8 ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ । 21 ಕೋಟಿಗೂ ಹೆಚ್ಚು ಮೊತ್ತದ ನಗದು, ಆಸ್ತಿ ಪತ್ತೆ

| Published : Jan 09 2025, 08:30 AM IST

Karnataka Lokayukta

ಸಾರಾಂಶ

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಪೊಲೀಸರು ಆದಾಯಕ್ಕಿಂತ ಹೆಚ್ಚಿನ ಆದಾಯ ಗಳಿಕೆ ಆರೋಪದ ಮೇಲೆ ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, 21.05 ಕೋಟಿ ರು. ಮೊತ್ತದ ನಗದು, ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಬೆಂಗಳೂರು :  ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಪೊಲೀಸರು ಆದಾಯಕ್ಕಿಂತ ಹೆಚ್ಚಿನ ಆದಾಯ ಗಳಿಕೆ ಆರೋಪದ ಮೇಲೆ ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, 21.05 ಕೋಟಿ ರು. ಮೊತ್ತದ ನಗದು, ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಬುಧವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ಕೈಗೊಂಡಿದ್ದು, ತಡರಾತ್ರಿವರೆಗೆ ತಪಾಸಣೆ ಕೈಗೊಂಡು ಹಲವು ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಬೀದರ್‌, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ.

ಅಧಿಕಾರಿಗಳ ಅಕ್ರಮ ಅಸ್ತಿಯ ವಿವರ

1. ಎಂ.ಶೋಭಾ, ಜಂಟಿ ಆಯುಕ್ತೆ, ಸಾರಿಗೆ ಇಲಾಖೆ, ಬೆಂಗಳೂರು

6 ಕಡೆ ಶೋಧ. 1 ಸೈಟ್‌, 1 ಮನೆ, 21 ಎಕ್ರೆ ಕೃಷಿ ಜಮೀನು ಸೇರಿ 45.36 ಲಕ್ಷ ರು.ನ ಸ್ಥಿರಾಸ್ತಿ ಪತ್ತೆ. 60 ಲಕ್ಷ ರು. ಮೌಲ್ಯದ ಚಿನ್ನಾಭರಣ, 20 ಲಕ್ಷ ರು.ನ ವಾಹನಗಳು. ಒಟ್ಟು 3.09 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.

2. ಎಸ್‌.ಎನ್‌.ಉಮೇಶ್‌, ತಾಲೂಕು ಆರೋಗ್ಯಾಧಿಕಾರಿ, ಕಡೂರು, ಚಿಕ್ಕಮಗಳೂರು

2 ಸ್ಥಗಳಲ್ಲಿ ಶೋಧ. 2 ಸೈಟ್‌, 1 ಮನೆ, 8 ಎಕರೆ ಜಮೀನು ಸೇರಿ 56.78 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ದಾಖಲೆಗಳು ಲಭ್ಯ. 68.41 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 1.25 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.

3. ರವೀಂದ್ರ ಮೆಟ್ರೆ, ಸಹಾಯಕ ಕಾರ್ಯಪಾಪಕ ಎಂಜಿನಿಯರ್‌, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಬಸವಕಲ್ಯಾಣ, ಬೀದರ್‌

5 ಕಡೆ ಪರಿಶೀಲನೆ. 5 ಸೈಟ್‌, 2 ಮನೆ, 7 ಎಕರೆ ಜಮೀನು ಸೇರಿ 1.72 ಕೋಟಿ ರು. ಮೌಲ್ಯದ ಸ್ಥಿರಾಸ್ತಿ, 53.60 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 2.25 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.

4. ಪ್ರಕಾಶ್‌ ಗಾಯಕವಾಡ್‌, ತಹಸೀಲ್ದಾರ್‌, ಖಾನಾಪೂರ, ಬೆಳಗಾವಿ

8 ಕಡೆ ಕಾರ್ಯಾಚರಣೆ. 2 ಸೈಟ್‌, 3 ಮನೆ, 28 ಎಕರೆ ಕೃಷಿ ಜಮೀನು ಸೇರಿ 3.58 ಕೋಟಿ ರು. ಮೌಲ್ಯದ ಸ್ಥಿರಾಸ್ತಿ. 83.12 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 4.41 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.

5. ಎಸ್‌.ರಾಜು, ಯಲಹಂಕ ಆರ್‌ಟಿಒ (ನಿವೃತ್ತ), ಬೆಂಗಳೂರು

5 ಕಡೆ ಶೋಧ. 1 ಸೈಟ್‌, 2 ಮನೆ, 4 ಎಕರೆ ಕೃಷಿ ಜಮೀನು ಸೇರಿ 4.27 ಕೋಟಿ ರು. ಸ್ಥಿರಾಸ್ತಿ, 74.85 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 5.02 ಕೋಟಿ ರು. ಮೌಲ್ಯದ ಆಸ್ತಿ ಲಭ್ಯ.

6. ಹುಚ್ಚಪ್ಪ ಎ ಬಂಡಿವಡ್ಡರ್‌, ಸಹಾಯಕ ಕಾರ್ಯಪಾಲಕ ಎಂಜಿನಿಜಿಯರ್‌ (ಪ್ರಭಾರ), ಪುರಸಭೆ, ಗದಗ

5 ಕಡೆ ತಪಾಸಣೆ. 1 ಸೈಟ್‌, 1 ಕಾಂಪ್ಲೆಕ್ಸ್‌, 2 ಮನೆ ಸೇರಿ 76.50 ಲಕ್ಷ ರು. ಮೌಲ್ಯದ ಚರಾಸ್ತಿ, 82.46 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ಒಟ್ಟು 1.58 ಕೋಟಿ ರು. ಮೌಲ್ಯದ ಆಸ್ತಿ ಲಭ್ಯ.

7. ಆರ್‌.ಎಚ್‌.ಲೋಕೇಶ್‌, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಬಳ್ಳಾರಿ

5 ಸ್ಥಳಗಳಲ್ಲಿ ಶೋಧನಾ ಕಾರ್ಯ. 2 ಸೈಟ್‌, 1 ಮನೆ, 6 ಎಕರೆ ಕೃಷಿ ಜಮೀನು ಸೇರಿ 1.46 ಕೋಟಿ ರು. ಮೌಲ್ಯದ ಸ್ಥಿರಾಸ್ತಿ, 57.60 ಲಕ್ಷ ರು. ಮೌಲ್ಯದ ಚರಾಸ್ತಿ ಲಭ್ಯ. ಒಟ್ಟು 2.03 ಕೋಟಿ ರು . ಮೌಲ್ಯದ ಆಸ್ತಿ ಪತ್ತೆ.

8. ಹುಲಿರಾಜ್‌, ಕಿರಿಯ ಎಂಜಿನಿಯರ್‌, ಜೆಸ್ಕಾಂ, ರಾಯಚೂರು

2 ಸ್ಥಳಗಳಲ್ಲಿ ಶೋಧನಾ ಕಾರ್ಯ. 3 ಸೈಟ್‌, 2 ಮನೆ, 24 ಎಕರೆ ಕೃಷಿ ಜಮೀನು ಸೇರಿ 1.20 ಕೋಟಿ ರು. ಮೌಲ್ಯದ ಸ್ಥಿರಾಸ್ತಿ, 17.88 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 1.38 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.

ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಎಂ.ಶೋಭಾ, ಚಿಕ್ಕಮಗಳೂರು ಜಿಲ್ಲೆಯ ಕಡೂರು ಆರೋಗ್ಯ ಕಲ್ಯಾಣಧಿಕಾರಿ ಡಾ.ಎಸ್‌.ಎನ್‌.ಉಮೇಶ್‌, ಬೀದರ್‌ ಜಿಲ್ಲೆ ಬಸವಕಲ್ಯಾಣದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರವೀಂದ್ರ ಮೆಟ್ರೆ, ಬೆಳಗಾವಿಯಲ್ಲಿ ಖಾನಾಪೂರ ತಾಲೂಕು ತಹಸೀಲ್ದಾರ್‌ ಪ್ರಕಾಶ್‌ ಶ್ರೀಧರ್ ಗಾಯಕವಾಡ್‌, ಬೆಂಗಳೂರು ಆರ್‌ಟಿಓ ಅಧಿಕಾರಿ (ನಿವೃತ್ತ) ಎಸ್‌.ರಾಜು, ಗದಗ ಪುರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪ್ರಭಾರ) ಹುಚ್ಚಪ್ಪ ಎ.ಬಂಡಿವಡ್ಡರ್‌, ಬಳ್ಳಾರಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆರ್‌.ಎಚ್‌.ಲೋಕೇಶ್‌, ರಾಯಚೂರು ಜಿಲ್ಲೆಯ ಜೆಸ್ಕಾಂ ಕಿರಿಯ ಎಂಜಿನಿಯರ್‌ ಹುಲಿರಾಜ್‌ ನಿವಾಸಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ.

ದಾಳಿ ನಡೆದ ಎಂಟು ಅಧಿಕಾರಿಗಳ ಪೈಕಿ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಎಂ.ಶೋಭಾ ಬಳಿ 1.60 ಕೋಟಿ ರು. ಬ್ಯಾಂಕ್‌ ಠೇವಣಿ, 60 ಲಕ್ಷ ರು. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದ್ದು, ಆರ್‌ಟಿಓ ಅಧಿಕಾರಿ (ನಿವೃತ್ತ) ಎಸ್‌.ರಾಜು ಬಳಿ 57.72 ಲಕ್ಷ ರು. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ರಾಜು ಅವರ ಬಳಿ ಅತಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದ್ದು, ಒಟ್ಟು 5.02 ಕೋಟಿ ರು. ಮೌಲ್ಯದ ಆಸ್ತಿ ಸಿಕ್ಕಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ಅಸಮತೋಲನ ಆದಾಯದ ಕುರಿತು ಲಭ್ಯವಾದ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದಾಖಲೆಗಳ ಪರಿಶೀಲನೆ ಕಾರ್ಯ ತಡರಾತ್ರಿವರೆಗೆ ನಡೆದಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.