ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು

| N/A | Published : Aug 02 2025, 11:28 AM IST

Dharmasthala

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಎಸ್‍ಐಟಿ ತನಿಖೆ ವೇಳೆ ಪಾಯಿಂಟ್ ನಂ.1ನಲ್ಲಿ ಸಿಕ್ಕ ಡೆಬಿಟ್, ಪಾನ್ ಕಾರ್ಡ್‍ನ ವಾರಸುದಾರರ ವಿಳಾಸ ಪತ್ತೆ

  ದಾಬಸ್‍ಪೇಟೆ :  ಧರ್ಮಸ್ಥಳ ಗ್ರಾಮದಲ್ಲಿ ಎಸ್‍ಐಟಿ ತನಿಖೆ ವೇಳೆ ಪಾಯಿಂಟ್ ನಂ.1ನಲ್ಲಿ ಸಿಕ್ಕ ಡೆಬಿಟ್, ಪಾನ್ ಕಾರ್ಡ್‍ನ ವಾರಸುದಾರರ ವಿಳಾಸ ಪತ್ತೆಯಾಗಿದ್ದು, ನೆಲಮಂಗಲ ತಾಲೂಕಿನ ದಾಬಸ್‍ಪೇಟೆ ಪಟ್ಟಣದ ನಿವಾಸಿಯಾಗಿದ್ದ ಸುರೇಶ್ ಎಂಬುವರಿಗೆ ಸೇರಿದ್ದು ಅಂತ ತಿಳಿದು ಬಂದಿದೆ.

ಸುರೇಶ್ ಪರ್ಸ್‍ನಲ್ಲಿ 2 ಪಾನ್ ಕಾರ್ಡ್‌ ಪತ್ತೆಯಾಗಿತ್ತು. ಒಂದು ಸುರೇಶ್‌ರದ್ದು, ಮತ್ತೊಂದು ಆತನ ತಾಯಿ ಸಿದ್ದಲಕ್ಷ್ಮಮ್ಮ ಅವರದ್ದು. ಕಳೆದ 2 ವರ್ಷಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ಸುರೇಶ್ ಆಗ ಧರ್ಮಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ. ನಂತರ ಜಾಂಡೀಸ್ ಹೆಚ್ಚಾದ ಹಿನ್ನೆಲೆಯಲ್ಲಿ ಮನೆಗೆ ವಾಪಸಾಗಿ ಚಿಕಿತ್ಸೆ ಪಡೆಯುತ್ತಿದ್ದು, 2025ರ ಮಾರ್ಚ್‌ನಲ್ಲಿ ಸುರೇಶ್ (29) ಸಾವನ್ನಪ್ಪಿದ್ದರು.

ಎಟಿಎಂ, ಪಾನ್‌ಕಾರ್ಡ್ ನಮ್ಮವೇ:

ಮೃತ ಸುರೇಶ್ ತಾಯಿ ಸಿದ್ದಲಕ್ಷ್ಮಮ್ಮ ಮಾಧ್ಯಮದ ಜತೆ ಮಾತನಾಡಿ, ನಾನು ದಾಬಸ್‍ಪೇಟೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಅಲ್ಲಿ ಸಿಕ್ಕ ದಾಖಲೆಗಳು ನಮ್ಮವೇ. ಈ ಹಿಂದೆ ಧರ್ಮಸ್ಥಳಕ್ಕೆ ಹೋದಾಗ ಕಳೆದು ಹೋಗಿದೆ ಎಂದು ನನ್ನ ಮಗ ಸುರೇಶ್ ಹೇಳಿದ್ದ. ನನ್ನ ಎಟಿಎಂ ಕಾರ್ಡ್ ಸುರೇಶ್ ಬಳಿ ಇತ್ತು, ಅಲ್ಲಿ ಹೋದಾಗ ಕಳೆದು ಹೋಗಿದೆ. ಧರ್ಮಸ್ಥಳ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಸುರೇಶ್‌ ದಾಬಸ್‌ಪೇಟೆಯಲ್ಲಿ ಮೃತಪಟ್ಟ. ಆತನ ಅಂತ್ಯಸಂಸ್ಕಾರವನ್ನು ನಮ್ಮ ತವರೂರಾದ ಲಕ್ಕೂರಿನಲ್ಲಿ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆಗಾಗ ಧರ್ಮಸ್ಥಳಕ್ಕೆ ತೆರಳುತ್ತಿದ್ದ:

ಮೃತ ಸುರೇಶ್ ಅಕ್ಕ ರೂಪಾ ಮಾತನಾಡಿ, ನನ್ನ ತಮ್ಮ ಸ್ನೇಹಿತರ ಜೊತೆಗೂಡಿ ಸಾಕಷ್ಟು ಬಾರಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ, ಆಗ ಧರ್ಮಸ್ಥಳದಲ್ಲಿ ಮಿಸ್ ಆಗಿರಬೇಕು. ನಮ್ಮ ತಾಯಿಯ ಎಟಿಎಂ ಕಾರ್ಡ್ ಎಲ್ಲೋ ಕಳೆದು ಹೋಗಿದೆ ಎಂದು ಹೇಳಿ ಮನೆಯಲ್ಲಿಲ್ಲಾ ಹುಡುಕಾಡಿದ್ದ. ಆಗ ನಮ್ಮ ತಾಯಿ ಕಳೆದ ಹೋದ ಎಟಿಎಂ ಕಾರ್ಡ್‍ನ್ನು ಬ್ಲಾಕ್ ಮಾಡಿಸಿ ಹೊಸ ಎಟಿಎಂ ಕಾರ್ಡ್ ತೆಗೆದುಕೊಂಡಿದ್ದರು. ಎಟಿಎಂ, ಪಾನ್ ಕಾರ್ಡ್ ನಮ್ಮ ಕುಟುಂಬಕ್ಕೆ ಸೇರಿದ್ದಾಗಿವೆ ಹೊರತು ಧರ್ಮಸ್ಥಳದ ಘಟನೆಗೆ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

Read more Articles on