ಸಾರಾಂಶ
ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರ ಗುರುತಿಸಿರುವ 9 ಮತ್ತು 10ನೇ ಸಂಖ್ಯೆಯ ಜಾಗದಲ್ಲಿ ಶನಿವಾರ ಉತ್ಖನನ ನಡೆಸಿದ್ದು, ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರ ಗುರುತಿಸಿರುವ 9 ಮತ್ತು 10ನೇ ಸಂಖ್ಯೆಯ ಜಾಗದಲ್ಲಿ ಶನಿವಾರ ಉತ್ಖನನ ನಡೆಸಿದ್ದು, ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಭಾನುವಾರ, ರಜೆಯ ದಿನವಾಗಿದ್ದು, ಕಾರ್ಯಾಚರಣೆ ನಡೆಯುವುದು ಅನುಮಾನವಾಗಿದೆ.
ಉತ್ಖನನ ಕಾರ್ಯಾಚರಣೆಯ 5ನೇ ದಿನವಾದ ಶನಿವಾರ, ಬೆಳಗ್ಗೆ 11.45ರ ಸುಮಾರಿಗೆ ಅನಾಮಿಕ ತೋರಿಸಿದ 9ನೇ ಪಾಯಿಂಟ್ ನಲ್ಲಿ ಅಗೆತ ನಡೆಸಲಾಯಿತು. ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸನಿಹ, ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಈ ಜಾಗವಿದೆ. ಮೊದಲು ಮೂರರಿಂದ ನಾಲ್ಕು ಅಡಿಗಳ ತನಕ ಕಾರ್ಮಿಕರು ಅಗೆದರೆ, ನಂತರ ಹಿಟಾಚಿ ಬಳಸಿ ಸುಮಾರು 6-7 ಅಡಿಗಳ ತನಕ ಅಗೆಯಲಾಯಿತು. ಸುಮಾರು 2 ಗಂಟೆ ಅಗೆತ ಕಾರ್ಯ ನಡೆಯಿತು. ಆದರೆ, ಯಾವುದೇ ಎಲುಬುಗಳು ಪತ್ತೆಯಾಗಲಿಲ್ಲ. ಅಂತಿಮವಾಗಿ ಗುಂಡಿಯನ್ನು ಮುಚ್ಚಲಾಯಿತು.
ಸಂಜೆ 4.30ರ ಬಳಿಕ 9ನೇ ಗುಂಡಿಯಿಂದ ಅನತಿ ದೂರದಲ್ಲಿದ್ದ 10ನೇ ಪಾಯಿಂಟ್‌ನ್ನು ಅಗೆಯಲಾಯಿತು. ಈ ಸಂದರ್ಭ ಗುಡುಗು-ಮಿಂಚು ಸಹಿತ ವಿಪರೀತ ಮಳೆ ಸುರಿಯುತ್ತಿತ್ತು. ಮಳೆ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿದರೂ 10ನೇ ಜಾಗವನ್ನು ಅಗೆಯುವ ಕಾರ್ಯ ಮುಂದುವರಿಸಲಾಯಿತು. ಸುಮಾರು 5-6 ಅಡಿಗಳಷ್ಟು ಅಗೆಯಲಾಯಿತು. ಆದರೆ, ಇಲ್ಲೂ ಯಾವುದೇ ಅಸ್ಥಿಗಳು ಪತ್ತೆಯಾಗಲಿಲ್ಲ. ಹೀಗಾಗಿ, ಇಲ್ಲಿಯೂ ಗುಂಡಿಯನ್ನು ಮುಚ್ಚಲಾಗಿದೆ.
ಇದಕ್ಕೂ ಮೊದಲು, 9 ಮತ್ತು 10ನೇ ಪಾಯಿಂಟ್‌ನಲ್ಲಿ ಭಾರಿ ಪ್ರಮಾಣದಲ್ಲಿ ಅಸ್ಥಿಗಳು ಸಿಗಬಹುದೆಂದು ಪ್ರಚಾರ ಮಾಡಲಾಗಿದ್ದು, ಭಾರೀ ಕುತೂಹಲ ಮೂಡಿಸಿತ್ತು. ಆದರೆ, ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.
ಈ ಮಧ್ಯೆ, ಭಾನುವಾರ ರಜಾದಿನವಾಗಿರುವುದರಿಂದ ಉಳಿದ 3 ಜಾಗಗಳನ್ನು ಅಗೆಯುವ ಕಾರ್ಯ ನಡೆಯುವುದು ಅನುಮಾನವಾಗಿದೆ. ಸೋಮವಾರ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಯಿದೆ.
ವ್ಯಾಪಾರಕ್ಕೆ ಹೊಡೆತ; ವ್ಯಾಪಾರಿಗಳ ಬೇಸರ:
ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಅಗೆತ ಕಾರ್ಯದ ಸಂದರ್ಭ ಗಲಭೆಯಾದೀತು ಎಂಬ ಕಾರಣದಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ, ಸ್ನಾನಘಟ್ಟದ ದಡದಲ್ಲಿರುವ ಅನೇಕ ಅಂಗಡಿ, ಹೋಟೆಲ್‌ಗಳಿಗೆ ಒಂದು ವಾರದಿಂದೀಚೆಗೆ ವ್ಯಾಪಾರ ಕಡಿಮೆಯಾಗಿದೆ ಎಂದು ವ್ಯಾಪಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಶನಿವಾರ ನಡೆದ ಅಗೆತ ರಾಜ್ಯ ಹೆದ್ದಾರಿಯ ಬದಿಯಲ್ಲಿಯೇ ಆಗಿದ್ದರೂ ಜನಸಂದಣಿ ಹಿಂದಿನಂತೆ ಇರಲಿಲ್ಲ. ಇದ್ದ ಮಾಧ್ಯಮದವರಲ್ಲೂ ಹಿಂದಿನ ಉತ್ಸಾಹ ಗೋಚರಿಸಲಿಲ್ಲ.
ಕೇಸು ವಾಪಸ್‌ಗೆ ದೂರುದಾರಗೆ ಬೆದರಿಕೆ: ದೂರು
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹ ಹೂತುಹಾಕಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಓರ್ವ ಅಧಿಕಾರಿ ದೂರುದಾರನಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಈ ಕುರಿತು ದೂರುದಾರನ ಪರ ವಕೀಲರು ಎಸ್‌ಐಟಿ ಮುಖ್ಯಸ್ಥರಿಗೆ ಶನಿವಾರ ದೂರು ನೀಡಿದ್ದಾರೆ. ಇನ್‌ಸ್ಪೆಕ್ಟರ್ ಹಂತದ ಅಧಿಕಾರಿಯೊಬ್ಬರು ದೂರುದಾರನಿಗೆ, ದೂರು ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದಾರೆ. ದೂರು ವಾಪಸ್ ಪಡೆಯದಿದ್ದರೆ ಶಿಕ್ಷೆಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.