ಸಾರಾಂಶ
ಶರಣಾಗಿರುವ ನಕ್ಸಲರು ಸರ್ಕಾರದ ಮುಂದೆ 18 ಅಂಶಗಳ ಹಕ್ಕೊತ್ತಾಯ ಮಂಡಿಸಿದ್ದಾರೆ.
ಬೆಂಗಳೂರು : ಶರಣಾಗಿರುವ ನಕ್ಸಲರು ಸರ್ಕಾರದ ಮುಂದೆ 18 ಅಂಶಗಳ ಹಕ್ಕೊತ್ತಾಯ ಮಂಡಿಸಿದ್ದಾರೆ. ಪ್ರಮುಖವಾಗಿ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯದ ಜೈಲಿನಲ್ಲಿರುವ ನಕ್ಸಲ್ ಚಟುವಟಿಕೆಯಲ್ಲಿದ್ದರ ಪ್ರಕರಣ ಶೀಘ್ರ ಇತ್ಯರ್ಥಗೊಳಿಸಿ ಬಿಡುಗಡೆ ಮಾಡಬೇಕು ಹಾಗೂ ಪುನರ್ವಸತಿ, ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯದಲ್ಲಿ ಭೂಮಿ ಇಲ್ಲದ ಕುಟುಂಬದವರಿಗೆ ತಲಾ 5 ಎಕರೆ ಕೃಷಿ ಯೋಗ್ಯ ಭೂಮಿ ನೀಡಬೇಕು, ಈಗಾಗಲೇ ಭೂಮಿ ಹೊಂದಿರುವವರಿಗೆ ಹಕ್ಕುಪತ್ರ ನೀಡಬೇಕು, ಕಸ್ತೂರಿ ರಂಗನ್ ವರದಿ ರದ್ದುಗೊಳಿಸಬೇಕು, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಸ್ಥಗಿತಗೊಳಿಸಬೇಕು, ನಿರುದ್ಯೋಗಿ ಯುವಜನರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿದ್ದಾರೆ.
ಅಲ್ಲದೇ, ಆದಿವಾಸಿಗಳಿಗೆ ಕಾಡಿನ ಮೇಲೆ ಎಲ್ಲ ರೀತಿಯ ಅಧಿಕಾರ ನೀಡಬೇಕು, ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಬೇಕು, ಕುದುರೆಮುಖ ರಾಷ್ಟ್ರೀಯ ಉದ್ಯಾನ ರದ್ದಾಗಬೇಕು ಮತ್ತು ಅಲ್ಲಿ ಜನರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು, ಬಡ ಮತ್ತು ಮಧ್ಯಮ ವರ್ಗದ ರೈತರ ಒತ್ತುವರಿ ತೆರವುಗೊಳಿಸಬಾರದು, ಅಡಕೆ ಬೆಳೆ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂಬುದು ಸೇರಿ 18 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಇವರೇ ಶಸ್ತ್ರ ಕೆಳಗಿಳಿಸಿ ಶರಣಾದ 6 ನಕ್ಸಲೀಯರು
ಮುಂಡಗಾರು ಲತಾ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದ ಲತಾ ಅವರದ್ದು ದೊಡ್ಡ ಕುಟುಂಬ. ಲತಾ ಅವರು ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪಿಯುಸಿ ಓದುವಾಗ ತಮ್ಮ ವ್ಯಾಸಂಗ ಮೊಟಕುಗೊಳಿಸಿದರು. ಅವರು ಓದುವ ವೇಳೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟ ಚಳವಳಿ ಉತ್ತುಂಗಕ್ಕೆ ಏರಿತ್ತು. ಈ ಯೋಜನೆ ಜಾರಿಗೆ ಬಂದರೆ ನೂರಾರು ಮಂದಿ ಆದಿವಾಸಿಗಳು ತಮ್ಮ ನೆಲೆ ಕಳೆದುಕೊಳ್ಳಲಿದ್ದಾರೆ ಎಂಬುದು ಮನಸ್ಸಿನಲ್ಲಿ ಬರುತ್ತಿದ್ದಂತೆ ಕುದುರೆಮುಖ ವಿಮೋಚನಾ ಚಳವಳಿಗೆ ಬಂದು ನಂತರದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟ ಸಮಿತಿಯ ಮುಂಚೂಣಿ ನಾಯಕಿಯಾಗಿದ್ದರು. ಬಳಿಕ ನಕ್ಸಲ್ ಹೋರಾಟಕ್ಕೆ ಧುಮುಕಿ ಸಕ್ರಿಯರಾಗಿದ್ದರು.
ಸುಂದರಿ ಕುತ್ಲೂರು
ಸುಂದರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರು ಗ್ರಾಮದವರು. ಬಡತನ ಹಾಗೂ ಶಾಲೆ ದೂರವಿದ್ದುದರಿಂದ 3ನೇ ತರಗತಿಯ ಬಳಿಕ ಶಾಲೆ ಬಿಟ್ಟರು. ಇವರ ಕುಟುಂಬವೂ ಸಹ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಿಂದಾಗಿ ತನ್ನ ಎಲ್ಲವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದರು. ಪ್ರಜಾಸತ್ತಾತ್ಮಕ ಚಳವಳಿ ಫಲ ನೀಡದೆಂದು ಕಂಡಾಗ ಆಗಿನ ಹಲವು ಯುವಜನರಂತೆ ಸುಂದರಿಯೂ ಸಹ ಆಯುಧವನ್ನು ಕೈಗೆತ್ತಿಕೊಂಡರು. ತನ್ನ 19ನೇಯ ವಯಸ್ಸಿನಲ್ಲಿ 2004ರಲ್ಲಿ ಮಾವೋವಾದಿ ಪಕ್ಷದ ಸದಸ್ಯರಾಗಿದ್ದು ಅಂದಿನಿಂದ ಕೇರಳ ಹಾಗೂ ಕರ್ನಾಟಕದಲ್ಲಿ ಸಂಚರಿಸುತ್ತಿರುವ ದಳದ ಭಾಗವಾಗಿದ್ದರು. ತನ್ನ ಹಾಗೂ ನೆರೆಹೊರೆಯ ಕುಟುಂಬಗಳ ಮೇಲೆ ಪೊಲೀಸರು ನಡೆಸುತ್ತಿದ್ದ ದಾಳಿಗಳು ದೌರ್ಜನ್ಯಗಳನ್ನು ಇಂದಿಗೂ ನೋವಿನಿಂದ ನೆನಪಿಸಿಕೊಳ್ಳುವ ಸುಂದರಿ ತನ್ನ ಹೋರಾಟದ ಕೆಚ್ಚನ್ನು ಉಳಿಸಿಕೊಂಡಿದ್ದು ಇನ್ನು ಮುಂದೆ ಪ್ರಜಾತಾಂತ್ರಿಕ ಚಳುವಳಿಗಳ ಭಾಗವಾಗಲು ಮುಖ್ಯ ವಾಹಿನಿಯನ್ನು ಸೇರಬಯಸಿದ್ದಾರೆ.
ವನಜಾಕ್ಷಿ
ವನಜಾಕ್ಷಿ ಅವರು ಕಳಸ ಸಮೀಪದ ಬಾಳೆಹೊಳೆ ಗ್ರಾಮದವರು. ಇವರು ಎಸ್‌ಎಸ್‌ಎಲ್‌ಸಿ ಬಳಿಕ ಓದು ನಿಲ್ಲಿಸಿದರು. 1992 ಮತ್ತು 1997ರಲ್ಲಿ ಬಾಳೆಹೊಳೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇವರು ಟೈಪ್ ರೈಟಿಂಗ್, ಹೊಲಿಗೆಯನ್ನು ಕಲಿತು ಜೀವನಾಧಾರವಾಗಿಸಿಕೊಂಡರು. ರಾಜಕೀಯವಾಗಿ ಸಕ್ರಿಯವಾಗಿದ್ದರೂ ಸಹ ಇವರಿಗೆ ಮತ್ತು ಇವರ ಕುಟುಂಬಕ್ಕೆ ಬಲಾಢ್ಯರಿಂದ ತಮ್ಮ ತುಂಡು ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ತಾಯಿ ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿ, ತಮ್ಮ ಆತ್ಮಹತ್ಯೆಗೆ ಶರಣಾದ. 2000 ಇಸವಿಯಲ್ಲಿ ಮಾವೋವಾದಿ ಪಕ್ಷದ ಭಾಗವಾಗಿ ಕರ್ನಾಟಕ ಹಾಗೂ ಕೇರಳದಲ್ಲಿ ಸಂಚರಿಸುವ ದಳದ ಸದಸ್ಯೆಯಾಗಿದ್ದರು. ತನ್ನ ಹೋರಾಟವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಯೂ ಮುಂದುವರಿಸಬಹುದಾದ ಅವಕಾಶಗಳನ್ನು ಅರ್ಥ ಮಾಡಿಕೊಂಡು ಈಗ ಮುಖ್ಯವಾಹಿನಿಗೆ ಬಂದಿದ್ದಾರೆ.
ಜಯಣ್ಣ ಅರೋಲಿ
ಜಯಣ್ಣ ಆರೋಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದವರು. ಜಯಣ್ಣ 2ನೇ ವರ್ಷದ ಬಿಎ ಪದವಿವರೆಗೂ ಓದಿರುವ ದಲಿತ ಯುವಕ. ಕಾಲೇಜಿನಲ್ಲಿ ಇರುವಾಗಲೇ ಆ ಭಾಗದಲ್ಲಿ ನಡೆಯುತ್ತಿದ್ದ ಮಾವೋವಾದಿ ಚಳವಳಿಯ ಕಡೆ ಆಕರ್ಷಿತರಾದರು. ಆಸಕ್ತಿಯಿಂದ ಚಳವಳಿಯನ್ನು ಗಮನಿಸುತ್ತಿದ್ದ ಅವರಿಗೆ ಭಾಸ್ಕರ್ ಅವರ ಎನ್‌ಕೌಂಟರ್ ಹತ್ಯೆ ಆಘಾತವನ್ನುಂಟು ಮಾಡಿತು. ತನ್ನ 24ನೇ ವಯಸ್ಸಿನಲ್ಲಿ 2000ರಲ್ಲಿ ಕೇರಳ, ಕರ್ನಾಟಕಗಳಲ್ಲಿ ದಳದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. 2018 ಮತ್ತೆ ಸಶಸ್ತ್ರ ಚಳವಳಿಗೆ ಮರಳಿದರು. ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ಭಾಗವಾಗಿ ತಮಗೆ ಸಂದಾಯವಾಗಬಹುದಾದ ಹಣದ ಅರ್ಧ ಭಾಗವನ್ನು ತನ್ನ ಹಳ್ಳಿಯ ಶಾಲೆಯ ಅಭಿವೃದ್ಧಿಗಾಗಿ ನೀಡಬೇಕೆಂದು ತೀರ್ಮಾನಿಸಿದ್ದಾರೆ.
ಕೆ. ವಸಂತ್
ಕೆ. ವಸಂತ್ ಅವರು ತಮಿಳುನಾಡಿನ ರಾಣಿಪೇಟ್‌ನ ವೆಲ್ಲೂರು ಜಿಲ್ಲೆಯ ಆರ್ಕಾಟ್ ನಿವಾಸಿ. ಇವರು ಬಿ.ಟೆಕ್ ಪದವೀಧರ. ಸಮಾಜಮುಖಿ ಚಿಂತನೆಗಳಿಂದ ಪ್ರಭಾವಿತರಾದ ಇವರು ಹೋರಾಟಗಳನ್ನು ಗಮನಿಸುತ್ತಾ ಬೆಳೆದರು. 2010ರಲ್ಲಿ ಪದವಿ ಮುಗಿಸಿದ ತಕ್ಷಣವೇ ಸಶಸ್ತ್ರ ಹೋರಾಟದ ಭಾಗವಾಗಿ ಅಂದಿನಿಂದಲೂ ಕೇರಳ ಕರ್ನಾಟಕಗಳಲ್ಲಿರುವ ದಳದ ಸದಸ್ಯರಾಗಿದ್ದರು. ಮಿತ ಭಾಷೆ ಆಗಿರುವ ವಸಂತ್ ತನ್ನ ಆದರ್ಶಗಳನ್ನು ಬಿಟ್ಟುಕೊಡದೆ ಹೋರಾಟದ ಮಾರ್ಗವನ್ನು ಬದಲಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ.
ಎಂ.ಡಿ. ಜಿಶಾ
ಜಿಶಾ ಕೇರಳದ ವಯನಾಡ್ ಜಿಲ್ಲೆಯ ಮಕ್ಕಿಮಲದ ಆದಿವಾಸಿ ಮಹಿಳೆ. ಉವರು ತಂಡದಲ್ಲಿನ ಎಲ್ಲರಿಗಿಂತಲೂ ತುಂಬಾ ಚಿಕ್ಕವರು. ಇವರು ಎಂಟನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. 2018ರಲ್ಲಿ ಕೇರಳದಲ್ಲಿ ಸಶಸ್ತ್ರ ಹೋರಾಟದ ಭಾಗವಾಗಿದ್ದು 2023ರಲ್ಲಿ ತಂಡದ ಇತರೆ ಸದಸ್ಯರೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಬಂದವರು. ಇವರು ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ.
ಶರಣಾದ ನಕ್ಸಲರ ಕುಟುಂಬಗಳಲ್ಲೀಗ ಸಂತಸ
ಚಿಕ್ಕಮಗಳೂರು : ಆರು ಮಂದಿ ನಕ್ಸಲರು ಬುಧವಾರ ಬಂದೂಕು ಹೋರಾಟ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ಅವರ ಪೋಷಕರು, ಒಡ ಹುಟ್ಟಿದವರು, ಸಂಬಂಧಿಕರಲ್ಲಿ ಸಂತಸ ತಂದಿದೆ. ಹತ್ತಾರು ವರ್ಷ ಬಿಟ್ಟು ಹೋದವರು ಹತ್ತಿರಕ್ಕೆ ಬಂದಿದ್ದರಿಂದ ಹೊಸ ಕನಸು ಚಿಗುರೊಡೆದಿದೆ. ಅವರು ರಾಜ್ಯ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ. ‘ಕನ್ನಡಪ್ರಭ’ ದೊಂದಿಗೆ ಮನದಾಳ ಬಿಚ್ಚಿಟ್ಟಿದ್ದಾರೆ.
ಮನೆಗೆ ಬರುತ್ತಿರುವುದು ಖುಷಿಯಾಗ್ತಾ ಇದೆ
ಮನೆ ಬಿಟ್ಟು ಹೋಗಿ 17-18 ವರ್ಷದಿಂದ ಯಾವುದೇ ಸಂಪರ್ಕ ಇಲ್ಲ. ಅವರನ್ನು ಮುಖ್ಯ ವಾಹಿನಿಗೆ ತರಲು ಕಳೆದ 15 ದಿನಗಳಿಂದ ನಾವು ಮುಂಡಗಾರು, ಹಗಲಗಂಜಿ ಸೇರಿ ಸುತ್ತಮುತ್ತ ತಿರುಗಾಡಿದ್ದೇವೆ. ಮೀಸಲು ಅರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಹೋರಾಟದಲ್ಲಿ ನಾನು ಸಹ ಇದ್ದೆ. ಸಂವಿಧಾನಬದ್ಧ ಹೋರಾಟ ಮುಂದುವರಿಸುತ್ತೇನೆ. ವನಜಾಕ್ಷಿ ಮನೆಗೆ ಬರುತ್ತಿರುವುದು ಖುಷಿ ತಂದಿದೆ.
- ಯಶೋಧ, ವನಜಾಕ್ಷಿ ಸಹೋದರಿ
ಶಸ್ತ್ರಾಸ್ತ್ರ ಹೋರಾಟ ಗೊತ್ತಿಲ್ಲ
10-15 ವರ್ಷಗಳಿಂದ ನಮ್ಮ ಕಣ್ಣಿಗೆ ಬಿದ್ದಿಲ್ಲ, ಲತಾಳನ್ನು ಹುಡುಕಿಕೊಡಿ ಎಂದು ಪೋಲೀಸರು ಕಿರುಕುಳ ನೀಡಿದ್ದರು. ಆ ಹೋರಾಟದ ಬಗ್ಗೆ ನಮಗೆ ಗೊತ್ತಿಲ್ಲ, ಪೊಲೀಸರಿಂದ ಚಿತ್ರ ಹಿಂಸೆ ಅನುಭವಿಸಿದ್ದೇವೆ. ಸರ್ಕಾರ ಅವರಿಗೆ ಒಳ್ಳೆಯ ರೀತಿ ಕೆಲಸ ಕೊಡಬೇಕು. ಶಸ್ತ್ರಾಸ್ತ್ರ ಹೋರಾಟದ ಬಗ್ಗೆ ಗೊತ್ತಿಲ್ಲ, ಈ ಬಗ್ಗೆ ತಿಳಿವಳಿಕೆ ಇಲ್ಲ. ಕಿರಿಯ ತಂಗಿ ಬಂದಿದ್ದು ಖುಷಿ ಆಯಿತು. ಕೇಸ್‌ಗಳನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು.
- ಶೇಷೇಗೌಡ, ಮುಂಡಗಾರು ಲತಾ ಅಣ್ಣ
ಕೇಸ್ ವಾಪಸ್ ಪಡೆಯಬೇಕು
ನಮ್ಮೂರ ಕಡೆ ಬಡವರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿತ್ತು. ಆಗ ಪ್ರಜ್ಞಾವಂತರ ತಂಡ ತೆರೆ ಮರೆಯಲ್ಲಿ ಕೆಲಸ ಮಾಡುವ ತೀರ್ಮಾನಕ್ಕೆ ಬಂದಿತು. ಸರ್ಕಾರ ಉದ್ದೇಶ ಪೂರ್ವಕವಾಗಿ ಜನರ ಸಮಸ್ಯೆಯನ್ನು ತಿರಸ್ಕಾರ ಮಾಡಿದ್ದರಿಂದ ಅದಕ್ಕೆ ಪರ್ಯಾಯವಾಗಿ ಚಳವಳಿ ಕಟ್ಟಿಕೊಂಡು ಜನರಿಗೆ ಸಹಾಯ ಮಾಡಿದ್ದಾರೆ. ಅವರು ಜನರಿಗೆ ತೊಂದರೆ ಕೊಟ್ಟಿಲ್ಲ. . ಸಿದ್ದರಾಮಯ್ಯ ಸರ್ಕಾರ ಶರಣಾಗತಿ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ. ಅವರ ಆಶಯ ಈಡೇರಿಸಬೇಕು. ಅವರ ಮೇಲಿನ ಪ್ರಕರಣ ವಾಪಸ್ ಪಡೆಯಬೇಕು.
- ಅಂಬಣ್ಣ, ಜಯಣ್ಣ ಅರೋಲಿ ಸಹೋದರ
ಮಗನನ್ನು ಮನೆಗೆ ಕಳುಹಿಸಿಕೊಡಿ
ತಮಿಳುನಾಡಿನ ರಾಣಿಪೇಟೆ ಸಮೀಪದ ಅರ್ಕಾಡ್ ಗ್ರಾಮ ನಮ್ಮದು. ನನಗೆ ಇಬ್ಬರು ಮಕ್ಕಳು. ವಸಂತ್ ಓದಿನಲ್ಲಿ ಮುಂದಿದ್ದ. ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದ್ದ. ಕೊಯಮತ್ತೂರಿನಲ್ಲಿ ಸಂದರ್ಶನ ಇದೆ ಎಂದು ಹೋದವನು ಮನೆಗೆ ಬರಲೇ ಇಲ್ಲ. 10 ವರ್ಷದಿಂದ ಕಾದು ಕುಳಿತುಕೊಂಡಿದ್ದೆವು. ನನ್ನ ಮಗ ಈ ರೀತಿ ಹೋರಾಟದ ಹಾದಿ ತುಳಿದಿರುವುದು ಗೊತ್ತಿರಲಿಲ್ಲ. ಯಾರು ಕರೆದುಕೊಂಡು ಹೋದರೆಂಬುದೂ ಗೊತ್ತಿಲ್ಲ. ಆತನ ವಿರುದ್ಧ ಎಲ್ಲಾ ಕೇಸು ರದ್ದುಪಡಿಸಿ ನನ್ನ ಮಗನನ್ನು ನನ್ನ ಮನೆಗೆ ಕಳುಹಿಸಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ.
- ಕುಮಾರ್, ವಸಂತ್ ತಂದೆ
ಹುಟ್ಟಿದ ನೆಲದಲ್ಲೇ ಅಂತ್ಯ ಕಂಡ ನಕ್ಸಲ್ ಚಳವಳಿ!
ಆರ್. ತಾರಾನಾಥ್ ಅಟೋಕರ್
ಚಿಕ್ಕಮಗಳೂರು : ಕುದುರೆಮುಖ ಗಣಿಗಾರಿಕೆ, ತುಂಗಾ -ಭದ್ರಾ ನದಿ ಮಾಲಿನ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ, ಆದಿವಾಸಿಗಳ ಸ್ಥಳಾಂತರ ಆತಂಕ... ಈ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ 1998-99ರ ಸಮಯದಲ್ಲಿ ಸ್ಥಳೀಯ ಯುವಕ-ಯುವತಿಯರ ಗುಂಪು ಹುಟ್ಟಿಕೊಂಡಿತು. ಕೆಲವೇ ವರ್ಷಗಳಲ್ಲಿ ಇದು ನಕ್ಸಲ್ ಚಳವಳಿಯಾಯಿತು. ಒಂದು ಹಂತದಲ್ಲಿ ನಕ್ಸಲ್ ಚಳವಳಿ ಪಾರಮ್ಯ ಮೆರೆಯಿತು. ನಕ್ಸರು ಮತ್ತು ಪೋಲಿಸರ ಕಾಳಗದಲ್ಲಿ ಗುಂಡಿನ ಸದ್ದು ಮೊರೆಯಿತು. ಈಗ 25 ವರ್ಷ ಬಳಿಕ ನಕ್ಸಲ್ ಚಳವಳಿ ಅಂತ್ಯ ಕಾಣುವ ಸುದ್ದಿ ಹೊರ ಬಿದ್ದಿದೆ.
ನಕ್ಸಲ್ ಚಳವಳಿ ಮೂಲ ಇಲ್ಲಿನ ಜ್ವಲಂತ ಸಮಸ್ಯೆ. ಈ ಸಮಸ್ಯೆ ಮುಂದಿಟ್ಟು ಯುವಜನರಲ್ಲಿ ಹೊಸ ಹೋರಾಟದ ಕಿಚ್ಚು ಹಚ್ಚಲಾಯಿತು. ಯುವಕ, ಯುವತಿಯರ ಕೈಗೆ ಬಂದೂಕು ಬಂತು. ಇದರ ನೇತೃತ್ವ ಸಾಕೇತ್ ರಾಜನ್ ವಹಿಸಿಕೊಂಡಿದ್ದರು.
ಕೊಪ್ಪ ತಾಲೂಕಿನ ಮೆಣಸಿನ ಹಾಡ್ಯದಲ್ಲಿ 2002ರಲ್ಲಿ ಬಂದೂಕು ತರಬೇತಿ ವೇಳೆ ಚೀರಮ್ಮ ಕಾಲಿಗೆ ಗುಂಡು ತಗಲಿತು. ಇದರೊಂದಿಗೆ ನಕ್ಸಲ್ ಚಳವಳಿ ಹುಟ್ಟಿದ ಅಘಾತಕಾರಿ ವಿಷಯ ಹೊರಬಿತ್ತು. ಕಾರ್ಕಳದ ಈದು ಗ್ರಾಮದಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿದಾಗ ಪಾರ್ವತಿ ಹಾಗೂ ಫಾತಿಮಾ ಬಲಿಯಾದರು. ನಕ್ಸಲ್ ಚಳವಳಿಯಲ್ಲಿ ಹಲವರ ಹತ್ಯೆಯಾಗಿದೆ, ಈ ಹಿಂದೆ 13 ಮತ್ತು ಈಗ 6 ಮಂದಿ ಸೇರಿ 19 ಮಂದಿ ಶರಣಾಗಿದ್ದಾರೆ. ಮಲೆನಾಡಿನಲ್ಲಿ ನಕ್ಸಲ್ ಚಳವಳಿ ಅಂತ್ಯ ಕಂಡಿದೆ.