಅ.1ರಂದು ಪಾರ್ವತಿ ಹಿಂದಿರುಗಿಸಿದ್ದಾರೆ. ಸದ್ಯ ಅವರು ನಿವೇಶನಗಳನ್ನು ಅನುಭವಿಸುತ್ತಿಲ್ಲ ಮತ್ತು ಅಪರಾಧದ ಸಂಪತ್ತು ಅವರ ಬಳಿ ಇಲ್ಲ. ಆದ್ದರಿಂದ ಇಡಿಗೆ ತನಿಖೆ ವ್ಯಾಪ್ತಿ ಇಲ್ಲ. ಅಪರಾಧದಿಂದ ಗಳಿಸಿದ ಸಂಪತ್ತಿದ್ದರೆ ಮಾತ್ರ ಇ.ಡಿ ತನಿಖೆ ನಡೆಸಬಹುದು. ಆದರೆ ನಿವೇಶನಗಳನ್ನು ಮರಳಿಸಿದ ನಂತರ ಇ.ಡಿ ತನಿಖೆ ಆರಂಭಿಸಿದೆ. ಅಪರಾಧದಿಂದ ಗಳಿಸಿದ ಹಣ ಬೇರೆ ಚಟುವಟಿಕೆಗೆ ಬಳಕೆಯಾಗಬೇಕು. ಇಲ್ಲವಾದರೆ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಕಾಯ್ದೆ ಅನ್ವಯವಾಗುವುದಿಲ್ಲ. ಹಾಗಾಗಿ, ಅರ್ಜಿ ಪುರಸ್ಕರಿಸಿ ಅರ್ಜಿದಾರರ ವಿರುದ್ಧ ಇ.ಡಿ ನೀಡಿರುವ ಸಮನ್ಸ್‌ ರದ್ದುಪಡಿಸಬೇಕು ಎಂದು ಕೋರಿದರು.

ಇಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ವಾದಿಸಿ, ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಅವರು 2024ರ ಅ.1ರಂದು 14 ನಿವೇಶನಗಳನ್ನು ಮುಡಾಗೆ ಹಿಂತಿರುಗಿಸಿದ್ದಾರೆ. ಮುಡಾ ಜೆಟ್‌ ವಿಮಾನದ ವೇಗದಲ್ಲಿ ಆ ಸೈಟ್‌ಗಳನ್ನು ಹಿಂಪಡೆದಿದೆ. ಸಾಮಾನ್ಯ ಜನ ಹೋದರೆ ತಿಂಗಳಾದರೂ ಕೆಲಸ ಆಗುವುದಿಲ್ಲ. ಸಿಎಂ ಪತ್ನಿ ಮನವಿ ಕೊಟ್ಟರೆ ಆ ಕ್ಷಣವೇ ಕೆಲಸವಾಗುತ್ತದೆ. ಇಸಿಐಆರ್‌ ದಾಖಲಿಸಿದಾಗ 14 ಸೈಟ್‌ ಸಿಎಂ ಪತ್ನಿ ವಶದಲ್ಲಿತ್ತು. ಅದು ಅಪರಾಧದ ಸಂಪತ್ತಾಗಿರುವುದರಿಂದ ತನಿಖೆ ಅಗತ್ಯ ಎಂದು ಪ್ರತಿಪಾದಿಸಿದರು.

ಮುಡಾದ ಅಪರಾಧದ ಸಂಪತ್ತನ್ನು ಸಂಬಂಧಿಗಳಿಗೆ ಹಸ್ತಾಂತರಿಸಲಾಗಿದೆ. ಪ್ರಭಾವಿ ವ್ಯಕ್ತಿಗಳು ಒತ್ತಡ ಹೇರಿ ನೆಂಟರ ಹೆಸರಿನಲ್ಲಿ ಸೈಟ್‌ ಹಂಚಿಕೆ ಮಾಡಿಸಿಕೊಂಡಿದ್ದಾರೆ. ಮುಡಾ ಮಾಜಿ ಆಯುಕ್ತರು ತಮ್ಮ ತಾತ, ಹೆಂಡತಿಯ ತಾತ, ಸಹೋದರನ ಮಗ, ಹೆಂಡತಿಯ ತಾತ ಹಲವರಿಗೆ ಸೈಟ್‌ ಹಂಚಿ ಅಕ್ರಮ ಎಸಗಿದ್ದಾರೆ. ಹಾಗಾಗಿಯೇ ಸಂಬಂಧಿಗಳ ವಿವರವನ್ನೂ ಆರೋಪಿಗಳಿಂದ ಕೇಳಲಾಗಿದೆ. ಇ.ಡಿ ಸಮನ್ಸ್‌ನಲ್ಲಿ ಯಾವುದೇ ಆರೋಪಗಳನ್ನು ಮಾಡಿಲ್ಲ. ಮಾಹಿತಿಗಾಗಿ ಸಮನ್ಸ್‌ ಜಾರಿಗೊಳಿಸಿದೆ. ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿರಬಹುದು. ಆದರೆ, ಕೋರ್ಟ್‌ ಇನ್ನೂ ಬಿ ರಿಪೋರ್ಟ್‌ ಅಂಗೀಕರಿಸಿಲ್ಲ. ಬಿ ರಿಪೋರ್ಟ್‌ ಪ್ರಶ್ನಿಸಲು ಇ.ಡಿಗೂ ಅಧಿಕಾರವಿದೆ ಎಂದು ಕಾಮತ್‌ ಕೋರ್ಟ್‌ ಗಮನಕ್ಕೆ ತಂದರು.